For the best experience, open
https://m.samyuktakarnataka.in
on your mobile browser.

ಉತ್ತಮವಾದ ದಾನ ಯಾವುದು?

04:00 AM Nov 21, 2024 IST | Samyukta Karnataka
ಉತ್ತಮವಾದ ದಾನ ಯಾವುದು

ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಪಾಂಡವ ಜ್ಯೇಷ್ಠನೂ ತನ್ನ ಮೊಮ್ಮಗನೂ ಆದ ಯುಧಿಷ್ಠಿರನಿಗೆ ರಾಜಧರ್ಮವನ್ನೂ ಬೋಧಿಸುವ ಸಂದರ್ಭದಲ್ಲಿ, ಯುಧಿಷ್ಠಿರ ದಾನ ನೀಡುವ ಕುರಿತು ಎತ್ತುವ ಪ್ರಶ್ನೆಗಳಿಗೆ ಭೀಷ್ಮ ನೀಡುವ ಉತ್ತರಗಳು ಸಾರ್ವಕಾಲಿಕವೂ ಮೌಲಿಕವೂ ಆಗಿದ್ದು, ದಾನದ ಮಹತ್ವವನ್ನು ನಮಗೆ ತಿಳಿಸಿ ಕೊಡುತ್ತವೆ.
ವಸ್ತುತಃ ದಾನವೆಂದರೇನು? ದಾನಗಳಲ್ಲಿ ಎಷ್ಟು ವಿಧ? ಎಂದು ಕೇಳಿದ ಯುಧಿಷ್ಠಿರನಿಗೆ ಭೀಷ್ಮರು ಹೇಳುತ್ತಾರೆ;
ಪ್ರತಿಫಲಾಪೇಕ್ಷೆಯಿಲ್ಲದೆ ತನ್ನಲ್ಲಿವುದನ್ನು ಸತ್ಪಾತ್ರರಿಗೆ ಶುದ್ಧಮನಸ್ಕಾನಾಗಿ ಕೊಡುವುದೇ ದಾನ. ಹಲವಾರು ವಿಧದ ದಾನಗಳಿವೆ, ಅದರಲ್ಲಿ ಪ್ರಮುಖವು ದಶದಾನ, ಕನ್ಯಾದಾನ, ಗೋದಾನ, ವಿದ್ಯಾದಾನ, ವೇಣಿದಾನ, ಅನ್ನದಾನ ಇತ್ಯಾದಿ.
ದಾನ ನೀಡುವವರು ಹಲವು ಕಾರಣಗಳಿಗಾಗಿ ದಾನ ಮಾಡುತ್ತಾರೆ. ಕೆಲವರು ಭಯದಿಂದ ತಮ್ಮ ಸೊತ್ತನ್ನು ಇತರರಿಗೆ ಕೊಡುತ್ತಾರೆ. ಕೆಲವರು ಪ್ರಲೋಭನೆಗಳಿಗೊಳಪಟ್ಟು ದಾನವನ್ನು ಮಾಡುತ್ತಾರೆ. ಇನ್ನೂ ಕೆಲವರು ಪರಪ್ರತ್ಯಯದಿಂದ ಅಂದರೆ ಯಾರೋ ಹೇಳಿದರೆಂದು ದಾನ ಮಾಡುತ್ತಾರೆ. ಇನ್ನು ಹಲವರು ತಮ್ಮಲ್ಲಿ ಹೇರಳವಾಗಿ ಇರುವುದು ಕೆಟ್ಟು ಹೋಗುತ್ತದೆ ಅನ್ನುವ ಕಾರಣದಿಂದ ದಾನ ಮಾಡುತ್ತಾರೆ. ಈ ವಿಧವಾದ ದಾನಗಳು ಎರಡನೇ ಸ್ತರದವು.
ಹಿರಿಯರು ಏನಾದರು ಹೇಳುವರೆಂದೋ, ಪಾಪ ಪ್ರಜ್ಞೆಯಿಂದ ಹೊರಬರಲು ಕೊಡುವ ದಾನವೋ ಅಥವಾ ಪ್ರಭುತ್ವವು ದಂಡಿಸುವುದೆಂಬ ಭಯದಿಂದಲೊ ತಮ್ಮ ಸಂಪತ್ತನ್ನು ದಾನ ಮಾಡುವ ವ್ಯಕ್ತಿಗಳಿರುತ್ತಾರೆ. ಇನ್ನೂ ಕೆಲವರು ನರಕಕ್ಕೆ ಹೋಗುತ್ತೇವೆನ್ನುವ ಭಯದಿಂದಲೂ ಸಹ ದಾನಧರ್ಮಾದಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ವಿಧವಾದ ದಾನಗಳಿಂದ ಸಮಾಜಕ್ಕೆ ಉಪಕಾರವಾಗುತ್ತದೆನ್ನುವುದೇನೊ ನಿಜ, ಆದರೆ ಇದರಿಂದ ವ್ಯಕ್ತಿಗೆ ದೊರೆಯಬೇಕಾದ ಸಂಸ್ಕಾರ ಮಾತ್ರ ಸಿಗುವುದಿಲ್ಲ. ಕೆಲವರು ಏನೋ ಒಂದು ಬಯಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಾನವನ್ನು ಮಾಡುತ್ತಿರುತ್ತಾರೆ, ಅಂದರೆ ಇಂದು ನಾವು ದಾನ ಮಾಡಿದರೆ ಅದರಿಂದ ನಾಳೆ ಬೇರೊಂದು ರೂಪದಲ್ಲಿ ಅದಕ್ಕೆ ತಕ್ಕ ಪ್ರತಿಫಲವು ದೊರೆಯುತ್ತದೆನ್ನುವ ಲೆಕ್ಕದಲ್ಲಿ ಅವರು ದಾನ ಮಾಡುತ್ತಿರುತ್ತಾರೆ. ಅಥವಾ ತನಗೆ ಲೋಕದಲ್ಲಿ ಎಣೆಯಿಲ್ಲದ ಕೀರ್ತಿ ಬರಬಹುದೆನ್ನುವ ಆಸೆಯಿಂದಲೂ ಕೂಡ ಅವರು ದಾನ ಮಾಡುತ್ತಿರಬಹುದು. ಅದು ಏನೇ ಇರಲಿ, ಪ್ರತಿಫಲಾಪೇಕ್ಷೆಯಿಂದ ಕೈಗೊಳ್ಳುವ ದಾನವು ಉತ್ತಮವಾದ ದಾನವೆನಿಸಿಕೊಳ್ಳುವುದಿಲ್ಲ. ಯಾರೋ ಹೇಳಿದರೆಂದು ಮಾಡುವ ದಾನವೂ ಕೂಡ ಫಲ ಕೊಡುವದಿಲ್ಲ. ಕರುಣೆಯಿಂದ ಮಾಡುವ ದಾನವೂ ಫಲ ಕೊಡಲಾರದು. ಸಮರ್ಪಣಾ ಭಾವದಿಂದ ಮಾಡುವುದೇ ನಿಜವಾದ ದಾನ. ಸಮರ್ಪಣೆ ಎಂದರೆ ಪುನಃ ಹಿಂತಿರುಗಿ ಕೊಡುವುದು. ಕನಕದಾಸರು ಹೇಳಿದಂತೆ "ಕೆರೆಯ ನೀರನು ಕೆರೆಗೆ ಚೆಲ್ಲಿ " ಅಂದರೆ ದೇವರು ಕೊಟ್ಟದ್ದನ್ನು ದೇವರಿಗೆ ಸಮರ್ಪಿಸಬೇಕು, ಹಾಗೆ ನನ್ನದು ಏನೂ ಇಲ್ಲ ಅದು ಅವರದು ಎನ್ನುವಷ್ಟು ನಿಸ್ಪೃಹತೆಯಿಂದ ಕೊಡುವ ದಾನವೇ ಉತ್ತಮ ದಾನ. ‘ಇದಂ ನ ಮಮ’ ಎನ್ನುವ ದೃಷ್ಟಿ ಇರಬೇಕು.
ಸಮರ್ಪಣಾ ಮನೋಭಾವದಿಂದ ದಾನಮಾಡಿದರೆ, ದೇವರು ಕೊಟ್ಟದ್ದನ್ನು ಇಮ್ಮಡಿ ಮಾಡಿಕೊಡುವ ಎನ್ನುವ ಮಾತಿನಂತೆ ಜನ್ಮ ಜನ್ಮಾಂತರದಲ್ಲೂ ಅದರ ಫಲ ಜೀವಿಗೆ ಸಿಗುತ್ತದೆ.