ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ: ಆತಂಕಗೊಂಡ ಜನ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಕುಮಟಾ ಸೇರಿದಂತೆ ಕೆಲ ತಾಲ್ಲೂಕುಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಆತಂಕಗೊಂಡ ಘಟನೆ ಭಾನುವಾರ ನಡೆದಿದೆ.
ಶಿರಸಿ ತಾಲೂಕಿನ ಸಂಪಖಂಡ, ಮತ್ತಿಘಟ್ಟಾ ಸೇರಿದಂತೆ ಕೆಲವು ಗ್ರಾಮಗಳು ಹಾಗೂ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿ, ಹೆಗ್ಗರಣಿ, ಹೇರೂರು, ಕುಮಟಾದ ಮುರೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಧ್ಯಾಹ್ನದ ವೇಳೆಗೆ ಏಕಾಏಕಿ ಭೂಮಿ ಕಂಪಿಸಿದಂತಾಗಿದ್ದು, ಹಲವರು ಭೂಕಂಪ ಇರಬಹುದೆಂದು ಮನೆಯಿಂದ ಹೊರಬಂದಿದ್ದಾರೆ.
ಮಧ್ಯಾಹ್ನ ಸುಮಾರು ೧೨ ಗಂಟೆ ವೇಳೆಗೆ ಮನೆಯಲ್ಲಿದ್ದವರಿಗೆ ಏಕಾಏಕಿ ಮನೆಯ ವಸ್ತುಗಳು ಕಂಪಿಸಿದ ಈ ಅನುಭವವಾಗಿದೆ. ಹಲವರಿಗೆ ಕುಳಿತ ಖುರ್ಚಿ, ಸೋಫಾ ಅಲುಗಾಡಿದ ಅನುಭವವಾಗಿದ್ದು, ಭೂಕಂಪ ಉಂಟಾಗಿರಬಹುದೆಂದು ಮನೆಯಿಂದ ಹೊರಗೆ ಬಂದಿದ್ದಾರೆ. ಅಲ್ಲದೇ ಅಕ್ಕಪಕ್ಕದವರೂ ಸಹ ತಮಗೂ ಅದೇ ರೀತಿ ಅನುಭವ ಆಗಿದ್ದನ್ನು ಹೇಳಿಕೊಂಡಿದ್ದು ಜನರು ಕಂಗಾಲಾಗಿದ್ದಾರೆ.
ಕೆಲವೆಡೆ ತಗಡಿನ ಮನೆಯಲ್ಲಿದ್ದವರಿಗೆ ಭೂಮಿ ಕಂಪಿಸಿದ ಸ್ಪಷ್ಟ ಅನುಭವವಾಗಿದ್ದು, ಕೆಲಕಾಲ ಮನೆಯೊಳಗೆ ಹೋಗದೇ ಅಪಾಯವಾಗುವ ಆತಂಕದಲ್ಲಿ ಹೊರಗೆ ಕಾಲ ಕಳೆದಿದ್ದಾರೆ. ಆದರೆ ಇದುವರೆಗೂ ಅಧಿಕೃತವಾಗಿ ಯಾವುದೇ ಇಲಾಖೆಯಿಂದ ಭೂಕಂಪನದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.