For the best experience, open
https://m.samyuktakarnataka.in
on your mobile browser.

ಉತ್ತರಾಖಂಡ ಅಭಿವೃದ್ಧಿ ತಂದ ಗಂಡಾಂತರ

12:04 PM Dec 02, 2023 IST | Samyukta Karnataka
ಉತ್ತರಾಖಂಡ ಅಭಿವೃದ್ಧಿ ತಂದ ಗಂಡಾಂತರ

ಸುರಂಗದಲ್ಲಿ ಕಾರ್ಮಿಕರು ಸಿಲುಕಿದ್ದು ಸಾಕಷ್ಟು ಸುದ್ದಿಯಾಯಿತು. ಆದರೆ ಈ ಹಿಂದೆಯೂ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ. ಆದರೆ ಈ ದಶಕದಲ್ಲೇ ಅತ್ಯಧಿಕ ದುರಂತಗಳು ಸಂಭವಿಸಿರುವುದೂ ಗಮನಾರ್ಹ. ಈ ಪ್ರದೇಶದಲ್ಲಿ ಸುರಂಗ ಮಾರ್ಗಗಳ ನಿರ್ಮಾಣ, ಸ್ಫೋಟ, ಭೂ ಅಗೆತ, ಕೊರೆತ, ನಿರ್ಮಾಣ ಸಾಮಗ್ರಿಗಳ ಸುರಿಯುವಿಕೆ, ಬೇಕಾಬಿಟ್ಟಿ ನಿರ್ಮಾಣ ಕಾರ್ಯ ಇತ್ಯಾದಿಗಳೆಲ್ಲವೂ ಜೋರಾಗಿ, ಎಡೆಬಿಡದೆ ನಡೆಯುತ್ತಿವೆ.

ಉತ್ತರಕಾಶಿಯ ಸಿಲ್ಕ್ಯಾರಾ-ಬಾರ್‌ಕೋಟ್ ಸುರಂಗಮಾರ್ಗದಲ್ಲಿ ೧೭ ದಿನ ಸಿಲುಕಿದ್ದ ೪೧ ಕಾರ್ಮಿಕರನ್ನು ಕೊನೆಗೂ ರಕ್ಷಿಸಲಾಗಿದೆ. ಕಾರ್ಯಾಚರಣೆ ಯಶಸ್ವಿಯಾಗಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.
ಇದೀಗ ಪ್ರಕರಣ ಸುಖಾಂತ್ಯ ಕಂಡ ಬಳಿಕವಾದರೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯಾಕೆ ಹೀಗಾಯಿತು? ಎಲ್ಲಿ ಏನು ಎಡವಟ್ಟಾಯಿತು ಇತ್ಯಾದಿ ಅಹಿತಕರವಾದ ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ. ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾಗ ಈ ಪ್ರಶ್ನೆಗಳನ್ನು ಎತ್ತಿದ್ದರೆ ಈಗ ಇದೆಲ್ಲ ಬೇಕಾ? ಕಾರ್ಮಿಕರ ಜೀವವೇ ಅಪಾಯದಲ್ಲಿದ್ದಾಗ ಯಾಕೀ ಅಪಸ್ವರ, ಅಪಸವ್ಯ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇತ್ತು. ಆದರೆ ಈ ಪ್ರಶ್ನೆಗಳಿಗೆ ಈಗಲಾದರೂ ಉತ್ತರ ಕಂಡುಕೊಳ್ಳದಿದ್ದರೆ ಮುಂದೆ ಇದೇ ರೀತಿಯ ಅಥವಾ ಇದಕ್ಕೂ ಭಯಂಕರವಾದ ಅಪಾಯವನ್ನು, ದುರಂತಗಳನ್ನು ನಾವು ಭವಿಷ್ಯದಲ್ಲಿ ಕಾಣಬೇಕಾಗುತ್ತದೆ.
ಮೊದಲು, ಪ್ರಸ್ತುತ ದುರ್ಘಟನೆಯಿಂದಲೇ ಪ್ರಾರಂಭಿಸೋಣ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಯಮುನೋತ್ರಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಸಿಲ್ಕ್ಯಾರಾ ಸುರಂಗಮಾರ್ಗವೂ ಇದೇ ಯೋಜನೆಯಲ್ಲಿ ಬರುತ್ತದೆ. ಇದು ಚಾರ್‌ಧಾಮ್ ಪರಿಯೋಜನಾ (ಸಿಡಿಪಿ) ಯೋಜನೆಯ ಒಂದು ಭಾಗ. ಚಾರ್‌ಧಾಮ್ ಯಾತ್ರೆಯು ಅತ್ಯಂತ ಪ್ರಸಿದ್ಧವಾದುದು. ಇದನ್ನು ಕೈಗೊಳ್ಳುವ ಯಾತ್ರಿಕರ ಅನುಕೂಲಕ್ಕಾಗಿ ಸಿಡಿಪಿ ಯೋಜನೆಯನ್ನು ಅಲ್ಲಿನ ಸರ್ಕಾರ ಕೈಗೊಂಡಿದೆ. ಇದರಲ್ಲಿ ಅತ್ಯಂತ ಮುಖ್ಯವಾದುದು ರಸ್ತೆ ಅಗಲೀಕರಣದ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮತ್ತು ಅವಕಾಶ ಮಾಡಿಕೊಡುವುದಾಗಿದೆ. ಒಟ್ಟು ೯೦೦ ಕಿಮೀ ಉದ್ದದ ಮಾರ್ಗವಿದು. ಆದರೆ ಸದ್ಯ ರಸ್ತೆ ಕಿರಿದಾಗಿದ್ದು ದುರ್ಗಮವಾಗಿದೆ. ಈ ರಸ್ತೆಯನ್ನು ೧೨ ಮೀಟರ್‌ಗೆ ಅಗಲಗೊಳಿಸಿ ಪ್ರಯಾಣವನ್ನು ಸುಗಮಗೊಳಿಸಲು ನಿರ್ಧರಿಸಲಾಗಿದೆ. ಜನರ ಅನುಕೂಲ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಇದು ಒಳ್ಳೆಯದು ಎನಿಸಬಹುದು. ಆದರೆ ಇದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಪರಿಗಣಿಸದಿದ್ದರೆ ಅದಕ್ಕಾಗಿ ಭಾರಿ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಅನೇಕ ಬಾರಿ ದುರಂತಗಳು ಸಂಭವಿಸಿದ್ದರೂ ನಾವು ಎಚ್ಚೆತ್ತುಕೊಂಡಿಲ್ಲ. ಮೊದಲೇ ಗಿರಿ-ಕಣಿವೆಗಳಿಂದ ಕೂಡಿರುವ ಈ ಹಾದಿಯಲ್ಲಿ ರಸ್ತೆಯನ್ನು ವಿಸ್ತರಿಸಬೇಕೆಂದರೆ, ಪರ್ವತ ಶ್ರೇಣಿಗಳನ್ನು ಕೊರೆದು ಸುರಂಗ ದಾರಿಯನ್ನು ನಿರ್ಮಿಸಬೇಕಾಗುತ್ತದೆ.
ಹಾಗೆ ನೋಡಿದರೆ, ಇದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ೨೦೧೮ರ ಸುತ್ತೋಲೆ ಹಾಗೂ ಸುಪ್ರೀಂ ಕೋರ್ಟ್ ರಚಿಸಿದ್ದ ಉನ್ನತಾಧಿಕಾರದ ಸಮಿತಿಯ (ಎಚ್‌ಪಿಸಿ) ಶಿಫಾರಸಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪರಿಸರದಲ್ಲಿ ರಸ್ತೆ ಅಗಲೀಕರಣ ಮಾಡಲೇಬೇಕೆಂದರೆ ಅದರ ಅಗಲ ೫.೫ ರಿಂದ ೭ ಮೀಟರ್ ಒಳಗಿರಬೇಕು ಎಂಬುದು ಸಮಿತಿಯ ಶಿಫಾರಸು. ಆದರೆ ಈಗ ನಿರ್ಮಾಣ ಹಂತದಲ್ಲಿರುವ, ನವೆಂಬರ್ ೧೨ರಂದು ಅದರ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿ ೪೧ ಕಾರ್ಮಿಕರು ಸಿಲುಕಿದ್ದ ಸಿಲ್ಕ್ಯಾರಾ ಸುರಂಗ ಕೂಡ, ಇದೇ ವಿವಾದಾತ್ಮಕ ಸಿಡಿಪಿ ವ್ಯಾಪ್ತಿಗೆ ಬರುತ್ತದೆ. ಬೆಟ್ಟವನ್ನು ಕೊರೆದು ಒಟ್ಟು ೧೨ ಮೀಟರ್ ಅಗಲದ ಎರಡು ಲೇನ್‌ಗಳ ರಸ್ತೆ ಮಾರ್ಗವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಇದು ಇಲ್ಲಿನ ಕಣಿವೆ ಪ್ರದೇಶವನ್ನು ಅಸ್ಥಿರಗೊಳಿಸುತ್ತದೆ. ಅಲ್ಲದೆ ಯೋಜನೆಗಾಗಿ ಅಪಾರ ಪ್ರಮಾಣದ ಮರಗಿಡಗಳನ್ನು ಕಡಿಯಬೇಕಾಗುತ್ತದೆ. ಈ ಅಪಾಯವನ್ನು ಮನಗಂಡು ಸುಪ್ರೀಂ ಕೋರ್ಟ್ ೨೦೧೮ರಲ್ಲಿ ಇಷ್ಟು ಅಗಲದ ರಸ್ತೆ ನಿರ್ಮಾಣದ ಮೇಲೆ ನಿರ್ಬಂಧ ವಿಧಿಸಿತ್ತು. ಈಗಲೂ ಆ ಆದೇಶ ಜಾರಿಯಲ್ಲಿದೆ. ಅಂದರೆ ಈ ಪರಿಸರ ಸೂಕ್ಷö್ಮ ವಲಯದಲ್ಲಿ ಅರಣ್ಯನಾಶ, ಇಳಿಜಾರನ್ನು ಮನಬಂದಂತೆ ಕಡಿಯುವುದು, ನೀರ್ಗಲ್ಲ ನದಿಗಳ ಪಾತ್ರದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಸುರಿಯುವುದು-ಇತ್ಯಾದಿಗಳನ್ನೆಲ್ಲ ಇದೇ ಆದೇಶದಲ್ಲಿ ನಿಷೇಧಿಸಲಾಗಿದೆ.
ಆದರೆ ಸರ್ಕಾರ ಈ ಆದೇಶಕ್ಕೆ ಕ್ಯಾರೇ ಅಂದಿಲ್ಲ. ತನ್ನ ಪಾಡಿಗೆ ತಾನು ಹೆದ್ದಾರಿ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಹಾಗೆಂದು ಜನರು ಸುಮ್ಮನೆ ಕೂರಲಿಲ್ಲ. ೨೦೧೯ರಲ್ಲಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದರು. ಒಟ್ಟು ೯೦೦ ಕಿಮೀ ಉದ್ದದ ಈ ಹೆದ್ದಾರಿ ನಿರ್ಮಾಣಕ್ಕೆ ಸಾರಾಸಗಟಾಗಿ, ಎಗ್ಗಿಲ್ಲದೆ ಅನುಮತಿ ನೀಡಿರುವುದು ಅನಗತ್ಯ ಮಾತ್ರವಲ್ಲ ಇಡೀ ಪ್ರದೇಶವನ್ನು ಭೂಕುಸಿತ ಮತ್ತಿತರ ಅಪಾಯಕ್ಕೆ ನೂಕಿದಂತಾಗುತ್ತದೆ ಎಂಬುದು ಪಿಐಎಲ್‌ನ ಸಾರ. ಆದರೆ ಕೇಂದ್ರ ಹೆದ್ದಾರಿ ಸಚಿವಾಲಯ ಇದಕ್ಕೂ ಕಿವಿಗೊಡಲಿಲ್ಲ.``ಇದು ಸಾಮಾನ್ಯವಾದ ಹೇಳಿಕೆ. ಯಾವುದೇ ನಿರ್ದಿಷ್ಟ ಪ್ರಕರಣದ ಅಧಾರ ಇದಕ್ಕಿಲ್ಲ’’ ಎಂದು ತಳ್ಳಿಹಾಕಿತು. ಯಾವುದೇ ರೀತಿಯ ರಸ್ತೆ ನಿರ್ಮಾಣ ಮಾಡುವಾಗ ಅದಕ್ಕೆ ಹೊಂದಿಕೊಂಡಿರುವ ಇಳಿಜಾರು ಪ್ರದೇಶ ಸ್ಥಿರವಾಗಿರಬೇಕು. ಇದಕ್ಕಾಗಿ ಪಾರ್ಶ್ವ ಹಾಗೂ ಅಂಚಿನಲ್ಲಿ ಗಟ್ಟಿಯಾದ ಗೋಡೆಗಳಿರಬೇಕು. ಆಯಾ ಪ್ರದೇಶದ ಸ್ಥಿತಿಗತಿಗಳನ್ನು ಆಧರಿಸಿ ಇದನ್ನು ನಿರ್ಮಿಸಬೇಕು ಎಂಬುದು ಸ್ಪಷ್ಟವಾದ ಮಾರ್ಗಸೂಚಿ ಹಾಗೂ ರೂಢಿಗತ ಪದ್ಧತಿ. ಆದರೆ ಸರ್ಕಾರ ಹಾಗೂ ಹೆದ್ದಾರಿ ಸಚಿವಾಲಯಗಳಿಗೆ ಇದು ಪಥ್ಯವಾಗಲಿಲ್ಲ. ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳಲೂ ಇಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಮುನ್ನುಗ್ಗಿದ್ದರಿಂದ ಈ ಅಪಾಯವನ್ನು ತಂದುಕೊಳ್ಳಬೇಕಾಯಿತು.
ಹಾಗೆ ನೋಡಿದರೆ ಎಚ್‌ಪಿಸಿ ಕೂಡ ಈ ಅಪಸವ್ಯದಲ್ಲಿ ಭಾಗಿಯಾಗಿದೆ ಎಂದರೆ ತಪ್ಪಾಗಲಾರದು. ಈ ರೀತಿಯ ಎರಡು ಮಾರ್ಗದ ರಸ್ತೆ ನಿರ್ಮಾಣದ ಒಟ್ಟು ಅಗಲ ೫.೫ ಮೀಟರ್ ಮೀರಬಾರದು ಎಂಬ ಶಿಫಾರಸಿಗೆ ವಿರುದ್ಧವಾಗಿ ೧೨ ಮೀಟರ್ ಅಗಲದ ರಸ್ತೆ ನಿರ್ಮಾಣದ ನಿರ್ಧಾರವನ್ನು ಕೈಗೊಂಡಾಗಲೂ ಸಮಿತಿ ಕಣ್ಣುಮುಚ್ಚಿ ಕುಳಿತಿತ್ತು. ಉತ್ತರಾಖಂಡದ ಅತಿ ಸೂಕ್ಷ್ಮ ಪರಿಸರ ವಲಯವನ್ನು ರಕ್ಷಿಸಬೇಕಾದ ಸಮಿತಿ ಆ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಸಮಿತಿಯ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ನಿಯಮದ ಘೋರ ಉಲ್ಲಂಘನೆ ಹಾಗೂ ತಜ್ಞರ ಮಾತು ನಿರ್ಲಕ್ಷ್ಯಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ ?
ಹಿಮಾಲಯ ಪರ್ವತ ಶ್ರೇಣಿಯ ಪ್ರದೇಶ ಮೇನ್ ಸೆಂಟ್ರಲ್ ಥ್ರಸ್ಟ್ (ಎಂಸಿಟಿ) ಎಂದು ಕರೆಯಲಾಗುವ ಭೂಪದರದ ಮೇಲಿದೆ. ಇದು ಭೂಕಂಪದ ಅಪಾಯ ಹೆಚ್ಚಾಗಿರುವ ಪ್ರದೇಶ. ಸಿಲ್ಕ್ಯಾರಾ ಸುರಂಗ ಮಾರ್ಗ ಸೇರಿದಂತೆ ಹಲವು ನಿರ್ಮಾಣ ಕಾಮಗಾರಿಗಳು ಈ ಭಾಗದಲ್ಲೇ ನಡೆಯುತ್ತಿವೆ. ಒಂದು ವರ್ಷದ ಹಿಂದೆ, ಭಾಗೀರಥಿ ಇಕೋಝೋನ್‌ನ ಉಸ್ತುವಾರಿ ಸಮಿತಿಯ ಸಭೆ ನಡೆಯಿತು. ಈಗ ಜಾರಿಯಲ್ಲಿರುವ ೧೨ ಮೀಟರ್ ಅಗಲದ ಸುರಂಗಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡುವ ನಿರ್ಧಾರವನ್ನು ಈ ಸಭೆ ಕೇವಲ ಐದೇ ನಿಮಿಷಗಳಲ್ಲಿ ಕೈಗೊಂಡಿತು. ಸಭೆಯಲ್ಲಿ ಹಾಜರಿದ್ದ ಸ್ವತಂತ್ರ ಸದಸ್ಯರ ವಿರೋಧಕ್ಕೆ ಆ ಸಭೆಯಲ್ಲಿ ಯಾವುದೇ ಕಿಮ್ಮತ್ತು ಸಿಗಲಿಲ್ಲವಂತೆ. ಇದು ‘ಬೆಂಕಿಯ ಜತೆ ಸರಸವಾಡುವ’ ಕೆಲಸವಲ್ಲದೆ ಬೇರೇನೂ ಅಲ್ಲ. ಇದು ಸಾಲದು ಎಂಬಂತೆ ಸಂಭಾವ್ಯ ಪ್ರತಿಭಟನೆಗಳನ್ನು ದಮನ ಮಾಡಲು ಉತ್ತರಕಾಶಿ ಪೊಲೀಸ್ ಹಾಗೂ ಜಿಲ್ಲಾ ಆಡಳಿತಗಳು ಸುರಂಗಮಾರ್ಗಕ್ಕೆ ಸರ್ಪಗಾವಲು ಹಾಕಿವೆ.
ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕ, ಅಸಂಬದ್ಧ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಆದರೆ ಕಾನೂನು ಕಟ್ಟಳೆಗಳು, ರೀತಿ ರಿವಾಜುಗಳು ಇವೆಯಲ್ಲ. ಅವುಗಳಿಗಾದರೂ ಬೆಲೆ ಕೊಡಬೇಕಲ್ಲವೆ ? ಉನ್ನತಾಧಿಕಾರದ ಸಭೆಯ ನಡವಳಿಕೆ, ಭಾಗೀರಥಿ ಇಕೋಝೋನ್ ಉಸ್ತುವಾರಿ ಸಮಿತಿ- ಇವೆಲ್ಲವೂ ನಿಯಮಗಳನ್ನು ಉಲ್ಲಂಘಿಸಿವೆ. ಅದೂ ಅಲ್ಲದೆ ‘ರಂಗೋಲಿ ಕೆಳಗೆ ತೂರುವ' ತಂತ್ರವನ್ನೂ ಸರ್ಕಾರ ಅನುಸರಿಸುವುದೂ ಸುಳ್ಳಲ್ಲ. ಚಾರ್‌ಧಾಮ್ ಪರಿಯೋಜನ, ಅಂದರೆ ಸಿಡಿಪಿ ಏನು ಮಾಡಿದೆ ಎಂಬುದನ್ನು ಕೇಳಿದರೆ ಯಾರಾದರೂ ಬೆಚ್ಚಿಬೀಳಲೇಬೇಕು. ೯೦೦ ಕಿಮೀ ಉದ್ದದ ಬೃಹತ್ ಯೋಜನೆಗೆ ನೂರೆಂಟು ಕಾನೂನು ತೊಡಕುಗಳಿವೆ. ಇದರಿಂದ ಪಾರಾಗಲು ಅದು ಒಂದು ಅಡ್ಡ ಮತ್ತು ಸುಲಭ ಮಾರ್ಗ ಕಂಡುಕೊಂಡಿತು. ಅದೇನೆಂದರೆ, ಇಡೀ ಯೋಜನೆಯನ್ನು ೫೩ ಸಣ್ಣ ತುಂಡು ಗುತ್ತಿಗೆಗಳಾಗಿ ಪರಿವರ್ತಿಸಲಾಯಿತು. ಇದಕ್ಕೆ ಯಾವುದೇ ನಿಯಮಗಳೂ ಇಲ್ಲ, ಯಾರ ಅಪ್ಪಣೆಯೂ ಬೇಕಿಲ್ಲ. ಹೇಗಿದೆ ಐಡಿಯಾ ?
ಹಾಗೆ ನೋಡಿದರೆ ಸುರಂಗದಲ್ಲಿ ಕಾರ್ಮಿಕರು ಸಿಲುಕಿದ್ದು ಸಾಕಷ್ಟು ಸುದ್ದಿಯಾಯಿತು. ಆದರೆ ಈ ಹಿಂದೆಯೂ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ. ಈ ಪೈಕಿ ಅನೇಕವು ಮಾನವ ನಿರ್ಮಿತವೇ. ಆದರೆ ಈ ದಶಕದಲ್ಲೇ ಅತ್ಯಧಿಕ ದುರಂತಗಳು ಸಂಭವಿಸಿರುವುದೂ ಗಮನಾರ್ಹ. ಅದಕ್ಕೆ ಕಾರಣಗಳು ಉಂಟು. ಈ ಪ್ರದೇಶದಲ್ಲಿ ಸುರಂಗ ಮಾರ್ಗಗಳ ನಿರ್ಮಾಣ, ಸ್ಫೋಟ, ಭೂಅಗೆತ, ಕೊರೆತ, ನಿರ್ಮಾಣ ಸಾಮಗ್ರಿಗಳ ಸುರಿಯುವಿಕೆ, ಬೇಕಾಬಿಟ್ಟಿ ನಿರ್ಮಾಣ ಕಾರ್ಯಇತ್ಯಾದಿಗಳೆಲ್ಲವೂ ಜೋರಾಗಿ, ಎಡೆಬಿಡದೆ ನಡೆಯುತ್ತಿವೆ. ಕೇದಾರನಾಥದಲ್ಲಿ ಜಲಪ್ರವಾಹ, ಅಸ್ಸಿ ಗಂಗಾ ಯೋಜನಾ ಪ್ರದೇಶದಲ್ಲಿ ಪ್ರವಾಹ, ಜೋಶಿಮಠದಲ್ಲಿ ಭುಕುಸಿತ, ಋಷಿಗಂಗಾದಲ್ಲಿ ನೀರ್ಗಲ್ಲು ಕರಗಿದ್ದು, ಚಾರಧಾಮ್ ಯಾತ್ರಾ ಮಾರ್ಗದ ೨೦೦ ಕಡೆ ಭೂಕುಸಿತ- ಹೀಗೆ ಪಟ್ಟಿ ಬೆಳೆಯುತ್ತದೆ.
ಋಷಿಗಂಗಾ ಯೋಜನಾ ಪ್ರದೇಶದಲ್ಲಿ ೨೦೦ ಕಾರ್ಮಿಕರು ಸಿಲುಕಿದ್ದರು ಹಾಗೂ ಇಡೀ ಯೋಜನೆ ಪ್ರವಾಹದಿಂದ ಕೊಚ್ಚಿಹೋಯಿತು. ಇದಕ್ಕೆಲ್ಲ ಮುಖ್ಯಕಾರಣ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಬೇಕಾಬಿಟ್ಟಿ ನಿರ್ಮಾಣಕಾರ್ಯ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಕೈಗೊಳ್ಳುವುದು ಹಾಗೂ ಪರಿಸರದ ಬಗ್ಗೆ, ಪರಿಸರ ಹಾನಿ ಕುರಿತು ಯವುದೇ ಕಾಳಜಿ, ಕಳಕಳಿ ಇಲ್ಲದಿರುವುದು. ಪ್ರತಿಬಾರಿ ದುರಂತ ಸಂಭವಿಸಿದಾಗಲೂ ತನಿಖೆಯ ಶಾಸ್ತ್ರ ಮಾಡಿ, ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗುತ್ತದೆ. ಮುಂದಿನ ಅನಾಹುತ ನಡೆಯುವ ತನಕ ಎಲ್ಲರೂ ಅದನ್ನು ಮರೆತು ಬಿಡುತ್ತಾರೆ. ಇನ್ನು ಮುಂದಾದರೂ ಹೀಗಾಗಬಾರದು. ಇಂಥ ದುರಂತಗಳಿಗೆ ಮುಖ್ಯಕಾರಣ ಬೇಕಾಬಿಟ್ಟಿ ನಿರ್ಮಾಣ ಕಾರ್ಯಗಳು ಎಂಬುದನ್ನು ಅರಿತುಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಷ್ಟೇ ಪರಿಸರವೂ ಮುಖ್ಯ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರವೂ ನಮ್ಮನ್ನು ಕಾಪಾಡುತ್ತದೆ.