For the best experience, open
https://m.samyuktakarnataka.in
on your mobile browser.

ಭಕ್ತಸಾಗರದ ಮಧ್ಯೆ ಮಾರಿಕಾಂಬಾ ದೇವಿ ರಥೋತ್ಸವ

09:50 PM Mar 20, 2024 IST | Samyukta Karnataka
ಭಕ್ತಸಾಗರದ ಮಧ್ಯೆ ಮಾರಿಕಾಂಬಾ ದೇವಿ ರಥೋತ್ಸವ

ಶಿರಸಿ: ಎರಡು ವರ್ಷಕ್ಕೊಮ್ಮೆ ಅತಿ ವಿಜೃಂಭಣೆಯಿಂದ ನಡೆಯುವ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ಕಲ್ಯಾಣ ಪ್ರತಿಷ್ಠೆ, ಮಂಗಲೋತ್ಸವಗಳು ಮಂಗಳವಾರ ಮಾ.೧೯ ರ ರಾತ್ರಿಯಿಂದ ಆರಂಭಗೊಂಡು ಬುಧವಾರ ಮಾ.೨೦ ರಂದು ಬೆಳಿಗ್ಗೆ ಸಂಪನ್ನಗೊಂಡ ನಂತರ ಆಚರಣೆಯಂತೆ ರಥಾರೂಢಳಾದ ದೇವಿಯ ರಥಾರೋಹಣ ಹಾಗೂ ರಥೋತ್ಸವದ ವೈಭವದ ಸೊಬಗನ್ನು ಮಾರಿಕಾಂಬಾ ದೇವಾಲಯದ ರಥಬೀದಿಯಿಂದ ಬಿಡ್ಕಿಬೈಲಿನ ಜಾತ್ರಾ ಮಂಟಪದವರೆಗೆ ನೆರೆದ ಸಹಸ್ರ-ಸಹಸ್ರ ಸಂಖ್ಯೆಯ ಭಕ್ತರು ಕಣ್ತುಂಬಿಕೊಂಡರು.
ಬುಧವಾರ ಮುಂಜಾನೆ ನಿಗದಿತ ಮುಹೂರ್ತದಲ್ಲಿ ಸರ್ವಾಲಂಕಾರ ಭೂಷಿತೆಯಾದ, ಸನ್ಮಂಗಳೆಯಾಗಿ ಕಂಗೊಳಿಸುತ್ತಿರುವ ಶ್ರೀಮಾರಿಕಾಂಬಾ ದೇವಿಯ ರಥಾರೋಹಣ ನಡೆಯಿತು. ನಂತರ ರಥೋತ್ಸವದ ಶೋಭಾಯಾತ್ರೆಗಾಗಿ ನಿಗದಿಪಡಿಸಿದ ಮುಹೂರ್ತದಲ್ಲಿ ಭಕ್ತರು ಶ್ರೀದೇವಿಯ ರಥವನ್ನು ಜಯಘೋಷದೊಡನೆ ಭಕ್ತರು ಎಳೆದರು. ಶ್ರೀದೇವಿಯ ಸಾಂಪ್ರದಾಯಿಕ ಛತ್ರ, ಚಾಮರ, ಪತಾಕೆ, ನಿಶಾನೆಗಳೊಡನೆ, ಪಂಚವಾದ್ಯ, ಕಹಳೆ, ಹಲಗೆ ಮೇಳಗಳ ಜೊತೆಗೆ ಭಕ್ತರ ಹರಕೆಯ ಡೊಳ್ಳು, ಚಂಡೆಗಳ ವಾದನದ ಮೂಲಕ ರಥೋತ್ಸವ ನಡೆಯಿತು.
ಶ್ರೀದೇವಿಯ ರಥಕ್ಕೆ ಕಡಲೆ, ಬಾಳೆಹಣ್ಣು, ಉತ್ತುತ್ತೆ ಇತ್ಯಾದಿ ಒಣಹಣ್ಣುಗಳು, ಹಾರುಕೋಳಿ ಇತ್ಯಾದಿಗಳನ್ನು ತೂರಿ ಭಕ್ತರು ಹರಕೆಯನ್ನು ತೀರಿಸಿದರು.
ಪ್ರಶಾಂತ ಚಿತ್ತಳಾಗಿ, ಮೃದುಮಧುರ ಮಂದಸ್ಮಿತದೊಡನೆ, ಗಂಭೀರ ವದನೆಯಾಗಿ ಭಕ್ತರಿಗೆ ಅಭಯ ನೀಡಿ, ಹರಸಲು ರಥಾರೂಢಳಾದ ಶ್ರೀದೇವಿಯ ಮಂಗಲ ಶೋಭಾಯಾತ್ರೆಯು ಭಕ್ತ ಸಾಗರದ ಮಧ್ಯೆ ಸುಮಾರು ೩ ಗಂಟೆಗಳ ಕಾಲ ಸಾಗಿ ನಗರದ ಮಧ್ಯದ ಬಿಡ್ಕಿಬೈಲಿನಲ್ಲಿರುವ ಜಾತ್ರಾ ಮಂಟಪ ತಲುಪಿತು.
ರಥಾರೂಢಳಾಗಿ ಆಗಮಿಸಿದ ಶ್ರೀ ದೇವಿ ಮಾರಿಕಾಂಬೆಯ ಜಾತ್ರಾ ಗದ್ದುಗೆಯಲ್ಲಿ ಸ್ಥಾಪನೆಯ ಪೂರ್ವದ ಜಾತ್ರಾ ಸಂಪ್ರಾದಯದ ವಿಧಿವಿಧಾನಗಳಾದ ಮೇಟಿ ದೀಪ ತರುವುದು ಇತ್ಯಾದಿ ಸಂಪ್ರದಾಯಗಳನ್ನು ನೆರವೇರಿಸಿ, ಮಧ್ಯಾಹ್ನದ ನಿಗದಿತ ಶುಭ ಮುಹೂರ್ತದಲ್ಲಿ ಶ್ರೀದೇವಿಯನ್ನು ರಥದಿಂದ ಕೆಳಗೆ ಇಳಿಸಿ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಗುರುವಾರ ಮುಂಜಾನೆ ೫ ಗಂಟೆಯಿಂದ ಶ್ರೀದೇವಿಯ ದರ್ಶನ ಮತ್ತು ಪೂಜೆ ಸೇವಾ ಸಮರ್ಪಣೆ ಹರಕೆ ಸಮರ್ಪಣೆ ನಡೆಯಲಿದೆ.
ಇನ್ನು ೮ ದಿನಗಳ ಕಾಲ ಶ್ರೀದೇವಿಯ ದರ್ಶನ ಜಾತ್ರಾ ಗದ್ದುಗೆಯಲ್ಲಿ ಅತಿ ಸನಿಹದಿಂದ ಭಕ್ತರಿಗೆ ದರ್ಶನ ನೀಡುತ್ತಾ, ಹರಸುವ ಸಮಯವು ಶೃದ್ದಾಭಕ್ತರಿಗೆ ಸಂತಸ ನೀಡುವ ಅಪರೂಪದ ಕ್ಷಣಗಳಾಗಿವೆ.
ಜಾತ್ರಾ ದಿನಗಳಲ್ಲಿ ಮಂಟಪದಲ್ಲಿ ಪ್ರತಿಷ್ಠಿತ ಶ್ರೀದೇವಿ ದರ್ಶನ ಪಡೆಯಲು ಭಕ್ತರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವುದಷ್ಟೇ ಅಲ್ಲದೇ ಉತ್ತರಕನ್ನಡ ಮತ್ತು ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ ಭಾಗದಿಂದ, ಹಾವೇರಿ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ವಿಶೇಷ.
ಜಾತ್ರೆಯ ಗದ್ದುಗೆಯಲ್ಲಿ ಭಕ್ತರಿಗೆ ಸುಲಭವಾಗಿ ಶ್ರೀದೇವಿಯ ದರ್ಶನ, ಸೇವೆ, ಪೂಜಾ ಕೈಂಕರ್ಯಗಳಿಗೆ ಎಲ್ಲ ವ್ಯವಸ್ಥೆಯನ್ನು ಆಡಳಿತ ಮಂಡಳಿಯು ಬಾಬದಾರರು, ವಿವಿಧ ಇಲಾಖೆಗಳ ಸಹಕಾರದಿಂದ ಕೈಗೊಂಡಿದೆ.