ಮತ್ತೆ ಹಾರಾಡಿದ ಭಗವಾಧ್ವಜ
ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಬಂದರಿನಲ್ಲಿ ಹಾಕಲಾಗಿದ್ದ ವೀರ ಸಾವರ್‌ಕರ್ ಬೀಚ್ ನಾಮಫಲಕ ಹಾಗೂ ಭಗವಾಧ್ವಜವನ್ನು ಕಳೆದ ಜ. ೨೭ರಂದು ಗ್ರಾಮ ಪಂಚಾಯತ್ ತೆರವುಗೊಳಿತ್ತು. ಗ್ರಾಮ ಪಂಚಾಯತ್ ಕ್ರಮವನ್ನು ವಿರೋಧಿಸಿ ಅಂದು ಬೃಹತ್ ಪ್ರತಿಭಟನೆ ನಡೆಸಿದ್ದ ಹಿಂದೂ ಸಂಘಟನೆಗಳು ಕಟ್ಟೆಯನ್ನು ಪುನಃ ಕಟ್ಟಿದ್ದಲ್ಲದೇ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ನಾಮ ಫಲಕ ತೆರವುಗೊಳಿಸಲು ಗಡುವು ನೀಡಿದ್ದವು. ಗಡುವಿನೊಳಗೆ ತಾವು ಹೆಸರಿಸಿದ್ದ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸದೇ ಇದ್ದಲ್ಲಿ ವೀರ ಸಾವರ್‌ಕರ್ ಬೀಚ್ ನಾಮ ಫಲಕ ಹಾಗೂ ಭಗವಾಧ್ವಜವನ್ನು ಪುನಃ ಸ್ಥಾಪಿಸುವುದಾಗಿಯೂ ತಿಳಿಸಲಾಗಿತ್ತು. ತಾವು ನೀಡಿದ ಗಡುವು ಮುಗಿಯುತ್ತಿದ್ದಂತೆಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಸೋಮವಾರ ಸಂಸದ ಅನಂತಕುಮಾರ್ ಹೆಗಡೆ ಅವರು ಭಟ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪುನಃ ಭಗವಾಧ್ವಜವನ್ನು ಹಾರಿಸಿ, ನಾಮಫಲಕವನ್ನು ಅಳವಡಿಸಿದರು.
ಗ್ರಾಮ ಪಂಚಾಯತಕ್ಕೆ ನೀಡಿದ್ದ ಗಡುವಿನೊಳಗಾಗಿ ಒಂದೇ ಒಂದು ಅನಧಿಕೃತ ನಾಮ ಫಲಕ, ಕಟ್ಟೆಗಳನ್ನು ತೆರವುಗೊಳಿಸದೇ ಇರುವುದರಿಂದ ನುಡಿದಂತೆ ನಡೆದ ಹಿಂದೂ ಸಂಘಟನೆಯಗಳು ಸೋಮವಾರ ಸಂಸದ ಅನಂತಕುಮಾರ್ ಹೆಗಡೆ ಅವರ ನೇತೃತ್ವದಲ್ಲಿ ಮತ್ತೆ ಪುನಃ ಕಟ್ಟೆಯ ಮೇಲೆ ಭಗವಾಧ್ವಜವನ್ನು ಹಾರಿಸಿದ್ದಲ್ಲದೇ ವೀರ ಸಾವರ್‌ಕರ್ ಬೀಚ್ ಎನ್ನುವ ನಾಮಫಲಕ ಅಳವಡಿಸಿದ್ದಾರೆ.