ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಕ್ರಿಯಾ ಯೋಜನೆ
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ನಡೆಯುತ್ತಿದ್ದು ಮೇಲ್ಮನೆ ಮತ್ತು ಕೆಳಮನೆಯಲ್ಲಿ ಎಲ್ಲ ಪಕ್ಷಗಳ ಶಾಸಕರು ಬಹಳ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅವರು ಪ್ರಸ್ತಾಪಿಸಿರುವ ಸಮಸ್ಯೆ ನೈಜವಾಗಿದ್ದು ಕೇವಲ ಭರವಸೆಗಳಿಂದ ಈಡೇರುವುದಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕಾಲಬದ್ಧ ಕ್ರಿಯಯೋಜನೆಯನ್ನು ಸಿದ್ಧಪಡಿಸಿ ಮುಂಬರುವ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು. ಈ ಕ್ರಿಯಾ ಯೋಜನೆಯಲ್ಲಿ ನೀರಾವರಿಯಿಂದ ಹಿಡಿದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದವರೆಗೆ ಎಲ್ಲದಕ್ಕೂ ಹಣ ನಿಗದಿಪಡಿಸುವುದು ಸೂಕ್ತ.
ಏಕೀಕರಣದ ನಂತರ ಕಿತ್ತೂರು ಕರ್ನಾಟಕದಿಂದ ಬಂದ ನಾಯಕರು ಆ ಭಾಗದ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಿಲ್ಲ ಎಂಬುದು ಅಕ್ಷರಶಃ ನಿಜ. ರಾಜ್ಯದ ಒಟ್ಟಾರೆ ಜಿಎಸ್‌ಡಿಪಿ ಬೆಳವಣಿಗೆ ನೋಡಿದರೆ ಶೇ.೭.೯ ಇದೆ. ಜಿಲ್ಲಾವಾರು ಬೆಳವಣಿಗೆಯಲ್ಲಿ ಬೆಳಗಾವಿ ೩ನೇ ರ‍್ಯಾಂಕ್‌ನಲ್ಲಿರುವುದನ್ನು ಹೊರತುಪಡಿಸಿದರೆ ಉಳಿದ ಉತ್ತರ ಕರ್ನಾಟಕದ ಜಿಲ್ಲೆಗಳು ೧೦ನೇ ರ್ಯಾಂಕ್‌ನಿಂದ ಕೆಳಗೆ ಇದೆ. ಹಾವೇರಿ ೨೪, ಗದಗ ೨೯ನೇ ರ‍್ಯಾಂಕ್‌ನಲ್ಲಿರುವುದನ್ನು ನೋಡಿದರೆ ಆರ್ಥಿಕ ಪರಿಸ್ಥಿತಿ ಎಷ್ಟು ಕೆಳಮಟ್ಟದಲ್ಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ತಲಾವಾರು ಆದಾಯವನ್ನು ನೋಡಿದರೆ ಧಾರವಾಡ ೧೪ನೇ ರ‍್ಯಾಂಕ್‌ನಲ್ಲಿದೆ. ಇದನ್ನು ಹೊರತುಪಡಿಸಿದರೆ ಉಳಿದ ಉತ್ತರ ಕರ್ನಾಟಕದ ಜಿಲ್ಲೆಗಳ ಬಗ್ಗೆ ಬೇರೆ ಹೇಳುವ ಅಗತ್ಯವಿಲ್ಲ.
ಉತ್ತರಕರ್ನಾಟಕದ ಪರಿಸ್ಥಿತಿಯ ಬಗ್ಗೆ ಎಲ್ಲ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಹಲವು ಸಲಹೆಗಳನ್ನು ಜಾರಿಗೆ ತರಲು ತಿಳಿಸಿದ್ದಾರೆ. ಸರ್ಕಾರ ಕೂಡ ಹಲವು ಭರವಸೆಗಳನ್ನು ನೀಡಿದೆ. ಇವುಗಳನ್ನು ಜಾರಿಗೆ ಕೊಡಬೇಕು ಎಂದರೆ ಕ್ರಿಯಾಯೋಜನೆ ರೂಪಿಸುವುದು ಅಗತ್ಯ. ಅದು ಕಾಲಬದ್ಧವಾಗಿರಬೇಕು. ಪ್ರತಿ ವರ್ಷ ಆಗಿರುವ ಪ್ರಗತಿ ಪರಿಶೀಲನೆ ನಡೆದು ನಂತರದ ವರ್ಷಕ್ಕೆ ಅನುದಾನ ಬಿಡುಗಡೆಯಾಗಬೇಕು. ಉತ್ತರ ಕರ್ನಾಟಕದ ಬಹುದಿನಗಳ ಕನಸು ಕೃಷ್ಣಾ ಮೇಲ್ದಂಡೆ ಯೋಜನೆ. ಅದು ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೆ ಹಣ ಒದಗಿಸಲು ರಾಜ್ಯ ಸರ್ಕಾರಕ್ಕೆ ಸಮಸ್ಯೆಯಾದಲ್ಲಿ ಕೇಂದ್ರದ ಯೋಜನೆಯಾಗಿ ಪರಿಗಣಿಸುವಂತೆ ಒತ್ತಾಯಿಸಬೇಕು. ಈಗ ಕೇಂದ್ರದಲ್ಲಿ ಸಚಿವರಾಗಿರುವವರು ತಮ್ಮ ಪ್ರಭಾವ ಬಳಸಿ ಅನುದಾನ ದೊರಕುವಂತೆ ಮಾಡಬೇಕು. ಆಲಮಟ್ಟಿ ಗೇಟ್ ಎತ್ತರಿಸಲು ಸುಪ್ರೀಂ ಕೋರ್ಟ್ ಕೂಡ ಅನುಮತಿ ನೀಡಿದೆ. ಗೇಟ್ ಎತ್ತರಗೊಂಡಂತೆ ನೀರು ನಿಲ್ಲುವ ಪ್ರದೇಶ ಅಧಿಕಗೊಳ್ಳುತ್ತದೆ. ನೀರಿನಲ್ಲಿ ಮುಳುಗಡೆಯಾಗುವ ಪ್ರದೇಶದ ರೈತರಿಗೆ ಪರಿಹಾರ ಒದಗಿಸಬೇಕು. ಜನ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದಾರೆ. ನೀರು ನಿಂತಲ್ಲಿ ನೀರಾವರಿ ಪ್ರದೇಶ ಅಧಿಕಗೊಂಡು ಗ್ರಾಮೀಣ ಜನರಿಗೆ ಹೆಚ್ಚು ಉದ್ಯೋಗ ದೊರಕುತ್ತದೆ. ಕೇಂದ್ರದ ಯೋಜನೆಯಾದಲ್ಲಿ ಹಣದ ಕೊರತೆ ಬರುವುದಿಲ್ಲ.
ಕಲ್ಯಾಣ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ೩೭೧ಜೆ ರೀತ್ಯ ವಿಶೇಷ ಸವಲತ್ತು ದೊರಕುವಂತೆ ಮಾಡಿದ್ದಾರೆ. ಅದೇರೀತಿ ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸವಲತ್ತು ಸಿಗುವಂತೆ ಕೇಂದ್ರದ ಸಚಿವರು ಮಾಡಬೇಕು. ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸೇರಿದ ವನ್ಯಜೀವಿ ಮಂಡಳಿಯ ಒಪ್ಪಿಗೆ ಬೇಕು. ಈಗ ಛತ್ತೀಸಗಢದಿಂದ ಗೋವಾಗೆ ವಿದ್ಯುತ್ ಮಾರ್ಗ ರೂಪುಗೊಳ್ಳುತ್ತಿದ್ದು ಅದು ಕರ್ನಾಟಕದ ಆರಣ್ಯದಲ್ಲಿ ಹಾದು ಹೋಗಬೇಕು. ಇದಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಬೇಕು. ಮಹದಾಯಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದರೆ ಮಾತ್ರ ಗೋವಾ ವಿದ್ಯುತ್ ಮಾರ್ಗಕ್ಕೆ ಅನುಮತಿ ನೀಡುವುದಾಗಿ ರಾಜ್ಯ ಸರ್ಕಾರ ಪಟ್ಟು ಹಿಡಿಯಲಿದೆ. ಇದು ಕೈಗೂಡಿದರೆ ಮಹದಾಯಿ ನೀರು ಕರ್ನಾಟಕಕ್ಕೆ ದೊರಕಲಿದೆ. ಕೈಗಾರಿಕೆ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಹಿಂದುಳಿದಿದೆ. ಇದಕ್ಕೆ ಮೂಲಭೂತ ಸವಲತ್ತು ಕೊರತೆ ಕೂಡ ಕಾರಣ. ಬೆಂಗಳೂರು ಸುತ್ತಮುತ್ತ ಕೈಗಾರಿಕೆಗಳ ಸಂಖ್ಯೆ ಅಧಿಕಗೊಳ್ಳಲು ಮೂಲಭೂತ ಸವಲತ್ತು ಇರುವುದೇ ಕಾರಣ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಡಿದು ಗ್ರಾಮೀಣ ರಸ್ತೆಗಳವರೆಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸುವುದು ಅಗತ್ಯ. ಜಲಾಶಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅದಕ್ಕೆ ತಕ್ಕಂತೆ ಕಾಲುವೆ ನಿರ್ಮಾಣ ಕುಂಟುತ್ತಾ ಸಾಗಿದೆ. ಹೀಗಾಗಿ ಎಷ್ಟೋ ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ನಿಸರ್ಗ ಸಾಕಷ್ಟು ಕೃಪೆ ತೋರಿದ್ದರೂ ಅದನ್ನು ಬಳಸಿಕೊಳ್ಳಲು ಬೇಕಾದ ಹಣಕಾಸು ಸಂಪನ್ಮೂಲದ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೆ ಗ್ರಾಮ ಮಟ್ಟದಲ್ಲಿ ಸರ್ಕಾರಿ ಯಂತ್ರ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಬಹುತೇಕ ಸಚಿವರು ಉತ್ತರ ಕನಾಟಕದಲ್ಲಿ ಪ್ರವಾಸ ಮಾಡುವುದಿಲ್ಲ. ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ವಹಿಸಿದಲ್ಲಿ ಪ್ರಗತಿಯನ್ನು ಕಾಣಬಹುದು. ಉತ್ತರದಾಯಿತ್ವ ಸರ್ಕಾರಿ ಮಟ್ಟದಲ್ಲಿ ಕಂಡು ಬರುತ್ತಿಲ್ಲ. ಬೆಳಗಾವಿ ಅಧಿವೇಶನ ಸರ್ಕಾರಿ ಯಂತ್ರ ಚುರುಕುಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ಉತ್ತರ ಕರ್ನಾಟಕ ರಾಜ್ಯದ ಆರ್ಥಿಕ ಮಟ್ಟ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವಹಿಸುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಒತ್ತಾಸೆ ನೀಡುವ ಕೆಲಸ ನಡೆಯಬೇಕು.