For the best experience, open
https://m.samyuktakarnataka.in
on your mobile browser.

ಉತ್ತರ ಕರ್ನಾಟಕದ ಕೂಗು: ಉತ್ತರದಾಯಿತ್ವ ಯಾರದು?

11:07 AM Dec 14, 2023 IST | Samyukta Karnataka
ಉತ್ತರ ಕರ್ನಾಟಕದ ಕೂಗು  ಉತ್ತರದಾಯಿತ್ವ ಯಾರದು

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಜನಪ್ರತಿನಿಧಿಗಳಿಂದಲೇ ಕೇಳಿಬರುತ್ತಿದೆ. ಅವರ ಕೈಯಲ್ಲೇ ಅಧಿಕಾರ ಇರುವಾಗ ಬೇರೆಯವರನ್ನು ದೂಷಿಸಿದರೆ ಪ್ರಯೋಜನವಿಲ್ಲ.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗಿಗೆ ಯಾರು ಉತ್ತರ ಕೊಡಬೇಕು? ಜನಪ್ರತಿನಿಧಿಗಳೋ ಸರ್ಕಾರವೋ ಜನಸಾಮಾನ್ಯರೋ. ಯಾರುಹೊಣೆಗಾರರು. ಕರ್ನಾಟಕದ ಏಕೀಕರಣವಾದ ದಿನದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಮಾತು ಕೇಳಿ ಬರುತ್ತಿದೆ. ಅದಕ್ಕಾಗಿ ಡಾ. ನಂಜುಂಡಪ್ಪ ಸಮಿತಿ ವರದಿ ಅನುಷ್ಠಾನಕ್ಕೆ ತರಲಾಯಿತು. ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಅವುಗಳಿಗೆ ವಿಶೇಷ ಅನುದಾನ ನೀಡಲಾಯಿತು. ಹೈಕೋರ್ಟ್ ಪೀಠಗಳು ಎರಡು ರಚನೆಗೊಂಡು ಕೆಲಸ ಮಾಡುತ್ತಿವೆ. ವಿವಿಗಳ ಸಂಖ್ಯೆ ಅಧಿಕಗೊಂಡಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಕೆಲಸ ಮಾಡುತ್ತಿದೆ. ರಸ್ತೆ ಮತ್ತು ರೈಲು ಸಂಪರ್ಕ ಉತ್ತಮಗೊಂಡಿದೆ. ಹುಬ್ಬಳ್ಳಿ, ದಾವಣಗೆರೆ, ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣಗಳಿವೆ. ಶಾಲೆ, ಕಾಲೇಜು, ಆಸ್ಪತ್ರೆಗಳ ಸಂಖ್ಯೆ ಅಧಿಕಗೊಂಡಿದೆ. ಐದು ನದಿಗಳು ಹರಿಯುತ್ತವೆ. ಅವುಗಳ ಮೂಲಕ ನೀರಾವರಿ ಸೌಲಭ್ಯ ಉತ್ತಮಪಡಿಸುವ ಕೆಲಸ ನಡೆದಿದೆ. ಬೆಳಗಾವಿಯಲ್ಲಿ ಸುವರ್ಣ ಸೌಧದಲ್ಲಿ ವರ್ಷಕ್ಕೊಮ್ಮೆ ವಿಧಾನಸಭೆ ಅಧಿವೇಶನ ನಡೆಯುತ್ತದೆ. ಆದರೂ ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಇನ್ನೂ ಕೇಳಿ ಬರುತ್ತಲೇ ಇದೆ.
ಇದಕ್ಕೆ ಉತ್ತರಿಸಬೇಕಿರುವುದು ಅಲ್ಲಿಯ ಜನ ಪ್ರತಿನಿಧಿಗಳು. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೇ ಪರಮಾಧಿಕಾರ. ಅವರೇ ನಮ್ಮಲ್ಲಿ ಬಹುತೇಕ ಕೆಲಸಗಳು ಆಗಿಲ್ಲ ಎಂದರೆ ಅದಕ್ಕೆ ಉತ್ತರಿಸಬೇಕಾದವರು ಯಾರು? ನಿಜ ಇನ್ನೂ ಆಗಬೇಕಾದ ಕೆಲಸ ಬಹಳ ಇದೆ. ಈಗ ಆಗಿರುವ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ವಿಧಾನಸಭೆಯಲ್ಲಿ ಮುಕ್ತ ಚರ್ಚೆ ನಡೆಯಬೇಕು. ಅದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರೂ ಭಾಗವಹಿಸಬೇಕು. ಕಾಲಬದ್ಧ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಈ ವರ್ಷ ಯಾವ ಕೆಲಸಕ್ಕೆ ಆದ್ಯತೆ ಎಂಬುದನ್ನು ಬಹಿರಂಗಪಡಿಸಬೇಕು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಲೆಕ್ಕ ಹಾಕುವ ಹಾಗೆ ರಾಜ್ಯದಿಂದ ಜಿಲ್ಲೆಗಳಿಗೆ ಸಮಾನ ಹಂಚಿಕೆ ಆಗಬೇಕು. ಮಹದಾಯಿ ಇನ್ನೂ ಬಗೆಹರಿದಿಲ್ಲ. ಇದರಲ್ಲಿ ರಾಜಕೀಯವೇ ಹೆಚ್ಚು. ನೀರು ಮಾತ್ರ ಹರಿದು ಬಂದಿಲ್ಲ. ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಕುಂಟುತ್ತ ಸಾಗಿದೆ. ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆಗೂ ಕಾವೇರಿ ಯೋಜನೆಗೂ ಜೋಡಣೆ ಮಾಡಲಾಗಿತ್ತು. ಕೃಷ್ಣಾ ಗೆ ಎಷ್ಟು ನೀಡಲಾಗುವುದೋ ಅದಕ್ಕೆ ಸಮಾನವಾಗಿ ಕಾವೇರಿಗೂ ನೀಡಬೇಕು ಎಂಬ ವಾದ ಹಿಂದೆ ಇತ್ತು. ಇದು ಸರಿಯಲ್ಲ. ಉತ್ತರ ಕರ್ನಾಟಕಕ್ಕೆ ಐತಿಹಾಸಿಕವಾಗಿ ಕೆಲವು ಅನ್ಯಾಯವಾಗಿರುವುದು ನಿಜ. ಅದನ್ನು ಸರಿಪಡಿಸುವುದು ಇಂದಿನ ತಲೆಮಾರಿನ ಕರ್ತವ್ಯ. ಉತ್ತರ ಕರ್ನಾಟಕದ ೧೪ ಜಿಲ್ಲೆಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಬೆಂಗಳೂರು ನಗರದ ಕೆಲವು ರಸ್ತೆಗಳು ವರ್ಷಕ್ಕೆ ಎರಡು ಬಾರಿ ಡಾಂಬರ್ ಕಂಡರೆ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ೧೦ ವರ್ಷಗಳಾದರೂ ರಸ್ತೆಗಳು ಹಾಗೇ ಇವೆ. ಹುಬ್ಬಳ್ಳಿ-ಧಾರವಾಡ ನಗರದಲ್ಲೇ ನಿರುದ್ಯೋಗ ತಾಂಡವವಾಡುತ್ತಿದೆ. ಬಿಆರ್‌ಟಿಎಸ್ ಯೋಜನೆಹಳ್ಳ ಹಿಡಿದಿದೆ. ಬೆಣ್ಣೆಹಳ್ಳ ಯೋಜನೆ ಬೆಳಕು ಕಂಡಿಲ್ಲ. ತುಂಗಭದ್ರ ಜಲಾಶಯದ ಹೂಳಿಗೆ ಪರಿಹಾರವೇನು? ಉತ್ತರ ಕರ್ನಾಟಕದಲ್ಲಿ ಐಟಿ- ಬಿಟಿ ತಲೆಎತ್ತಿಲ್ಲ. ಕಾರಣವೇನು? ವಿಶೇಷ ಆರ್ಥಿಕ ವಲಯ ಘೋಷಣೆ ಆಗಿದೆ. ಬಂಡವಾಳ ಬಂದಿಲ್ಲ.ಪ್ರವಾಸೋದ್ಯಮ ಕೇಳುವವರು ಇಲ್ಲ.
ಎಲ್ಲ ಯೋಜನೆಗಳು ಬೆಂಗಳೂರು ಸುತ್ತಮುತ್ತ ಕೇಂದ್ರೀಕೃತವಾದಲ್ಲಿ ಉಳಿದ ಪ್ರದೇಶಗಳ ಅಭಿವೃದ್ಧಿ ಯಾವಾಗ? ಈ ಪ್ರಶ್ನೆಗೆ ಉತ್ತರ ನೀಡಬೇಕಿರುವುದು ಜನಪ್ರತಿನಿಧಿಗಳೇ ಹೊರತು ಜನರಲ್ಲ. ಉತ್ತರ ಕರ್ನಾಟಕದಲ್ಲಿ ಎಲ್ಲವೂ ಇದೆ. ಸರ್ಕಾರವೇ ಇಲ್ಲ. ಜನಸಂಪರ್ಕ ಸಭೆ, ಗ್ರಾಮ ವಾಸ್ತವ್ಯ ಅಲ್ಲಿ ಹೆಚ್ಚು ನಡೆಯಬೇಕು.ಉಸ್ತುವಾರಿ ಸಚಿವರು ಮತ್ತು ಶಾಸಕರು ಜನರಿಗೆ ಪ್ರತಿದಿನ ದೊರಕುವಂತಾದರೆ ಸಮಸ್ಯೆ ಸುರಳೀತವಾಗಿ ಬಗೆಹರಿಯುತ್ತದೆ. ನಿಜವಾದ ಅರ್ಥದಲ್ಲಿ ಅಧಿಕಾರ ವಿಕೇಂದ್ರೀಕರಣವಾಗಬೇಕು. ಈಗಲೂ ಉತ್ತರ ಕರ್ನಾಟಕದಲ್ಲಿ ಜನ ಈಗಲೂ ಜಿಲ್ಲಾಕೇಂದ್ರಗಳಿಗೆ ಬರುವುದು ಅನಿವಾರ್ಯವಾಗಿದೆ.