For the best experience, open
https://m.samyuktakarnataka.in
on your mobile browser.

ಉತ್ತರ ನಿರೀಕ್ಷಿಸಿ ಸಾಲು ಸಾಲು ಪ್ರಶ್ನೆಗಳು

10:58 AM Aug 06, 2024 IST | Samyukta Karnataka
ಉತ್ತರ ನಿರೀಕ್ಷಿಸಿ ಸಾಲು ಸಾಲು ಪ್ರಶ್ನೆಗಳು

ಸಿಎಂ ಸಿದ್ದರಾಮಯ್ಯ ಅವರಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಂದ ಕನ್ನಡಿಗರು ನಿರೀಕ್ಷಿಸುತ್ತಿರುವ ಉತ್ತರಗಳು ಎಂದು ಸಾಲ ಸಾಲು ಪ್ರಶ್ನೆಗಳ ಮೂಲಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ
1.) ಪ್ರತೀ ತಿಂಗಳು ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಇಲಾಖಾವಾರು, ಯೋಜನವಾರು ಆಗಿರುವ ವೆಚ್ಚವನ್ನ ಪರಿಶೀಲನೆ ನಡೆಸುತ್ತಾರೆ. ಆಗ ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಪ್ರಧಾನ ಕಾರ್ಯದರ್ಶಿಗಳು ತಮ್ಮ ಗಮನಕ್ಕೆ ತರಲಿಲ್ಲವೇ?

2.) ಪ್ರತಿ ತಿಂಗಳಿಗೊಮ್ಮೆ ರಾಜ್ಯಮಟ್ಟದ ಇಲಾಖಾವಾರು ಕೆಡಿಪಿ ಸಭೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆಯುತ್ತದೆ. ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಗಳು ಈ ಸಭೆಯನ್ನು ಆಯೋಜಿಸುತ್ತಾರೆ. ಈ ಸಭೆಯಲ್ಲಿ ಪ್ರತಿ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳ ಪ್ರಗತಿ ಸೇರಿದಂತೆ ಎಲ್ಲವನ್ನೂ ಸವಿವರವಾಗಿ ಪರಿಶೀಲನೆ ನಡೆಸಲಾಗುತ್ತದೆ. ಈ ಸಭೆಯಲ್ಲಾದರೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ತಮ್ಮ ಗಮನಕ್ಕೆ ಬರಲಿಲ್ಲವೇ? ಅಥವಾ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದರೇ?

3.) ಇಲಾಖೆಯ ಪ್ರಧಾನ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ನಡೆಸುವ ಪ್ರಗತಿ ಪರಿಶೀಲನಾ ಸಭೆ ಹೋಗಲಿ ಬಿಡಿ. ವರ್ಷಾಂತ್ಯದಲ್ಲಿ ಆರ್ಥಿಕ ಇಲಾಖೆ ಮುಂದಿನ ಸಾಲಿನ ಬಜೆಟ್ ರೂಪಿಸಲು ಪೂರ್ವಭಾವಿ ಸಭೆ ಹಮ್ಮಿಕೊಳ್ಳುತ್ತದೆ. ಈ ಸಭೆಯ ಸ್ವತಃ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತದೆ. ಆಗಲಾದರೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆದ ವೆಚ್ಚ, ಫಲಾನುಭವಿಗಳ ಮಾಹಿತಿಯನ್ನು ಹಣಕಾಸು ಇಲಾಖೆ ಗಮನಿಸಬೇಕಿತ್ತಲ್ಲವೇ? ಅಥವಾ ಗಮನಿಸಿಯೂ ಸುಮ್ಮನಿದ್ದು ಬಿಟ್ಟರೇ?

4.) ಅಹಿಂದ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿರುವ ನೀವು, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಹಣವನ್ನ ಲೂಟಿ ಮಾಡಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ಅಂತಃಕರಣ ಅನ್ನುವುದು ಇಲ್ಲವೇ?

5.) ತಳ ಸಮುದಾಯಗಳನ್ನ ಸಮಾಜದ ಮುಖ್ಯವಾಹಿನಿಗೆ ತರಲು ವಿನಿಯೋಗವಾಗಬೇಕಿದ್ದ ಹಣ ನೆರೆಯ ತೆಲಂಗಾಣ ರಾಜ್ಯದ ಚುನಾವಣೆಯಲ್ಲಿ ಹೆಂಡ, ಸಾರಾಯಿ, ಹವಾಲಾ ಪಾಲಾಗಿದೆಯಲ್ಲ ಸಿಎಂ ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ?

6.) ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಅಂತ ಸುಳ್ಳು ಆರೋಪ ಮಾಡಿ, ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದರಲ್ಲ ಸಿಎಂ ಸಿದ್ದರಾಮಯ್ಯನವರೇ, ಈಗ ದಲಿತರ 100% ಹಣವನ್ನ ಮದ್ಯದ ಅಂಗಡಿಗಳಿಗೆ, ಒಡವೆ ಅಂಗಡಿಗಳಿಗೆ RTGS, PhonePe, GooglePe ಮಾಡಿ ಸೆಟಲ್ಮೆಂಟ್ ಮಾಡಿದ್ದೀರಲ್ಲಾ, ನಿಮ್ಮ ಮೇಲೆ ನಾವು ಈಗ ಯಾವ ಅಭಿಯಾನ ಮಾಡಬೇಕು? ಎಂದಿದ್ದಾರೆ.

Tags :