For the best experience, open
https://m.samyuktakarnataka.in
on your mobile browser.

ಉತ್ಥಾನ ದ್ವಾದಶಿ

04:30 AM Nov 12, 2024 IST | Samyukta Karnataka
ಉತ್ಥಾನ ದ್ವಾದಶಿ

ಇಂದು ಉತ್ಥಾನ ದ್ವಾದಶಿ. ಭಗವಂತನು ಯೋಗ ನಿದ್ರೆಯಿಂದ ಹೊರಬರುವ ದಿವಸ. ಆಷಾಢ ಶುದ್ಧ ಏಕಾದಶಿಯಂದು ಯೋಗನಿದ್ರೆಯನ್ನು ಪ್ರವೇಶಿಸಿದ ಶ್ರೀಮನ್ನಾರಾಯಣನು ಈ ದಿನ ಯೋಗನಿದ್ರೆಯಿಂದ ಹೊರಬರುತ್ತಾನೆ. ಅಂದು ಶಯನೋತ್ಸವ ಮಾಡಿದಂತೆಯೇ ಇಂದು ಉತ್ಥಾನೋತ್ಸವ ಮಾಡಬೇಕು.
ಜಗತ್ತಿನಲ್ಲಿರುವ ಎಲ್ಲಾ ಚೇತನಗಳಿಗೆ ನಿದ್ರೆಯೆಂಬ ಅವಸ್ಥೆಯುಂಟು. ಎಲ್ಲ ಪ್ರಾಣಿ, ಪಶು, ಕೀಟಗಳು ತಮ್ಮದೇ ಆದ ರೀತಿಯಲ್ಲಿ ನಿದ್ರಿಸುತ್ತವೆ. ಅದೇ ರೀತಿಯಲ್ಲಿ ಜಗದೀಶ್ವರನಿಗೆ ಅವನದ್ದೇ ರೀತಿಯಲ್ಲಿ ಒಂದು ನಿದ್ರೆ ಇರುತ್ತದೆ. ಜೀವಿಗಳು ಅಜ್ಞಾನದಲ್ಲಿ ನಿದ್ರಿಸಿದರೆ, ಅವನು ಜ್ಞಾನದಲ್ಲಿ ನಿದ್ರಿಸುತ್ತಾನೆ. ಆದ್ದರಿಂದಲೇ ಜ್ಞಾನಿಗಳು ಅವನ ಶಯನೋತ್ಸವ, ಉತ್ಥಾನನೋತ್ಸವಗಳನ್ನು ಆಚರಿಸುತ್ತಾರೆ. ಉಳಿದ ಯಾವುದೇ ಜೀವಿಗಳ ಶಯನೋತ್ಸವ ಆಚರಿಸುವುದಿಲ್ಲ, ಆದ್ದರಿಂದಲೇ ಉತ್ಥಾನನೋತ್ಸವವೂ ಇಲ್ಲ.
ಪುರಾಣಗಳು ಹೇಳುವಂತೆ ಭಗವಂತನೇ ಈ ದ್ವಾದಶಿಯಂದು ಅವನ ಉತ್ಥಾನದ ದಿವಸ ಎಂಬುದಾಗಿ ವ್ಯವಸ್ಥೆ ಮಾಡಿದ್ದಾನೆ. ಇಯಂ ಚ ದ್ವಾದಶೀ ದೇವಾ ಪ್ರಬೋಧಾರ್ಥಂ ವಿನಿರ್ಮಿತಾ ಟ ತಯೈವ ಸರ್ವಲೋಕಾನಾಮ್ ಹಿತಾರ್ಥಮ್ ಶೇಷಶಾಯಿನಾ' ಎಂಬ ಪ್ರಾರ್ಥನೆಯಲ್ಲಿ ಇದು ಗೊತ್ತಾಗುತ್ತದೆ. ಜಗದೊಡೆಯನ ನಿದ್ರೆ ಜಾಗರಗಳನ್ನು ಅವನೇ ನಿರ್ಧರಿಸಬೇಕಲ್ಲವೇ, ಅಜ್ಞಾನಿಗಳು ನಿರ್ಧರಿಸಲು ಸಾಧ್ಯವಿಲ್ಲ. ಭಗವಂತನ ಪ್ರಬೋಧೋತ್ಸವದ ಜೊತೆಗೆ ತುಳಸಿ ವಿವಾಹ ಇಂದಿನ ಇನ್ನೊಂದು ವಿಶೇಷ. ಎಲ್ಲರ ಮನೆಯ ಮುಂದೆ ಶೋಭೆ ಉಂಟುಮಾಡುತ್ತ ಪುಟ್ಟದಾದ ಜಾಗದಲ್ಲಿ ಇರುವ ಚಿಕ್ಕ ಗಿಡವಾದರೂ ಮಹತ್ತಾದ ಪರಿಣಾಮವನ್ನು ತುಳಸಿ ಗಿಡವು ಬೀರುತ್ತದೆ. ವಾತಾವರಣ ಶುದ್ಧಿ ಅದರ ಮೊದಲ ಪರಿಣಾಮ. ಸುವಾಸಿನಿಯರಿಗೆ ತುಳಸಿ ವಿಷ್ಣುವಿನ ಪತ್ನಿಯಾಗಿ ಸುವಾಸಿನಿಯಾಗಿ ಕಾಣುತ್ತಾಳೆ. ಯತಿಗಳಿಗೆ ವೈರಾಗ್ಯ ಸೂಚಕವಾಗಿ ಕಾಣುತ್ತದೆ. ಯಾಕೆಂದರೆ ಸಾಮಾನ್ಯವಾಗಿ ಯತಿಗಳಿಗೆ ತುಳಸಿ ಹಾರವನ್ನು ಸಮರ್ಪಿಸಲಾಗುತ್ತದೆ. ಭಗವಂತನಿಗೆ ಅತ್ಯಂತ ಪ್ರೀತಿ ಪಾತ್ರವಾದ ಪಾತ್ರವನ್ನು ನಿರ್ವಹಿಸುತ್ತದೆ. ತುಲಸಿಯ ಬಗ್ಗೆ ಇದ್ದ ಇನ್ನೊಂದು ಪ್ರಸಿದ್ಧಿ ಏನೆಂದರೆ ಅದು ಅಮೃತ ಮಥನ ಕಾಲದಲ್ಲಿ ಉದ್ಭವವಾದದ್ದು. ಅಮೃತ ಮಥನದ ಸಂದರ್ಭದಲ್ಲಿ ವಿಷ್ಣುವಿನ ಹರ್ಷಪೂರ್ಣವಾದ ಕಣ್ಣೀರಿನಿಂದ ತುಳಸಿ ಉದ್ಭವವಾದದ್ದು ಎಂಬುದಾಗಿ ಹೇಳುತ್ತಾರೆ.ಅಮೃತಮಥನಕಾಲೇ ಹರ್ಷಪೂರ್ಣಸ್ಯ ವಿಷ್ಣೋರ್ನಯನ ಸಲಿಲಬೀಜಾತ್ ಉದ್ಭವಾ ಕೃಷ್ಣವರ್ಣಾ ಟ ಸುರಗಣಮುನಿವೃಂದ್ಯೆಃ ವಂದಿತಾ ನಂದಸೂನೌ ಚರಣಯುಗಳಪದ್ಮಮ್ ಪ್ರಾಪ್ಯ ಸಂಸ್ಥಾ ಭವಾನಿ'
ಆರೋಗ್ಯದ ದೃಷ್ಟಿಯಿಂದಲೂ ತುಳಸಿಯ ಮಹತ್ವ ಪ್ರಸಿದ್ಧವಾಗಿದೆ. ಪ್ರತಿದಿನ ಭೋಜನಾನಂತರ ಎರಡು ತುಳಸಿ ಎಲೆಗಳನ್ನು ತಿನ್ನುವ ಪದ್ಧತಿಯಿದ್ದರೆ ಆರೋಗ್ಯಕ್ಕೆ ತುಂಬಾ ಅನುಕೂಲ. ಆಯುರ್ವೇದದಲ್ಲಿ ತುಳಸಿಯು ಔಷಧದ ರೂಪದಲ್ಲಿ ಬಳಕೆಯಾಗುತ್ತದೆ. ಅತ್ಯಂತ ದಿವ್ಯವಾದ ತುಳಸಿ ಪತ್ರವನ್ನು ದೇವದೇವೋತ್ತಮರಿಗೆ ಸಮರ್ಪಿಸುವುದು ವಿಷ್ಣು ಭಕ್ತರಿಗೆ ಅತ್ಯಂತ ಹರ್ಷದ ಸಂಗತಿ. ಆದ್ದರಿಂದಲೇ ತುಳಸಿ ವಿವಾಹವನ್ನು ಆಚರಿಸುತ್ತಾರೆ. ಭಗವಂತನಿಗೆ ತುಳಸಿ ಅರ್ಪಿಸುವಿಕೆಯನ್ನೇ ಉತ್ಸವವನ್ನಾಗಿ ಆಚರಿಸುತ್ತಾರೆ.