ಉದ್ಯೋಗ ವಂಚನೆ: ಡಿವೈಎಫ್‌ಐ ನಾಯಕಿ, ಶಿಕ್ಷಕಿ ವಿರುದ್ಧ ದೂರು
05:15 PM Oct 08, 2024 IST
|
Samyukta Karnataka
ಮಂಗಳೂರು: ಉದ್ಯೋಗದ ಭರವಸೆ ನೀಡಿ ಸುಮಾರು ೧೫ ಲಕ್ಷ ರೂ. ಪಡೆದು ವಂಚನೆ ನಡೆಸಿರುವುದಾಗಿ ಆರೋಪಿಸಿ ಶಿಕ್ಷಕಿ, ಡಿವೈಎಫ್‌ಐ ನಾಯಕಿ ಸಚಿತಾ ರೈ ವಿರುದ್ಧ ಕಾಸರಗೋಡು ಸಮೀಪದ ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿದೂರು ಪದಕ್ಕಲ್ ಹೌಸ್‌ನ ನಿಶ್ಮಿತಾ ಶೆಟ್ಟಿ ಅವರ ದೂರಿನಂತೆ ಶೇಣಿ ಬಲ್ತಕಲ್ಲಿನ ಸಚಿತಾ ರೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಪಿಸಿಆರ್‌ಐನಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆ ನೀಡಿ ೨೦೨೩ರ ಮೇ ೩೧ರಿಂದ ೨೦೨೩ರ ಆಗಸ್ಟ್ ೨೫ರ ನಡುವೆ ಹಲವು ಕಂತುಗಳಾಗಿ ೧೫,೦೫,೭೯೬ ರೂ. ಪಡೆದು ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಹಲವು ಬಾರಿ ವಿಚಾರಿಸಿದರೂ ಉದ್ಯೋಗ ಲಭಿಸಲಿಲ್ಲ. ನೀಡಿದ ಹಣ ಕೇಳಿದರೂ ನೀಡಲು ಮುಂದಾಗದಿರುವುದರಿಂದ ನಿಶ್ಮಿತಾ ಶೆಟ್ಟಿ ದೂರು ನೀಡಿದ್ದಾರೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಸಚಿತಾ ರೈನ್ನು ಡಿವೈಎಫ್‌ಐನಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ.
Next Article