For the best experience, open
https://m.samyuktakarnataka.in
on your mobile browser.

ಉಪಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಜನಾದೇಶವಲ್ಲ

04:08 PM Nov 26, 2024 IST | Samyukta Karnataka
ಉಪಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಜನಾದೇಶವಲ್ಲ

ಬೆಂಗಳೂರು: ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ನೀಡಿರುವ ಜನಾದೇಶವಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಭ್ರಮನಿರಸನಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಉಪ ಚುನಾವಣೆ ಸರ್ಕಾರದ ಪರವಾಗಿರುತ್ತವೆ. ನಾವು ಅಧಿಕಾರದಲ್ಲಿ ಇದ್ದಾಗ 17 ಉಪ ಚುನಾವಣೆಗಳಲ್ಲಿ 13 ಉಪ ಚುನಾವಣೆ ಗೆದ್ದಿದ್ದೇವೆ. ಕಾಂಗ್ರೆಸ್ ನವರು ಇದು ಸರ್ಕಾರದ ಪರ ಜನರ ತೀರ್ಪು ಅಂತ ತಿಳಿದುಕೊಳ್ಳುವ ಅವಗತ್ಯವಿಲ್ಲ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಆಗಿಲ್ಲ ಅಂತ ಭ್ರಮ ನಿರಸನಗೊಂಡಿದ್ದಾರೆ. ಈ ಚುನವಣೆ ಫಲಿತಾಂಶ ಉಪಚುನಾವಣೆ ನಡೆದ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಿದರು.
ಇನ್ನು ಗ್ಯಾರೆಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಆಡಳಿತ ಪಕ್ಷದ ಶಾಸಕರೇ ತಮ್ಮ ಪಕ್ಷದ ವೇದಿಕೆಯಲ್ಲಿ ಹೇಳಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಹಣಕಾಸಿನ ಸಿದ್ದತೆ ಮಾಡಿಕೊಳ್ಳದೇ ಗ್ಯಾರೆಂಟಿ ಯೋಜನೆ ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಲಕ್ಷ ಕೋಟಿಗಿಂತಲೂ ಹೆಚ್ಚು ಸಾಲ ಮಾಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣಕಾಸು ನಿರ್ವಹಣೆ ಕಷ್ಟವಾಗಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಸುಮಾರು ಎರಡು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಗ್ರಾಮ ಪಂಚಾಯತಿಗಳು ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿದೆ. ಅಂಗನವಾಡಿ ಕಾರ್ಯಕರ್ತೆಯರು, ಗುತ್ತಿಗೆ ನೌಕರರಿಗೆ ಸಂಬಳ ಆಗುತ್ತಿಲ್ಲ. ಹಣ ಬಿಡುಗಡೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ಟೆಂಡರ್ ಕರೆದರೂ ಕೆಲಸ ಮಾಡಲು ಕಾಂಟ್ರ್ಯಾಕ್ಟರ್ ಬರುತ್ತಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗಿದಿಯಾ ಎನ್ನುವ ಪ್ರಶ್ನೆಗೆ ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಎಲ್ಲರೂ ಬಿಜೆಪಿ ಪರವಿದ್ದಾರೆ. ಕೆಲವು ವಿಚಾರಗಳಲ್ಲಿ ಭಿನ್ನ ಅಭಿಪ್ರಾಯಗಳಿವೆ. ಒಂದು ತಿಂಗಳಲ್ಲಿ ಎಲ್ಲವೂ ಸರಿಯಾಗುವ ವಿಶ್ವಾಸವಿದೆ. ಬಿಜೆಪಿಯ ಒಂದು ತಂಡ ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಕ್ರಮವಾಗಿ ಗನ್ ಮಾರಾಟ ಮಾಡುತ್ತಿರುವ ಜಾಲದ ಕುರಿತು ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪೊಲಿಸ್ ಸ್ಟೇಷನ್‌ಗಳು, ಕಲೆಕ್ಷನ್ ಸೆಂಟರ್ ಆಗಿವೆ. ಭಯೊತ್ಪಾದನೆಗೆ ಬೆಂಬಲಕೊಡುವವರನ್ನು ರಕ್ಷಿಸುತ್ತಾರೆ. ಬಂಗ್ಲಾ ನಿರಾಶ್ರಿತರು ನುಸುಳುತ್ತಿದ್ದಾರೆ‌. ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ಕಷ್ಟವಾಗಲಿದೆ ಎಂದು ಹೇಳಿದರು.