ಉಪ ತಹಶೀಲ್ದಾರ್ ಲೋಕಾ ಬಲೆಗೆ
ದಾವಣಗೆರೆ: ರೈತ ಸಹೋದರರಿಗೆ ಬೋನಾಪೈಡ್ ಪ್ರಮಾಣಪತ್ರ ನೀಡಲು ೨ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ೫೦೦ ಪಡೆದು, ಬಾಕಿ ೧೫೦೦ ರೂ. ಪಡೆಯುತ್ತಿದ್ದ ವೇಳೆ ಚನ್ನಗಿರಿ ತಾಲೂಕು ಸಂತೇಬೆನ್ನೂರು ಹೋಬಳಿ-೨(ನಾಡ ಕಚೇರಿ, ದೇವರಹಳ್ಳಿ)ರ ಮಹಿಳಾ ಉಪ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಉಪ ತಹಸೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದ ಅಧಿಕಾರಿ. ಹಿರೇಗಂಗೂರು ಗ್ರಾಮದ ರೈತ ಸಹೋದರರಾದ ಎಸ್.ಆರ್.ಕುಮಾರ ಹಾಗೂ ಗಿರೀಶ ಇಬ್ಬರೂ ಉಪತಹಸೀಲ್ದಾರ್ ಕಚೇರಿಗೆ ಬೋನಾಪೈಡ್ ಪ್ರಮಾಣ ಪತ್ರ ಪಡೆಯಲು ಆನ್‌ಲೈನ್ ಮೂಲಕ ೨೬.೯.೨೦೨೪ರಂದು ಅರ್ಜಿ ಸಲ್ಲಿಸಿದ್ದರು. ಎಲ್ಲಾ ದಾಖಲೆ ಸರಿ ಇದ್ದರೂ ಗುರುತಿನ ಚೀಟಿ ನೀಡಿಲ್ಲವೆಂದರು ಅ. ೫ರಂದು ಹಿಂಬರಹ ನೀಡಿ, ಅರ್ಜಿ ತಿರಸ್ಕರಿಸಲಾಗಿತ್ತು. ೮ರಂದು ೨ನೇ ಸಲ ಅರ್ಜಿ ಸಲ್ಲಿಸಿದ್ದು, ೧೦ರಂದು ಅವರ ಬಳಿ ನಮ್ಮ ಕೆಲಸದ ಬಗ್ಗೆ ಪ್ರಶ್ನಿಸಿದೆವು. ಆಗ ೨ ಸಾವಿರ ರೂ. ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಹೇಳಿ, ಮುಂಗಡವಾಗಿ ೫೦೦ ರೂ.ಗಳನ್ನು ಪಡೆದಿದ್ದರು. ಲಂಚದ ಹಣ ಕೊಡಲು ಮನಸ್ಸಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ೧೫ರಂದು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.