ಉ.ಕ.ದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಟಕ್ಕುಂಟು, ಲೆಕ್ಕಕ್ಕಿಲ್ಲ
ಷಣ್ಮುಖ ಕೋಳಿವಾಡ
ಎನ್ಡಿಎ ಬಲ ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿ ಬಿಜೆಪಿ ರಾಜ್ಯದಲ್ಲಿ ಜೆಡಿಎಸ್ ಜೊತೆ ಕೈಜೋಡಿಸಿರುವುದು ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ.
ದಕ್ಷಿಣ ಭಾಗದಲ್ಲಿ ಈಗಾಗಲೇ ಬಿಜೆಪಿ-ಜೆಡಿಎಸ್ ಸ್ಥಾನ ಹೊಂದಾಣಿಕೆಗಾಗಿ ಕಸರತ್ತು ನಡೆದಿದ್ದರೆ ಉತ್ತರದ ಭಾಗದಲ್ಲಿ ಜೆಡಿಎಸ್ ಅಸ್ತಿತ್ವದ ಭರವಸೆಯ ಮಾತುಗಳೂ ಇಲ್ಲದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜೆಡಿಎಸ್ನವರಿಗೂ ಮನ್ನಣೆ ನೀಡಬೇಕಾಗಿದೆ. ಅವರನ್ನೂ ಕರೆದುಕೊಂಡು ಚುನಾವಣಾ ಸಿದ್ಧತೆಯಲ್ಲಿ ತೊಡಗಬೇಕಿದೆ ಎಂಬ ವೇದನೆಯ ಮಾತುಗಳು ಇಲ್ಲಿನ ಬಿಜೆಪಿ ಮೂಲದಿಂದ ಬರುತ್ತಿವೆ.
ದಕ್ಷಿಣದ ೪-೬ ಕ್ಷೇತ್ರಗಳ ಅಸ್ತಿತ್ವ ಹೊಂದಿದ ಜೆಡಿಎಸ್ ಜೊತೆ ಇಡೀ ರಾಜ್ಯವ್ಯಾಪಿ ಬಲಗೊಂಡ ಬಿಜೆಪಿ ಹೊಂದಿಕೊಂಡು ಹೋಗಬೇಕಿದೆ. ಕಳೆದ ಚುನಾವಣೆಯಲ್ಲಿ ೨೫ ಸ್ಥಾನಗಳನ್ನು ಗೆದ್ದುಕೊಂಡ ಬಿಜೆಪಿಗೆ ಈಗ ಕೇಂದ್ರದ ಸಾಧನೆಯ ಜೊತೆಗೆ ಮೋದಿ ನಾಮಬಲವೂ ಇದ್ದುದರಿಂದ ವಿನಾಕಾರಣ ಜೆಡಿಎಸ್ನವರನ್ನು ಜೊತೆಗೆ ಸೇರಿಕೊಂಡು ಹೋಗಬೇಕಾಗಿದೆ ಎಂದು ಈ ಭಾಗದ ಕಾರ್ಯಕರ್ತರು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ತುಂಬಿದ್ದೇ ಉತ್ತರ ಕರ್ನಾಟಕ. ಹುಬ್ಬಳ್ಳಿ-ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಬಿಜೆಪಿ ಈ ಭಾಗದಲ್ಲಿ ಮೂರು ದಶಕಗಳ ಹಿಂದಿನಿಂದಲೇ ಬೆಳೆಯುತ್ತ ಸಾಗಿದೆ. ಈ ಹಿಂದೆ ಜನತಾದಳ ಈ ಭಾಗದಲ್ಲೂ ಬಲಾಢ್ಯವಾಗಿ ಕಾಂಗ್ರೆಸ್ಗೆ ರ್ಯಾಯವಾಗಿತ್ತು. ಆದರೆ ಕಾಲಘಟ್ಟದಲ್ಲಿ ದಳ ಸ್ಥಾನವನ್ನು ಬಿಜೆಪಿ ಆಕ್ರಮಿಸಿಕೊಂಡಿದೆ. ಕಳೆದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನಗಳಲ್ಲಿ ಸ್ವಲ್ಪ ಕುಸಿತ ಕಂಡ ಬಿಜೆಪಿಗೆ ಉತ್ತರ ಕರ್ನಾಟಕವೇ ಆಸರೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಆ ವಾತಾವರಣ ಇಲ್ಲ. ಧಾರವಾಡ ಜಿಲ್ಲೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಅಲ್ಲಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳಿದ್ದರೂ ಚುನಾವಣೆಯಲ್ಲಿ ಗೆಲುವು ಸಾಧಿಸುವಷ್ಟು ಸದೃಢವಾಗಿಲ್ಲ. ಕಿತ್ತೂರು ಕರ್ನಾಟಕ ಬಹುತೇಕ ಭಾಗದಲ್ಲಂತೂ ಜೆಡಿಎಸ್ ಅಸ್ತಿತ್ವವೇ ಇಲ್ಲವೆನ್ನಬಹುದು.
ಮೊದಲಿನಿಂದಲೂ ಜನತಾ ಪರಿವಾರಕ್ಕೆ ಶಕ್ತಿಯಾಗಿದ್ದ ಬಸವರಾಜ ಹೊರಟ್ಟಿ ತಮ್ಮ ಕಳೆದ ಚುನಾವಣೆ ಸಂದರ್ಭದಲ್ಲಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದರು. ಹಿಂದೊಮ್ಮೆ ಜೆಡಿಎಸ್ನಿಂದ ನವಲಗುಂದದ ಶಾಸಕರಾಗಿದ್ದ ಕೋನರಡ್ಡಿ ಈಗ ಕಾಂಗ್ರೆಸ್ ಶಾಸಕರಾಗಿದ್ದಾರೆ. ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಕ್ಷೇತ್ರ, ಕಲ್ಯಾಣ ಕರ್ನಾಟಕದ ಗುರುಮಿಠಕಲ್, ದೇವದುರ್ಗ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಶಾಸಕರಿದ್ದು ಇಡೀ ಉತ್ತರ ಕರ್ನಾಟಕದಲ್ಲಿ ಕೇವಲ ೪ ಸ್ಥಾನಗಳು ಜೆಡಿಎಸ್ ಪಾಲಿಗಿವೆ.
ಅವರ ಗೆಲುವಿನಲ್ಲೂ ವೈಯಕ್ತಿಕ ಮತ್ತು ಜಾತಿ ವರ್ಚಸ್ಸೂ ಮುಖ್ಯ ಕಾರಣವೆನ್ನುವದನ್ನು ಅಲ್ಲಗಳೆಯಲಾಗದು.
ಅನಿವಾರ್ಯದ ಮೈತ್ರಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನಿಂದಾಗಿ `ಅನ್ನ ಹಳಸಿತ್ತು, ಶ್ವಾನವೂ ಹಸಿದಿತ್ತು' ಎಂಬಂತೆ ಬಿಜೆಪಿ-ಜೆಡಿಎಸ್ ಅನಿವರ್ಯವಾಗಿ ಮೈತ್ರಿ ಏರ್ಪಡಿಸಿಕೊಂಡಿವೆ. ಆದರೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಜೆಡಿಎಸ್ ತನ್ನ ಬಲ ಕಳೆದುಕೊಂಡಿದ್ದರಿಂದ ಬಿಜೆಪಿಗೆ ಈ ಮೈತ್ರಿಯಿಂದ ಹೆಚ್ಚಿನ ಲಾಭವಾಗುವ ಸಾಧ್ಯತೆಗಳು ಇಲ್ಲ. ಈ ಮೊದಲು ಇದ್ದ ಚಿತ್ರಣದಂತೆ ಬಿಜೆಪಿ ಇಲ್ಲಿ ಏಕಾಂಗಿಯಾಗಿಯೇ ಕಾಂಗ್ರೆಸ್ನೊಂದಿಗೆ ಸೆಣಸಾಟ ಮುಂದುವರಿಸಬೇಕಿದೆ. ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯ ಬೇರುಗಳು ಸಡಿಲಗೊಂಡಿದ್ದು ಕಾಂಗ್ರೆಸ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಪರಿಸ್ಥಿತಿಯ ಲಾಭವನ್ನು ಪಡೆಯಲು ಕಾಂಗ್ರೆಸ್ ಹೆಚ್ಚು ಪ್ರಯಾಸಪಡಬೇಕಿದ್ದು ಧಾರವಾಡ ಸೇರಿ ಒಂದೆರಡು ಕ್ಷೇತ್ರಗಳ ಹೊರತಾಗಿ ಬಿಜೆಪಿಗೆ ಗೆಲ್ಲುವ ಗ್ಯಾರಂಟಿ ಕ್ಷೇತ್ರಗಳು ಕಾಣುತ್ತಿಲ್ಲ. ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಸವಾಲು ನೀಡುವ ನಿಚ್ಚಳ ವಾತಾವರಣವಿದ್ದು ಕೇವಲ ಮೋದಿ ನಾಮಬಲವೊಂದೇ ಬಿಜೆಪಿ ಕೈ ಹಿಡಿಯಬೇಕು. ಬಹುತೇಕ ಸಂಸದರೂ ಜನಸಾಮಾನ್ಯರು ಒಟ್ಟಿಗಿರಲಿ ಕಾರ್ಯ ಕರ್ತರಿಂದಲೇ ದೂರ ಇದ್ದು ಆಕ್ರೋಶವನ್ನೂ ಎದುರಿಸುವ ಸ್ಥಿತಿ ಇರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.