ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಋಣಭಾರದ ತೀರುವಳಿಗೆ ಹೆಜ್ಜೆ

02:26 AM Jul 24, 2024 IST | Samyukta Karnataka

ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಮಾತುಗಳನ್ನು ಕಾರ್ಯರೂಪಕ್ಕೆ ತರುವುದು ಬದ್ಧತೆಯ ಪ್ರಶ್ನೆ. ಇದಕ್ಕಿಂತಲೂ ಮುಖ್ಯವಾಗಿ ಜನಾದೇಶವನ್ನು ಕೊಟ್ಟ ಮಹಾಜನತೆಯ ಇಷ್ಟಾರ್ಥಗಳನ್ನು ಈಡೇರಿಸುವುದು ಸವಾಲಿನ ಪ್ರಶ್ನೆ. ಬದ್ಧತೆ ಹಾಗೂ ಸವಾಲುಗಳ ಸಾಕ್ಷಾತ್ಕಾರಕ್ಕೆ ಬೇಕಾದದ್ದು ಆಡಳಿತಾತ್ಮಕ ಸಿದ್ಧತೆ ಹಾಗೂ ರಾಜಕೀಯ ಸಂಕಲ್ಪ. ಆಡಳಿತಾತ್ಮಕ ಸಿದ್ಧತೆ ಎಂದಾಗ ನಿರ್ಣಾಯಕವಾಗುವುದು ಬೊಕ್ಕಸದ ಸ್ಥಿತಿಗತಿ. ದಿನದಿಂದ ದಿನಕ್ಕೆ ಏರುತ್ತಿರುವ ಹಣದುಬ್ಬರದ ನಡುವೆ ಬೆಲೆ ಏರಿಕೆಯ ಗುಮ್ಮನನ್ನು ನಿಗ್ರಹಿಸಿಕೊಂಡು ದೇಶವೊಂದರ ಕಲ್ಯಾಣವನ್ನು ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಕೇಂದ್ರ ಸರ್ಕಾರಕ್ಕೆ ಇದೊಂದು ರೀತಿಯ ಋಣಭಾರವನ್ನು ಪರಿಹರಿಸಿಕೊಳ್ಳಲು ಇರುವ ರಾಜಮಾರ್ಗವೆಂದರೆ ಮುಂಗಡ ಪತ್ರ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ೭ನೇ ಬಾರಿಗೆ ಮಂಡಿಸಿರುವ ದೇಶದ ಮುಂಗಡ ಪತ್ರದಲ್ಲಿ ಬದುಕಿನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ನೆರವಾಗುವ ಹಲವು ಕ್ರಮಗಳ ಜೊತೆಗೆ ಸರ್ಕಾರ ರಚನೆಗೆ ಕೈಹಿಡಿದ ಮಿತ್ರಪಕ್ಷಗಳ ಅಪೇಕ್ಷೆಯನ್ನು ಪೂರೈಸಿರುವ ಕ್ರಮ ನಿಜವಾದ ಅರ್ಥದಲ್ಲಿ ರಾಜಕೀಯ ಅನಿವಾರ್ಯತೆ ಅಷ್ಟೇ ಅಲ್ಲ ಇದೊಂದು ರೀತಿಯ ಜಾಣ್ಮೆಯ ನಡೆ ಕೂಡಾ.
ಗ್ರಾಮೀಣ ಬದುಕಿನ ಸುಧಾರಣೆಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಬಡ್ಡಿರಹಿತ ಸಾಲ ಮಂಜೂರಾತಿಗಾಗಿ ಹೆಚ್ಚಿನ ಪ್ರಮಾಣದ ಹಣ ಮೀಸಲಿಟ್ಟಿರುವುದು ಸರ್ಕಾರದ ಆದ್ಯತೆಯನ್ನು ಎತ್ತಿತೋರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಸುಧಾರಣೆಯಾಗದಿದ್ದರೆ ಗ್ರಾಮಗಳು ವೃದ್ಧಾಶ್ರಮಗಳಾಗಿ ಪರಿವರ್ತನೆಯಾಗುವ ಕಾಲ ದೂರವಿಲ್ಲ ಎಂಬ ಮಾತುಗಳು ಜನಜನಿತವಾಗುತ್ತಿರುವ ಸಂದರ್ಭದಲ್ಲಿ ಕೃಷಿ ಹಾಗೂ ರೈತ ಸಮುದಾಯದ ಕಲ್ಯಾಣಕ್ಕೆ ಪೂರಕವಾದ ಕ್ರಮಗಳನ್ನು ಘೋಷಿಸಿರುವುದು ಮೆಚ್ಚುವ ಸಂಗತಿಯೇ. ಈಗಿನ ಸಂದರ್ಭದಲ್ಲಿ ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಹಣಕಾಸು ನೆರವನ್ನು ಘೋಷಿಸುವ ಸ್ಥಿತಿ ಇಲ್ಲ. ಏಕೆಂದರೆ, ಎಲ್ಲಾ ರಾಜ್ಯಗಳೂ ಕೂಡಾ ಇಂತಹ ಪ್ರಸ್ತಾಪವನ್ನು ದೊಡ್ಡ ದನಿಯಲ್ಲಿ ಮುಂದಿಡುವುದು ಖಂಡಿತ. ಸರ್ಕಾರದ ರಚನೆಗೆ ಬೆನ್ನೆಲುಬಾಗಿ ನಿಂತ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮುಖ್ಯಸ್ಥರು ಆಗಿರುವ ಚಂದ್ರಬಾಬು ನಾಯ್ಡು ಹಾಗೂ ಸಂಯುಕ್ತ ಜನತಾ ದಳದ ಪ್ರಶ್ನಾತೀತ ನಾಯಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿ ಹೆಚ್ಚಿನ ಪ್ರಮಾಣದ ಹಣಕಾಸು ನೆರವನ್ನು ಒದಗಿಸುವಂತೆ ಹಕ್ಕೊತ್ತಾಯ ಮಂಡಿಸಿದ್ದನ್ನು ಕೇಂದ್ರ ಸರ್ಕಾರ ನಿರಾಕರಿಸುವುದು ಎಷ್ಟು ಕಷ್ಟವೋ ಪುರಸ್ಕರಿಸುವುದು ಕೂಡಾ ಅಷ್ಟೇ ಕಷ್ಟ. ರಾಜಕೀಯವಾಗಿ ಇದೊಂದು ನಾಜೂಕಿನ ಕೆಲಸ. ಈ ಸಂಕಟದಿಂದ ಪಾರಾಗಲು ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಕಂಡುಕೊಂಡಿರುವ ಮಾರ್ಗವೆಂದರೆ ಎರಡೂ ರಾಜ್ಯಗಳ ನೆರವಿಗೆ ವಿಶೇಷ ಅನುದಾನ ಘೋಷಣೆ. ಜೊತೆಗೆ ಆರ್ಥಿಕ ಚಟುವಟಿಕೆಗೆ ಪೂರಕವಾಗುವ ಪ್ರಮುಖ ಯೋಜನೆಗಳ ಪ್ರಕಟ. ಹೀಗೆ ಮಾಡುವ ಮೂಲಕ ವಿಶೇಷ ಸ್ಥಾನಮಾನ ನೀಡದಿದ್ದರೂ ರಾಜ್ಯಗಳಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಪೂರೈಸಿದ ಸಮಾಧಾನ. ಈ ವಿಚಾರದಲ್ಲಿ ಏನಾದರೂ ಕೊಂಚ ಎಡವಿದ್ದರೂ ಕೂಡಾ ಸರ್ಕಾರದ ಭವಿಷ್ಯದ ಮೇಲೆ ತೂಗುಗತ್ತಿ.
ದೇಶದ ಮುಂಗಡಪತ್ರವನ್ನು ಗಮನಿಸುವಾಗ ರಾಜ್ಯಗಳ ಇಲ್ಲವೇ ಪ್ರದೇಶಗಳ ಸೀಮಿತ ದೃಷ್ಟಿಕೋನದಿಂದ ನೋಡುವುದು ಸಾಧುವಲ್ಲ. ಏಕೆಂದರೆ, ಮುಂಗಡ ಪತ್ರದ ಹೆಚ್ಚಿನ ಪ್ರಮಾಣದ ಸಂಪನ್ಮೂಲ ರಕ್ಷಣಾ ಬಾಬಿಗೆ ಹೋಗುತ್ತದೆ. ಇದು ಯಾವುದೇ ರಾಜ್ಯದ ಕಲ್ಯಾಣಕ್ಕೆ ಸಂಬಂಧಪಟ್ಟಿದ್ದಲ್ಲ. ಆದರೆ, ಎಲ್ಲಾ ರಾಜ್ಯಗಳ ಭದ್ರತೆಗೆ ಆಗಲೇಬೇಕಾದ ಕೆಲಸವಿದು. ಒಟ್ಟಾರೆ ಸಮಾಜದ ದುರ್ಬಲ ವರ್ಗಗಳು ಮುಖ್ಯವಾಗಿ ಪರಿಶಿಷ್ಟ ಜಾತಿ-ಜನಾಂಗದವರನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಗಳು ಮೆಚ್ಚುಗೆಗೆ ಅರ್ಹ.
ಬಹಳ ವರ್ಷಗಳ ನಂತರ ಆದಾಯ ತೆರಿಗೆ ವ್ಯಾಪ್ತಿಯ ಜೇನುಗೂಡಿಗೆ ಕೇಂದ್ರ ಸರ್ಕಾರ ಕೈಹಾಕಿ ಒಂದರ್ಥದಲ್ಲಿ ಮಧ್ಯಮ ವರ್ಗದವರ ಮೆಚ್ಚುಗೆಗೆ ಪಾತ್ರವಾಗಿದೆ. ಆದಾಯ ತೆರಿಗೆ ಮಿತಿಯನ್ನು ವಾರ್ಷಿಕ ಮೂರು ಲಕ್ಷ ವರಮಾನದವರೆಗೆ ತೆರಿಗೆ ಮುಕ್ತ ಮಾಡಿರುವ ಕ್ರಮ ಇದ್ದುದರಲ್ಲೇ ಸಮಾಧಾನಕರ. ಇನ್ನು ಉಳಿದ ಶ್ರೇಣಿಗಳಲ್ಲಿಯೂ ಕೂಡಾ ಕೊಂಚ ಮಾರ್ಪಾಟಾಗಿದೆ. ಆದಾಯ ತೆರಿಗೆ ಬಾಬು ಕೇಂದ್ರ ಸರ್ಕಾರದ ಬೊಕ್ಕಸದ ಪ್ರಮುಖ ಮಾರ್ಗ. ಇದರಲ್ಲಿ ರಿಯಾಯ್ತಿ ವಿನಾಯ್ತಿ ಕೊಡಲು ಸರ್ಕಾರಗಳು ಮನಸ್ಸು ಮಾಡಿದರೆ ಅದರಿಂದ ಬೊಕ್ಕಸದ ಸ್ಥಿತಿ ಚಿಂತಾಜನಕವಾಗುವುದು ಖಂಡಿತ.
ಮುಂಗಡ ಪತ್ರದ ಅಂಕಿ ಅಂಶಗಳು ಯಾವತ್ತಿಗೂ ಅದರ ಆಶಯದ ಗುರುತುಗಳಾಗುವುದಿಲ್ಲ. ಹೆಚ್ಚೆಂದರೆ ಅಂಕಿ ಅಂಶಗಳ ಮೂಲಕ ಮುಂಗಡ ಪತ್ರದ ದಿಕ್ಕನ್ನು ಸೂಚಿಸಬಹುದು. ಆದರೆ, ಮುಂಗಡ ಪತ್ರದಲ್ಲಿ ಪ್ರಸ್ತಾಪವಾಗುವ ಯೋಜನೆಗಳು ಒಂದರ್ಥದಲ್ಲಿ ಭವಿಷ್ಯದ ದಾರಿ ದೀಪ. ಕತ್ತಲೆಯ ರಾತ್ರಿಯಲ್ಲಿ ದಾರಿ ಇನ್ನೂ ದೂರವಿದೆ ಎಂಬ ಭಾವನೆ ಜನರಲ್ಲಿ ಬಂದಾಗ ಅದನ್ನು ನಿವಾರಿಸಲು ಕೆಲ ಮಟ್ಟಿಗೆ ಅಂಕಿ ಅಂಶ ಆಧಾರಿತ ಯೋಜನೆಗಳು ನೆರವಾಗಬಹುದು. ಏನೇ ಆದರೂ ಮುಂಗಡ ಪತ್ರದ ಸತ್ವ ಹಾಗೂ ಸತ್ಯ ಗೊತ್ತಾಗುವುದು ಅದರ ಜಾರಿ ಪ್ರಕ್ರಿಯೆಯಲ್ಲಿ. ಹೀಗಾಗಿ ಈ ಮುಂಗಡ ಪತ್ರದ ಜಾರಿ ಮಾರ್ಗವನ್ನು ಗಮನಿಸಿ ನಿರ್ಧಾರಕ್ಕೆ ಬರುವುದು ಹೆಚ್ಚು ಸಮರ್ಥನೀಯ. ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮುಖಂಡರ ವಿಶ್ಲೇಷಣೆಗಳು ಒಡೆದ ಕನ್ನಡಿಯ ಬಿಂಬಗಳಷ್ಟೆ. ಏಕೆಂದರೆ, ಪ್ರತಿಪಕ್ಷಗಳಿಗೆ ಯಾವತ್ತಿಗೂ ಸರ್ಕಾರದ ಯೋಜನೆಗಳು ಹಿಡಿಸುವುದಿಲ್ಲ. ಆಡಳಿತ ಪಕ್ಷಗಳಿಗೆ ಸರ್ಕಾರದ ಎಲ್ಲಾ ಯೋಜನೆಗಳು ಕಾಮಧೇನುಗಳೇ. ಇವೆರಡೂ ಕೂಡಾ ಸತ್ಯಕ್ಕೆ ದೂರವಾದ ಅಂಶಗಳು. ಹೀಗಾಗಿ ಸತ್ಯ ಎಂಬುದು ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ಮಾತುಗಳ ನಡುವೆ ಎಲ್ಲೋ ಕಾಣದಂತೆ ಅಡಗಿದೆ ಅಷ್ಟೆ.

Next Article