ಎಂಇಎಸ್ ಮುಖಂಡರ ಬಂಧನ
ಬೆಳಗಾವಿ: ಚಳಿಗಾಲ ಅಧಿವೇಶನ ವಿರೋಧಿಸಿ ಎಂಇಎಸ್ ಹಮ್ಮಿಕೊಂಡಿದ್ದ ಮಹಾಮೇಳಾವ್ ಪ್ರತಿಭಟನೆ ನಡೆಸಲು ಬಂದಿದ್ದ ಎಂಇಎಸ್ ಮುಖಂಡನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಬಂದಿದ್ದ ಎಂಇಎಸ್ ಕಾರ್ಯಕರ್ತರು ಜೈ ಮಹಾರಾಷ್ಟ್ರ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಘೋಷಣೆ ಕೂಗಿದರು. 'ಬೀದರ್, ಭಾಲ್ಕಿ, ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಝಾಲಚ್ ಪಾಹಿಜೇ' ಎಂದು ಕಾರ್ಯಕರ್ತರು ನಾಡವಿರೋಧಿ ಘೋಷಣೆ ಕೂಗಿದರು. 'ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು' ಎಂದು ಒತ್ತಾಯಿಸಿದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದುಕೊಂಡರು.
ಇಂದಿನಿಂದ 20 ವರೆಗೆ ನಿಷೇಧಾಜ್ಞೆ : ಇಂದು ಬೆಳಗ್ಗೆ 6 ಗಂಟೆಯಿಂದಲೆ ನಿಷೇಧಾಜ್ಞೆ ಜಾರಿಯಲ್ಲಿದ್ದು 20ನೇ ತಾರೀಕಿನ ಮಧ್ಯರಾತ್ರಿ 12 ಗಂಟೆ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎನ್‌ಎಸ್‌ಎಸ್ ಕಾಯ್ದೆಯ ಕಲಂ 163 ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.