ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಎಂಟು ತಿಂಗಳಲ್ಲಿ ೨೮ ಬಾಣಂತಿಯರ ಸಾವು

12:50 AM Nov 30, 2024 IST | Samyukta Karnataka

ಕಾವ್ಯ ಬಿ.ಕೆ
ದಾವಣಗೆರೆ: ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ಎಂಟು ತಿಂಗಳಲ್ಲಿ ೨೮ ಬಾಣಂತಿಯರು ಸಾವು ಕಂಡಿರುವ ಆಘಾತಕಾರಿ ಮಾಹಿತಿಯು ಸರ್ಕಾರಿ ಆಸ್ಪತ್ರೆಯಲ್ಲಿರುವ ನಿರ್ಲಕ್ಷö್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ
ಕಳೆದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯರ ಪೈಕಿ ಜಿಲ್ಲಾಸ್ಪತ್ರೆಯ ೨೩ ಮತ್ತು ಖಾಸಗಿ ಆಸ್ಪತ್ರೆಯ ೫ ಸೇರಿ ಒಟ್ಟು ೨೮ ಬಾಣಂತಿಯರು ಸಾವಿಗೀಡಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ದಾವಣಗೆರೆ ಮಧ್ಯ ಕರ್ನಾಟಕದಲ್ಲಿರುವ ಜಿಲ್ಲೆಯಾಗಿರುವುದರಿಂದ ಹಾಗೂ ಇಲ್ಲಿ ಅತಿಹೆಚ್ಚು ಖಾಸಗಿ ಆಸ್ಪತ್ರೆಗಳು ನೆಲೆಯೂರಿರುವುದರಿಂದ ಹಾವೇರಿ, ಕಲ್ಬುರ್ಗಿ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳು, ಗರ್ಭಿಣಿಯರು ಚಿಕಿತ್ಸೆಗಾಗಿ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನೇ ಹೆಚ್ಚು ಅವಲಂಬಿಸಿದ್ದಾರೆ.
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು ೭೦೦ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ೬೫೦ಕ್ಕಿಂತ ಹೆಚ್ಚು ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗುತ್ತದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಗ್ರಾಮೀಣ ಭಾಗದ ಜನರೇ ಅತೀ ಹೆಚ್ಚು ಈ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಿಂತ ಸಿಸೇರಿಯನ್ ಹೆರಿಗೆಯನ್ನೇ ಹೆಚ್ಚಾಗಿ ಮಾಡಿಸುವುದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಕೆಲವರು ಹೆಚ್ಚು ಮೊರೆ ಹೋಗುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೆ ೨೩ ಬಾಣಂತಿಯರು ಸಾವು ಕಂಡಿರುವುದು ಸರ್ಕಾರಿ ಆಸ್ಪತ್ರೆಯಲ್ಲಿರುವ ನಿರ್ಲಕ್ಷö್ಯವನ್ನು ಪ್ರತಿಬಿಂಬಿಸಿದ್ದು, ಇಲ್ಲಿ ಚಿಕಿತ್ಸೆಯ ಬಗ್ಗೆಯೇ ಜನರನ್ನು ಆತಂಕಕ್ಕೆ ದೂಡಿದೆ.
ಇಲ್ಲಿನ ಜಿಲ್ಲಾಸ್ಪತ್ರೆ ಮತ್ತು ಕೆ.ಆರ್.ಮಾರುಕಟ್ಟೆಯಲ್ಲಿರುವ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿಯೇ ತಿಂಗಳಿಗೆ ಸುಮಾರು ೧೫೦೦ರ ವರೆಗೆ ಹೆರಿಗೆ ಮಾಡಿಸಲಾಗುತ್ತದೆ. ಕೆಲವು ಗರ್ಭಿಣಿಯರು ಅವಧಿ ಮೀರಿ ಅಥವಾ ಅವಧಿಗಿಂತ ಮೊದಲೇ ಹೆರಿಗೆಯಾದಾಗ ಅಥವಾ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರುವಾಗ ಹೆರಿಗೆಗೆ ತೊಂದರೆಯಾಗಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡಿದಾಗ್ಯೂ ಸಾವು ಕಂಡಿದ್ದಾರೆ. ಇನ್ನು ಗರ್ಭದಲ್ಲಿಯೇ ಶಿಶು ಮಲವನ್ನು ತಿಂದಾಗ ಅಥವಾ ಉಸಿರಾಟದ ತೊಂದರೆ ಹೆಚ್ಚಿದ್ದಾಗ ಇನ್ನೂ ಹಲವು ಕಾರಣಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ನವಜಾತ ಶಿಶುಗಳು ಸಾವು ಕಂಡಿವೆ ಎನ್ನುತ್ತಾರೆ ಡಿಎಚ್‌ಓ ಡಾ.ಎಸ್. ಷಣ್ಮುಖಪ್ಪ.
೧೧೧ ನವಜಾತ ಶಿಶು ಸಾವು
ಕಳೆದ ಜನವರಿಯಿಂದ ಇಲ್ಲಿಯವರೆಗೆ ೧೧೧ ನವಜಾತ ಶಿಶುಗಳು ಸಾವೀಗೀಡಾಗಿದ್ದು, ಇದರಲ್ಲಿ ೮೭ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ೨೪ ಶಿಶುಗಳು ವಿವಿಧ ಕಾರಣಕ್ಕೆ ಮರಣಕ್ಕೀಡಾಗಿರುವುದು ಕೂಡ ಚಿಕಿತ್ಸೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಇನ್ನಾದರೂ ಬಡ ರೋಗಿಗಳ ಆಶಾಕಿರಣವಾಗಿರುವ ಸರ್ಕಾರಿ ಆಸ್ಪತ್ರೆಗಳು ಬಡಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂಬುದು ಜನರ ಆಶಯ.

Next Article