ಎಚ್ಎಂಟಿ ಭೂಮಿ ಡಿನೋಟಿಫಿಕೇಷನ್: ಅಧಿಕಾರಿಗಳಿಗೆ ನೋಟಿಸ್
ಬೆಂಗಳೂರು: ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂಬ ಕಾರಣ ನೀಡಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿದ್ದ ನಾಲ್ವರು ಐಎಫ್‌ಎಸ್ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಐಎಎಸ್ ಅಧಿಕಾರಿಗಳು ಹಾಗೂ ಐಎಫ್ಎಸ್ ಅಧಿಕಾರಿಗಳು ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರ ಜಮೀನು ಅರಣ್ಯದ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್‌ಗೆ ಕೋರಿದ್ದರು. ಅರಣ್ಯದ ಸ್ವರೂಪ ಕಳೆದುಕೊಂಡಿದೆ ಎಂಬ ಬಗ್ಗೆ ಕೇವಲ ಅಧಿಕಾರಿಗಳ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಲಾಗಿತ್ತು. ಸುಪ್ರೀಂಕೋರ್ಟ್‌ಗೆ ಮೇಲಿನ ಐಎಫ್ಎಸ್ ಅಧಿಕಾರಿಗಳು ಐಎ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಂದಿನ ಅರಣ್ಯ ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘಿಸಿ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ಡಿ ನೋಟಿಫೈ ಮಾಡಲು ಐಎ ಸಲ್ಲಿಸಿದ ಅಧಿಕಾರಿಗಳೇ ಕಾರಣ ಎಂದು ಆರೋಪಿಸಲಾಗಿದೆ. ಹೀಗಾಗಿ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಸೆಪ್ಟೆಂಬರ್ 24ರಂದು ಸೂಚನೆ ನೀಡಿದ್ದರು. ಅದರಂತೆ, ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾಗಿರುವ ಸಂದೀಪ್ ದವೆ, ನಿವೃತ್ತ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ ಹಾಗೂ ಹಾಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಐಟಿಸಿ ವಿಭಾಗದ ಸ್ಮಿತಾ ಬಿಜ್ಜೂರ್, ತಾಂತ್ರಿಕ ಕೋಶದ ಆರ್. ಗೋಕುಲ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.