ಎಚ್‌ಐವಿ-ಸಾಮುದಾಯಿಕ ಹೊಣೆ ಅಗತ್ಯ
ಡಿಸೆಂಬರ್ ೧ರಂದು ವಿಶ್ವ ಏಡ್ಸ್ ದಿನ. ಮುಂಬರುವ ದಿನಗಳಲ್ಲಿ ಈ ಸೋಂಕಿನಿಂದ ಸಂಪೂರ್ಣ ಹೊರಬರಬೇಕಾದರೆ ಸಾಮುದಾಯಿಕ ಹೊಣೆಗಾರಿಕೆ ಅತ್ಯಗತ್ಯ. ಹಾಗೆಯೇ ವಿವಾಹಪೂರ್ವ ಎಚ್‌ಐವಿ ಕಡ್ಡಾಯ ಕಾಯ್ದೆ ಜಾರಿಯೂ ಅನಿವಾರ್ಯ.
ಎಚ್‌ಐವಿ ಮತ್ತು ಏಡ್ಸ್ ಕುರಿತು ಅನೇಕ ಕಲ್ಪನೆಗಳಿವೆ. ಜೊತೆಗೇ ಸಾಕಷ್ಟು ತಪ್ಪು ಕಲ್ಪನೆಗಳೂ ತಳಕು ಹಾಕಿಕೊಂಡಿವೆ. ಇದಕ್ಕೆ ಕಾರಣ ಅರಿವಿನ ಕೊರತೆ. ಇಂದಿನ ಯೂ ಟ್ಯೂಬ್ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮಗೆ ಬೇಕಾದ ತಿಳಿವಳಿಕೆಗೆ ಮಾತ್ರ ಆದ್ಯತೆ ನೀಡುತ್ತಿರುವುದರಿಂದ ಹೀಗಾಗಿದೆ. ಅನೇಕರು ಏಡ್ಸ್-ಎಚ್‌ಐವಿ ಈಗ ಇಲ್ಲವೇ ಇಲ್ಲ ಎಂದು ಬಲವಾದ ಕಲ್ಪನೆ ಹೊಂದಿದ್ದಾರೆ. ಹಲವರು, ಎಚ್‌ಐವಿ ಕುರಿತು ತಮ್ಮದೇ ವ್ಯಾಖ್ಯಾನ ಅಳವಡಿಸಿಕೊಳ್ಳುವ ಮೂಲಕ ತಪ್ಪು ಕಲ್ಪನೆಗಳನ್ನು ಪೋಷಿಸುತ್ತಿದ್ದಾರೆ.
ಎರಡೂ ಅಪಾಯಕರ ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಇನ್ನೂ ಜಗತ್ತಿನಿಂದ ಈ ಅಂಟು ಜಾಡ್ಯ ದೂರವಾಗಿಲ್ಲ. ಜಗತ್ತಿನ ಮೂರನೇ ಅತೀ ಹೆಚ್ಚು ಎಚ್‌ಐವಿ ಪೀಡಿತರು ಭಾರತದಲ್ಲಿದ್ದಾರೆ. ಈ ಪೈಕಿ ಸೋಂಕಿನ ೬೩ ಸಾವಿರ ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೇ ನಮ್ಮ ದೇಶದಲ್ಲಿ ವಾರ್ಷಿಕ ೪೨ ಸಾವಿರ ಜನ ಏಡ್ಸ್ ಸಂಬಂಧಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಸಾಮಾಜಿಕ ಜಾಲತಾಣ ಅಥವಾ ಇನ್ಯಾವುದೋ ಮಾಹಿತಿಯನ್ನು ಆಧರಿಸಿ ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡುವುದು; ಇಲ್ಲವೇ ಉಡಾಫೆ ಮಾಡುವುದು ಸರಿಯಲ್ಲ. ತಿಳಿವಳಿಕೆಯೇ ಅಂಟು ರೋಗಕ್ಕೆ ಸರಿಯಾದ ಚಿಕಿತ್ಸೆ ಎಂಬುದನ್ನು ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗೆಯೇ ಎಚ್‌ಐವಿ ನಿಯಂತ್ರಣ ಮತ್ತು ನಿರ್ಮೂಲನೆ ಎರಡಕ್ಕೂ `ಸಮುದಾಯದ ಸಾಮೂಹಿಕ ಹೊಣೆಗಾರಿಕೆಯೊಂದೇ ಮದ್ದು' ಎಂಬುದನ್ನು ನೆನಪಿಡಬೇಕಾಗಿದೆ. ಪ್ರಸಕ್ತ ಏಡ್ಸ್ ದಿನದ ಘೋಷವಾಕ್ಯವೂ ಕೂಡ ಇದೇ ತಾತ್ಪರ್ಯದಿಂದ ಕೂಡಿದೆ.
ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತ ಇಂದಿಗೆ ೩೫ ವರ್ಷಗಳಾಗಿವೆ. ಹಿಂದಿನ ಅನುಭವಗಳು ಹಾಗೂ ಕಾರ್ಯಕ್ರಮಗಳಿಂದ ಎಚ್ಚೆತ್ತುಕೊಳ್ಳಬೇಕು. ಮೂರೂವರೆ ದಶಕಗಳ ನೆನಪಿನ ಹಿನ್ನೆಲೆಯಲ್ಲಿ ನಿರ್ಮೂಲನೆಗೆ ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಅರಿವು, ನಂಬಿಕೆ, ಸೇವೆ ಇವೇ ಮೊದಲಾದ ತತ್ವಗಳು ಬುನಾದಿಯಾಗಿರಬೇಕು. ಸಾರ್ವಜನಿಕ ಆರೋಗ್ಯದ ಕಾಳಜಿಗೆ ಸಾಗುತ್ತ ಬರುತ್ತಿರುವ ಕಾರ್ಯಕ್ರಮಗಳ ಅನುಷ್ಠಾನ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಇದು ಈಗಿನ ಅವಶ್ಯಕತೆಯಾಗಿದೆ.
ಏಡ್ಸ್ ಪೀಡಿತರಿಗೆ ದೊರೆಯಬೇಕಾದ ನೈತಿಕ ಬೆಂಬಲದಿಂದಲೂ ಹಲವರು ವಂಚಿತರಾಗಿದ್ದಾರೆ. ಇದು ದುರದೃಷ್ಟಕರ. ಆದ್ದರಿಂದಲೇ ಈ ಬಾರಿಯ ಏಡ್ಸ್ ದಿನವನ್ನು ಈ ಪಿಡುಗಿನಿಂದ ಜೀವ ಕಳೆದುಕೊಂಡವರಿಗೆ ಗೌರವ ಸಲ್ಲಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ಯಾರೂ ಎಚ್‌ಐವಿಗೆ ಜೀವ ತೆರದಂತೆ ಕಾರ್ಯಕ್ರಮ, ಚಿಕಿತ್ಸೆ ಮತ್ತು ಅರಿವಿನ ಸಮಗ್ರ ನಡೆಯನ್ನು ಅಳವಡಿಸಿಕೊಳ್ಳಬೇಕಾಗಿದೆ.
೨೦೨೨ರಲ್ಲಿ ಸುಮಾರು ೨.೫ ಲಕ್ಷ ಜನ ಸೋಂಕಿತರು ಭಾರತದಲ್ಲಿದ್ದರು. ಈ ಸಂಖ್ಯೆ ಇಳಿಮುಖವಾಗುತ್ತಿದೆ. ಎಚ್‌ಐವಿ ಕಾರಣದಿಂದ ಸಾಯುವವರ ಸಂಖ್ಯೆ ಶೇ. ೫೧ರಷ್ಟು ಕಡಿಮೆಯಾಗಿದೆ. ಇದೊಂದು ಸಮಾಧಾನದ ಸಂಗತಿ. ಈ ಸಮಾಧಾನ ಸಂಪೂರ್ಣ ಎನ್ನುವಂತಾಗಬೇಕು. ಆಗಲೇ ಎಚ್‌ಐವಿ ವಿರುದ್ಧ ಪ್ರಜ್ಞಾವಂತ ಸಮಾಜ ನಡೆಸಿರುವ ಅಭಿಯಾನ ಯಶಸ್ವಿಯಾದಂತೆ. ಸುರಕ್ಷಿತ ಲೈಂಗಿಕತೆಯ ಬಗ್ಗೆ ಸಾಕಷ್ಟು ಅರಿವು ಮೂಡಿರುವ ದಿನಗಳಿವು. ಆದರೂ ಕೆಲವು ಸೂಕ್ಷ್ಮ ವಿಷಯಗಳಲ್ಲಿ ಭಾರತೀಯ ಸಮಾಜ ಮಡಿವಂತಿಕೆಯನ್ನು ಬಿಟ್ಟು ನಡೆದುಕೊಳ್ಳಬೇಕಾಗಿದೆ. ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಎಚ್‌ಐವಿ ಪರೀಕ್ಷೆ ಮಾಡಿಸಿಕೊಂಡೇ ಮದುವೆಯಾದರೆ ಮುಂಬರುವ ದಿನಗಳಲ್ಲಿ ನಿಜವಾದ ಅರ್ಥದಲ್ಲಿ ಸುಖೀ ಸಮಾಜ ನಿರ್ಮಾಣವಾಗಲಿದೆ. ಸಂಘಟನೆಗಳು ಈ ದಿಸೆಯಲ್ಲಿ ವ್ಯಾಪಕ ಅರಿವು ಮೂಡಿಸಬೇಕು. ಇದಕ್ಕಾಗಿ ಹೋರಾಡುತ್ತಿರುವ ವೈದ್ಯ ಸಮುದಾಯಕ್ಕೆ ಬೆಂಬಲವಾಗಿ ನಿಲ್ಲಬೇಕು. ಪೂರಕವಾಗಿ ಸರ್ಕಾರವೂ ಸ್ಪಂದಿಸಬೇಕು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಈ ಸಂಬಂಧ ಖಾಸಗಿ ವಿಧೇಯಕವನ್ನು ಮಂಡಿಸಿದ್ದರು. ಇಂದಿನ ಸಂದರ್ಭದಲ್ಲಿ ಅತೀ ಮುಖ್ಯವಾದ ಈ ವಿಧೇಯಕ ಕೇಂದ್ರದ ಕಾಯ್ದೆಯಾಗುವಂತೆ ಮಾಡಬೇಕಾಗಿದೆ. ಜನಪ್ರತಿನಿಧಿಗಳೆಲ್ಲ ಸೇರಿ ಈ ಸಂಬಂಧ ಭಾರತ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಕಾಯ್ದೆ ಜಾರಿಗೊಂಡಲ್ಲಿ ಇಡೀ ದೇಶದ ಸಾಮಾಜಿಕ ಜವಾಬ್ದಾರಿಯನ್ನು ವಿಶ್ವಕ್ಕೆ ಪ್ರಕಟಿಸಿದಂತೆಯೂ ಆಗಲಿದೆ.