For the best experience, open
https://m.samyuktakarnataka.in
on your mobile browser.

ಎಚ್ಕೆ ಮಾನಸಪುತ್ರನಿಗೆ ಮಣೆ

05:00 AM Mar 09, 2024 IST | Samyukta Karnataka
ಎಚ್ಕೆ ಮಾನಸಪುತ್ರನಿಗೆ ಮಣೆ

ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೇಶ್ವರದ ಆನಂದಸ್ವಾಮಿ ಗಡ್ಡದ್ದೇವರಮಠ ಅವರ ಹೆಸರನ್ನು ಘೋಷಿಸಲಾಗಿದ್ದು, ಹಿರಿಯ ಸಚಿವ ಎಚ್.ಕೆ. ಪಾಟೀಲ ಅವರ ಮಾನಸಪುತ್ರನಿಗೆ ಟಿಕೆಟ್ ದೊರೆತಂತಾಗಿದೆ.
ಪ್ರಬಲ ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿರುವ ಆನಂದಸ್ವಾಮಿ ಗಡ್ಡದ್ದೇವರಮಠ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿನ ಲಿಂಗಾಯತರು ಸೇರಿದಂತೆ ವಿವಿಧ ವರ್ಗಗಳ ಜನತೆಯೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದಾರೆ. ಮಾಜಿ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ಗಡ್ಡಯ್ಯಸ್ವಾಮಿ ಗಡ್ಡದ್ದೇವರಮಠ ಹಾವೇರಿ, ಗದಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೊಂದಿರುವ ಪ್ರಭಾವ ಆನಂದಸ್ವಾಮಿ ಗಡ್ಡದ್ದೇವರಮಠರಿಗೆ ವರವಾಗಲಿದೆ. ಸಚಿವ ಡಾ.ಎಚ್.ಕೆ.ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಆರ್. ಪಾಟೀಲರ ಮಾನಸಪುತ್ರನೆಂದೇ ಗುರುತಿಸಿಕೊಂಡಿದ್ದು, ಅದೂ ಸಹ ಚುನಾವಣೆಯಲ್ಲಿ ವರ್ಕೌಟ್ ಆಗುವ ನಿರೀಕ್ಷೆ ಪಕ್ಷದ್ದಾಗಿದೆ.
ಶಿರಹಟ್ಟಿ ಮತಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿರುವ ಗಡ್ಡಯ್ಯಸ್ವಾಮಿ ಗಡ್ಡದ್ದೇವರಮಠರ ಪುತ್ರರಾಗಿರುವ ಆನಂದ ಸ್ವಾಮಿಯವರು ಕಾಂಗ್ರೆಸ್ ಪಕ್ಷ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗದಗ, ಹುಬ್ಬಳ್ಳಿ, ಬೆಳಗಾವಿಯಲ್ಲಿ ವಿವಿಧ ಉದ್ದಿಮೆ ಹೊಂದಿದ್ದಾರೆ. ಕಳೆದ ೨೦೧೧ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ, ೨೦೧೩ರಲ್ಲಿ ಬೆಳಗಾವಿಯ ಗ್ರಾಮಾಂತರ ಪ್ರದೇಶದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಆನಂದಸ್ವಾಮಿ ಗಡ್ಡದ್ದೇವರಮಠ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಕಳೆದ ೨೦೧೯ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ತಮ್ಮ ಮೇಲೆ ಭರವಸೆಯಿಟ್ಟು ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಿಸಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸರ್ವ ನಾಯಕರ ಸಹಕಾರದೊಂದಿಗೆ ಶಕ್ತಿಮೀರಿ ಪ್ರಯತ್ನಿಸಿ ಜಯಶಾಲಿಯಾಗುವದಾಗಿ ಸಂ.ಕ. ಪ್ರತಿನಿಧಿಗೆ ಆನಂದಸ್ವಾಮಿ ಗಡ್ಡದ್ದೇವರಮಠ ತಿಳಿಸಿದರು.