For the best experience, open
https://m.samyuktakarnataka.in
on your mobile browser.

ಎಚ್‌ಡಿಕೆ ಬಗ್ಗೆ ಹಂದಿ ಪದ ಬಳಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಪ್ರಲ್ಹಾದ ಜೋಶಿ ಗರಂ

01:55 PM Sep 29, 2024 IST | Samyukta Karnataka
ಎಚ್‌ಡಿಕೆ ಬಗ್ಗೆ ಹಂದಿ ಪದ ಬಳಸಿದ ಲೋಕಾಯುಕ್ತ ಎಡಿಜಿಪಿ ವಿರುದ್ಧ ಪ್ರಲ್ಹಾದ ಜೋಶಿ ಗರಂ

ಹುಬ್ಬಳ್ಳಿ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ "ಹಂದಿ" ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಲೋಕಾಯುಕ್ತ ಎಡಿಜಿಪಿಗೆ ಏನಾದರೂ ಸರ್ವೀಸ್ ಕಂಡಕ್ಟ್ ರೂಲ್ ಬಗ್ಗೆ ಜ್ಞಾನವಿದ್ದರೆ ತಕ್ಷಣ ಕ್ಷಮಾಪಣೆ ಕೇಳಲಿ ಎಂದು ಸೂಚಿಸಿದರು.
ಒಬ್ಬ ಜನಪ್ರತಿನಿಧಿ, ಅದರಲ್ಲೂ ಕೇಂದ್ರ ಸಚಿವರ ಬಗ್ಗೆ ಹೀಗೆ ಅಸಭ್ಯ ಭಾಷೆಯಲ್ಲಿ, ಕೆಟ್ಟ ಪದ ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೇಡರ್ ಕಂಟ್ರೋಲ್ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಯಾವತ್ತೂ ಯಾರ ಬಗ್ಗೆಯೂ ಹೀಗೆ ಅಸಭ್ಯ ಭಾಷೆ ಬಳಸಿದವರಲ್ಲ. ಈ ಅಧಿಕಾರಿ ಬಗ್ಗೆಯೂ ಹಾಗೆಲ್ಲ ಏಕವಚನದಲ್ಲಿ ಮಾತನಾಡಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.
ಎಡಿಜಿಪಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ:
ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪದದಲ್ಲಿ ಸಂಬೋಧನೆ ಮಾಡಿರುವುದು ಅಧಿಕಾರಿಯ ಅಹಂಕಾರದ ಪರಮಾವಧಿಯಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಜೋಶಿ ಎಚ್ಚರಿಸಿದರು.
ಸರ್ಕಾರದ ಆದೇಶವಿದ್ದರೆ ತನಿಖೆ ನಡೆಸಲಿ. ಎಚ್‌ಡಿಕೆ ಆರೋಪ ಮಾಡಿದ್ದರೆ ಗೌರವಯುತ ಭಾಷೆಯಲ್ಲಿ, ಸಭ್ಯ ಪದಗಳಲ್ಲಿ ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಈ ರೀತಿ ಕೆಟ್ಟದಾಗಿ ಸಂಬೋಧಿಸುವುದು ಯಾವುದೇ ಅಧಿಕಾರಿಗಳಿಗೂ ಶೋಭೆ ತರುವುದಿಲ್ಲ ಎಂದು ಸಚಿವ ಜೋಶಿ ಹೇಳಿದರು.
ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ:
ಒಬ್ಬ ಜನಪ್ರತಿನಿಧಿ ಬಗ್ಗೆ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದು ಕಾಂಗ್ರೆಸ್ಗೆ ಮುಳುವಾಗಲಿದೆ. ಕಾಂಗ್ರೆಸ್ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆಯಲ್ಲ! ಎಂದು ಕಿಡಿ ಕಾರಿದರು.
ಈ ಸರ್ಕಾರವೇ ಶಾಶ್ವತವಲ್ಲ; ಎಚ್ಚರ
ರಾಜ್ಯದಲ್ಲಿ ಈ ಸರ್ಕಾರವೇ ಶಾಶ್ವತವಾಗಿ ಇರೋದಿಲ್ಲ. ಸ್ವಲ್ಪ ಎಚ್ಚರ ವಹಿಸಿ ಮಾತನಾಡಿ, ಕೆಲಸ ಮಾಡಿ ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಗೆ ಕೇಂದ್ರ ಸಚಿವ ಜೋಶಿ ಚಾಟಿ ಬೀಸಿದರು.

Tags :