ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ: ಖಂಡನೆ
ಕಾವೂರು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಪಾದರ ವಾಹನಕ್ಕೆ ಕಾಸರಗೋಡು ಬೊವಿಕ್ಕಾನದಲ್ಲಿ ಸಮಾಜಘಾತುಕ ಶಕ್ತಿಗಳು ಅಡ್ಡಿಪಡಿಸಿ ಹಾನಿ ಮಾಡಿರುವುದನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.
ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಪುಂಡರು, ಹಿಂದು ವಿರೋಧಿ ಶಕ್ತಿಗಳು ಸವಾಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅಲ್ಲಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಾಗೂ ನಮ್ಮ ಸಮಾಜದ ಪೂಜ್ಯ ಮಠಗಳಲ್ಲಿ ಒಂದಾಗಿರುವ ಎಡನೀರು ಮಠದ ಶ್ರೀಗಳ ಮೇಲಿನ ದಾಳಿ ಹಿಂದೂ ಸಮಾಜದ ಮೇಲೆ ನಡೆದಿರುವ ದಾಳಿಯಾಗಿದೆ. ಸರಕಾರ ತಕ್ಷಣ ಸಮಾಜಘಾತ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಜಾಮೀನು ರಹಿತ ಸೆಕ್ಷನ್ ಅಡಿ ಕೇಸು ದಾಖಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.
ವಿಶ್ವ ಹಿಂದೂ ಪರಿಷದ್ ಖಂಡನೆ
ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತಿದ್ದ ವಾಹನಕ್ಕೆ ಕಿಡಿಗೇಡಿಗಳು ತಡೆಯೊಡ್ಡಿ ಕೃತ್ಯ ಎಸಗಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸುತ್ತದೆ. ಪೂಜ್ಯ ಸಾಧು ಸಂತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪವೆಲ್ ಕೇರಳ ಸರಕಾರಕ್ಕೆ ಆಗ್ರಹಿಸಿದ್ದಾರೆ.