ಎಡನೀರು ಶ್ರೀಗಳ ಮೇಲೆ ದಾಳಿಗೆ ಯತ್ನ: ವ್ಯಾಪಕ ಖಂಡನೆ
ಮಂಗಳೂರು: ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಬದಿಯಡ್ಕ ಸಮೀಪದ ಬೋವಿಕ್ಕಾನದಲ್ಲಿ ನಡೆದಿದೆ.
ಭಾನುವಾರ ಸಂಜೆ ಕಾರ್ಯಕ್ರಮ ನಿಮಿತ್ತ ಸ್ವಾಮೀಜಿ ತಮ್ಮ ಕಾರಿನಲ್ಲಿ ಬೋವಿಕ್ಕಾನ-ಇರಿಯಣ್ಣಿ ಮಾರ್ಗ ಮಧ್ಯೆ ಸಂಚರಿಸುತ್ತಿದ್ದಾಗ ಪುಂಡರ ತಂಡ ಅಡ್ಡಹಾಕಿದೆ. ವಾಹನ ತಡೆದು ತಗಾದೆ ತೆಗೆದಿದ್ದು ಬಳಿಕ ಸ್ವಾಮೀಜಿ ಮಾತನಾಡದೆ ಮುಂದುವರಿದಿದ್ದರು. ಕಾರ್ಯಕ್ರಮ ಮುಗಿಸಿ ಅದೇ ದಾರಿಯಲ್ಲಿ ಹಿಂತಿರುಗುತ್ತಿದ್ದಾಗ ಅಡ್ಡಹಾಕಿದ ದುಷ್ಕರ್ಮಿಗಳ ತಂಡವು ದೊಣ್ಣೆಯಲ್ಲಿ ಕಾರಿನ ಗ್ಲಾಸ್ ಪುಡಿಗಟ್ಟಿ ಹಲ್ಲೆಗೆ ಯತ್ನಿಸಿದೆ ಎನ್ನಲಾಗಿದೆ. ಕಾರನ್ನು ಹಿಂಬಾಲಿಸಿ ಬಂದಿದ್ದ ತಂಡವು ಬಾವಿಕ್ಕೆರೆ ಎಂಬಲ್ಲಿ ಕೃತ್ಯ ನಡೆಸಿದೆ.
ಕಾರಿನ ಮುಂದಿನ ಗಾಜಿಗೆ ದೊಣ್ಣೆಯಲ್ಲಿ ಹೊಡೆದು ಹಾನಿ ಮಾಡಿದ್ದಾರೆ. ಅಲ್ಲದೆ, ಸ್ವಾಮೀಜಿಗೆ ಬೆದರಿಕೆ ಹಾಕಿ ಸ್ಥಳದಲ್ಲಿ ಭಯ ಮೂಡಿಸಿದ್ದಾರೆ. ಸ್ವಾಮೀಜಿ ಬಳಿಕ ಅಲ್ಲಿಂದ ತೆರಳಿದ್ದಾರೆ. ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಇಂದು ಬೋವಿಕ್ಕಾನದಲ್ಲಿ ಹಿಂದು ಐಕ್ಯವೇದಿ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಹಿಂದು ಶ್ರದ್ಧಾಕೇಂದ್ರದ ಗುರುಗಳಿಗೆ ಅಪಮಾನ ಎಸಗಿದರೆ ಸಾಮಾನ್ಯ ಜನರ ಪಾಡೇನು ಎಂದು ಐಕ್ಯವೇದಿ ಪ್ರಶ್ನಿಸಿದ್ದು ಹಿಂದು ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದೆ.
ವ್ಯಾಪಕ ಆಕ್ರೋಶ..
ಸ್ವಾಮೀಜಿಗಳ ಮೇಲೆ ನಡೆದ ದಾಳಿ ಯತ್ನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ಹಿಂದು ಪರಿಷತ್ ಸೇರಿದಂತೆ ಬಜರಂಗದಳ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ದ. ಕ. ಜಿಲ್ಲಾ ಘಟಕ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಘಟನೆಯನ್ನು ಖಂಡಿಸಿದ್ದಾರೆ.