ಎಡಬಿಡಂಗಿತನ ಮೈಮೇಲೆ ಎಳೆದುಕೊಳ್ಳೋದು ಬೇಕಿತ್ತಾ?
ಇದು ಅನನುಭವವೋ, ಮೈಮರೆತವೋ, ಧಾಡಸಿತನವೋ ಅಥವಾ ಎಡವಟ್ಟೋ…?
ರಾಜ್ಯಸಭೆಗೆ ನಡೆದ ಚುನಾವಣೆ, ಆ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಸಂಭ್ರಮದಲ್ಲಿರುವಾಗ ವಿಧಾನಸೌಧದ ಪ್ರಾಂಗಣದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಈ ಎಲ್ಲವನ್ನೂ ಪ್ರಶ್ನಿಸುವಂತೆ ಮಾಡಿದೆ.
ಕಾಂಗ್ರೆಸ್ ಮೂವರು ಅಭ್ಯರ್ಥಿಗಳ ವಿಜಯ ಹಾಗೂ ಪ್ರತಿಪಕ್ಷದ ಬಿಜೆಪಿ ಶಾಸಕರ ಅಡ್ಡಮತದಾನ ಮತ್ತು ಗೈರು, ಕೈ ಅಭಿಮಾನಿಗಳ ಸಂಭ್ರಮಕ್ಕೆ ತಕ್ಕುದಾಗಿದೆ. ಈ ರಾಜಕಾರಣ ಹೀಗೂ ಆದೀತು' ಎಂಬುದನ್ನು ತೋರಿಸಿಕೊಟ್ಟಿದೆ. ಅಡ್ಡಮತದಾನ ಮತ್ತು ವಿಪ್ ಉಲ್ಲಂಘನೆಯಿಂದ ಯಾವುದೇ ತೊಡಕು ಉಂಟಾಗದು ಎಂಬ ಧೈರ್ಯ ಒಂದೆಡೆ, ಈ ಕ್ರಮಕ್ಕೆ
ಆತ್ಮಸಾಕ್ಷಿಯ ನೆಪ'ನೀಡಲಾಗಿದ್ದು ಸತ್ಯ.
ಇಷ್ಟಕ್ಕೂ ರಾಜ್ಯಸಭಾ ಚುನಾವಣೆ ಎರಡು ಪ್ರಮುಖ ಸಂಗತಿಗಳನ್ನು ಈಗ ಚಿಂತನೆಗೆ ಹಚ್ಚಿದೆ. ಮೊದಲನೆಯದ್ದು ಅಡ್ಡಮತದಾನ ನಡೆದರೂ ಶಾಸಕತ್ವಕ್ಕೆ ಕುಂದು ಬಾರದು ಮತ್ತು ಯಾವುದೇ ಕ್ರಮಕ್ಕೂ ಅಂಜಬೇಕಿಲ್ಲ ಎನ್ನುವ ಧೈರ್ಯ, ಎರಡನೆಯದ್ದು ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಗೆ ಎಲ್ಲರ ಸಹಮತ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದಂತಾಗಿದೆ.
ಈ ಕಾರಣಕ್ಕಾಗಿಯೇ ಕಾಂಗ್ರೆಸ್ಸಿನದ್ದು ಸಂಭ್ರಮದ ಕ್ಷಣವಾಗಿತ್ತು. ಆದರೆ ಸಂಭ್ರಮದಲ್ಲಿ ಸೈಯದ್ ನಾಸಿರ್ ಹುಸೇನ್ ಅವರಿಗೆ ಜೈಕಾರ ಹಾಕುತ್ತಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮೊಳಗಿದೆ ಎನ್ನಲಾದ, ಖಚಿತ ಪಡೆದ ಘಟನೆ ಆ ಸಂಭ್ರಮದ ವಾತಾವರಣವನ್ನು ವಿವಾದಕ್ಕೆ ಈಡು ಮಾಡಿದೆ.
ಇಲ್ಲಿ ನಾಸಿರ್ ಹುಸೇನ್ ಅವರ ವರ್ತನೆ ಮತ್ತು ಆ ಕ್ಷಣದಲ್ಲಿ ಏನೂ ಕ್ರಮ ಕೈಗೊಳ್ಳದ ಸರ್ಕಾರದ ಕ್ರಮ ಸೋತು ಸುಣ್ಣವಾಗಿದ್ದ ಪ್ರತಿಪಕ್ಷಕ್ಕೆ ಅಸ್ತ್ರವನ್ನು ಕೈಯಾರೆ ಕೊಟ್ಟಂತಾಗಿದೆ!
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ, ಹಾಗೆ ಕೇಳಿದ ತಕ್ಷಣ ನಾಸಿರ್ ಥಟ್ಟನೆ ಸ್ಪಂದಿಸಿ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದರೆ, ಇಲ್ಲವೇ ಖಂಡಿಸಿದ್ದರೆ ಹೀರೋ ಆಗುವ ಅವಕಾಶವಿತ್ತು ಎಂಬುದು ನಿಜ. ಹಾಗೆ ಮಾಡದ ನಾಸಿರ್ ನೇರವಾಗಿ ಪತ್ರಕರ್ತರನ್ನೇ ತುಚ್ಛವಾಗಿ ಕಂಡು ಆರೋಪಿ ಸಮರ್ಥನೆಗಿಳಿದದ್ದು ಗೆದ್ದ ಸಂಭ್ರಮದ ಬದಲು ಸ್ವತಃ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾದಿಯಾಗಿ ಎಲ್ಲ ನಾಯಕರಿಗೂ ಇಕ್ಕಟ್ಟಿಗೆ ತಂದಿಟ್ಟಿತು. ಗೆಲುವಿಗಿಂತ ಜಿಂದಾಬಾದಿನ ಕುರಿತ ಮುಜುಗರಕ್ಕೆ ಪ್ರತಿಕ್ರಿಯಿಸುವುದೇ ನಾಯಕರ ಕೆಲಸವಾಗಿ ಹೋಯಿತು. ಸಾಮಾನ್ಯ ಸೂಕ್ಷ್ಮ ಸಂವೇದನೆಯನ್ನೂ ಕಳೆದುಕೊಂಡಂತೆ ವರ್ತಿಸಿ, ದೇಶದ ಕೋಟ್ಯಂತರ ಜನರೆದುರು ದೇಶಾಭಿಮಾನ ಶೂನ್ಯರನ್ನಾಗಿ ಕಾಣುವಂತಾದದ್ದು..
ಬೇಸರದ ಸಂಗತಿಯೆಂದರೆ, ಕಳೆದ ಶುಕ್ರವಾರವೇ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಬೇಕಾಗಿದ್ದ ಶಾಸನಸಭೆ ಅಧೀವೇಶನ ಇಂತಹ ಘನಂದಾರಿ ಕಲಾಪ ನಡೆಸುವ ಸಲುವಾಗಿ ಮೂರು ದಿನಗಳ ಕಾಲ ವಿಸ್ತರಣೆಗೊಂಡಿತಲ್ಲಾ ಎಂಬುದು. ಜನಾದೇಶ ಎಂಬುದು ಪರಮಪವಿತ್ರವಾದದ್ದು. ಇದಕ್ಕೆ ತದ್ವಿರುದ್ಧವಾದ ರೀತಿಯಲ್ಲಿ ಜರುಗಿದ ಈ ಬೆಳವಣಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಒಂದು ರೀತಿಯಲ್ಲಿ ತಾಲೀಮಾಗಿದೆಯೇನೋ ಎಂಬ ಭಾವನೆ ಮೂಡಿಸಿರುವುದು ಸುಳ್ಳಲ್ಲ.
ಇದೊಂದೇ ಅಲ್ಲ. ಏಕೋ ಏನೋ, ಕಳೆದ ತಿಂಗಳಿನಿಂದ ಆಗಾಗ ಸರ್ಕಾರ, ಮುಖ್ಯಮಂತ್ರಿ ಎಲ್ಲರೂ ಒಂದಿಲ್ಲೊಂದು ಎಡಬಿಡಂಗಿತನದಿಂದ ಮುಜುಗರಕ್ಕೆ ಒಳಗಾಗುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ ಮಾತು ವಿವಾದಕ್ಕೆ ಒಳಗಾದರೂ, ಅಧಿಕಾರಕ್ಕೆ ಬಂದ ನಂತರವೂ ಸಚಿವರು, ಶಾಸಕರ ಹಗುರ ಮಾತು- ಧೋರಣೆ ಮತ್ತು ಆಡಳಿತದ ವೈಖರಿ-ಅಜ್ಞಾನಗಳು ತಲೆ ತಗ್ಗಿಸುವ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಅನಗತ್ಯವಾಗಿ ಪ್ರತಿಪಕ್ಷಗಳಿಗೆ ಅಸ್ತçವನ್ನು ಕೈಯಾರೆ ಕೊಟ್ಟು, ನಮಗೆ ಹೊಡಿ, ಟೀಕಿಸು ಎಂದು ತಮ್ಮನ್ನು ತಾವೇ ಕಡಿಸಿಕೊಳ್ಳುವ ಅಸಹಾಯಕತೆಯನ್ನು ಸೃಷ್ಟಿಸಿಕೊಂಡಿವೆ.
ಮೊನ್ನೆ ಮೊನ್ನೆ ವಿಧಾನಸೌಧದಲ್ಲಿಯೇ ಸರ್ಕಾರದ ಮರ‍್ನಾಲ್ಕು ಎಡವಟ್ಟುಗಳು ಬಯಲಿಗೆ ಬಂದು ಯಾರೂ ಸಮರ್ಥಿಸಿಕೊಳ್ಳದ ಸ್ಥಿತಿ ಉಂಟಾಯಿತು.
ವಸತಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯವನ್ನೇ ತಿದ್ದಿ ಎಲ್ಲ ಪ್ರಾಜ್ಞರಿಂದ ಸರ್ಕಾರ ತರಾಟೆಗೆ ಒಳಗಾಯಿತು. ಯಾರು ಆದೇಶಿಸಿದರು? ಸರ್ಕಾರ ಅಥವಾ ಮಂತ್ರಿಯ ಸೂಚನೆಯೇ? ಯಾವುದನ್ನೂ ಸಮರ್ಥನೆ ಮಾಡಿಕೊಳ್ಳಲಾಗದೇ, ಈ ಹಿಂದಿನಂತೇ ತಿದ್ದಿಕೊಂಡರು. ಯಾಕಾಗಿ ಬದಲಾವಣೆ ಎಂದರೆ ಉತ್ತರಿಸಿದವರಿಲ್ಲ.
ಫೆಬ್ರವರಿ ೧೫ರಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರ ಸೂಚನೆ ಆಧರಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ಈ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ, ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ; ಹಾಗೇನಾದರೂ ಮಾಡಿದರೆ ಶಿಕ್ಷಣ ಸಂಸ್ಥೆಗಳ ಶಿಕ್ಷಕರು-ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಆದೇಶಿಸಿದರು. ಇಂತಹ ಸುತ್ತೋಲೆ ವಿವಾದ ಹುಟ್ಟಿಸದೇ ಬಿಟ್ಟೀತೇ? ಸಹಜವಾಗಿ ಎಲ್ಲ ಜಾತಿ- ಸಮುದಾಯದವರೂ ಆಕ್ರೋಶ ವ್ಯಕ್ತಪಡಿಸಿ ತಕರಾರು ಆರಂಭಿಸಿದರು. ಆದರೆ ಈ ಆದೇಶ ಏಕೆ ಎಂದು ಸಮರ್ಥನೆ ಮಾಡಿಕೊಳ್ಳಲೂ ಸಚಿವರಿಂದ ಸಾಧ್ಯವಾಗಲಿಲ್ಲ. ಯಾವಾಗ ಇದು ವಿವಾದದ ಸ್ವರೂಪ ಪಡೆಯಿತೋ ಆಗ ಆದೇಶವನ್ನು ಹಿಂಪಡೆಯಲಾಯಿತು.
ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವೇನಲ್ಲ ಎಂಬ ಇನ್ನೊಂದು ಸುತ್ತೋಲೆ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿತು. ವಿಧಾನಸಭೆ ಮತ್ತು ಪರಿಷತ್ತುಗಳಲ್ಲಿ ಈ ಪ್ರಶ್ನೆ ಎದ್ದು ಸರ್ಕಾರಕ್ಕೆ ಮುಜುಗುರ ಉಂಟಾಯಿತು. ಇದು ಪ್ರಿಂಟ್ ಮಿಸ್ಟೇಕ್ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹೇಳಿ, ಮೊದಲಿನಂತೇ ನಾಡಗೀತೆ ಎಲ್ಲೆಡೆ ಕಡ್ಡಾಯ ಎಂದರು.
ಇದು ಅಧಿಕಾರಗಳ ತಪ್ಪೇ? ಅಥವಾ ಆಡಳಿತ ಚುಕ್ಕಾಣಿ ಹಿಡಿದವರ ಅಜ್ಞಾನ ಮತ್ತು ಸಡಿಲ ಧೋರಣೆಯೇ?
ವೈಚಾರಿಕ ಭಿನ್ನತೆ ರಾಜಕಾರಣಿಗಳಲ್ಲಿ ಸಹಜ. ಇದೇ ಕಾರಣಕ್ಕೆ ಅಲ್ಲವೇ ಪ್ರಜಾಸತ್ತೆಯಲ್ಲಿ ಸೊಬಗು ಇರುವುದು !
ಮತದಾರರೆದಿರು ತಮ್ಮ ವೈಚಾರಿಕ ಭಿನ್ನತೆಗಳನ್ನು ಹೇಳಿಯೇ ಎಲ್ಲರೂ ಆಯ್ಕೆಯಾಗುವುದು. ಆದರೆ ಆ ನಂತರ ಆಡಳಿತದ ನಿರ್ವಹಣೆಯ ಲೋಪ- ದೋಷಗಳು ಸರ್ಕಾರಕ್ಕೆ ಮತ್ತು ಜನತೆಯ ಮೇಲೆ ನೇರ ಪರಿಣಾಮ ಉಂಟಾದಾಗ ಕೆಟ್ಟ ಹೆಸರು.
ಸಿದ್ದರಾಮಯ್ಯ ಹಿಂದೆ ಬಿಗಿ ಆಡಳಿತ ನಡೆಸಿದವರು. ವಿವಾದಗಳಿಗೆ ಅಥವಾ ಲಘು ಮಾತುಗಳಿಗೆ ಆಸ್ಪದ ನೀಡಿರಲಿಲ್ಲ. ನಿರ್ಧಾರಗಳಿಗೆ ಒಂದು ತಾತ್ವಿಕತೆ ಇತ್ತು. ಬಹುಜನ ಹಿತಾಯವಿತ್ತು.
ಜನ ಪ್ರಶ್ನಿಸುವುದು ಈಗೇಕೆ ಹೀಗೆ? ಒಂದೋ ಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅಥವಾ ಅಧಿಕಾರಿಗಳ ಹಿಡಿತದಲ್ಲಿ ಮಂತ್ರಿಗಳು ಸಿಲುಕಿಕೊಂಡಿದ್ದಾರೆ. ಇಲ್ಲವೇ, ಆಡಳಿತ ನಡೆಸುವ ಕಲೆ ಅಥವಾ ಸಾಮರ್ಥ್ಯ ಇಲ್ಲವಾಗಿದೆಯೇನೋ? ಅಥವಾ ರಾಜಕೀಯ ಕಾರಣಗಳಿಗಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲಾಗುತ್ತಿದೆಯೇ?
ದೇಶದಲ್ಲಿ ಯಾವ ರಾಜ್ಯದಲ್ಲೂ ನಡೆಯದ ಸಂವಿಧಾನ ಮತ್ತು ಏಕತೆ ಜಾಗೃತಿ ಮೂಡಿಸುವ ಅಭಿಯಾನವನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿದ ಕೀರ್ತಿ ಕರ್ನಾಟಕದ್ದು. ಕಳೆದ ಮೂರು ತಿಂಗಳಿಂದ ಗ್ರಾಮದಿಂದ ರಾಜಧಾನಿಯವರೆಗೆ ಸಂವಿಧಾನ ಜಾಗೃತಿ ಜಾಥಾ, ಸಮಾವೇಶಗಳು, ಸಂವಿಧಾನ ಓದು, ರಾಷ್ಟ್ರೀಯ ಐಕ್ಯತೆ ಇತ್ಯಾದಿಗಳನ್ನು ಸಾರುವ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ಗ್ಯಾರಂಟಿ ಸಮಾವೇಶಗಳ ಮೂಲಕ ಯಶಸ್ವಿಯಾಗಿ `ಸಂವಿಧಾನವೇ ಪರಮೋಚ್ಛ' ಎಂದು ಬಿತ್ತರಿಸುವ ಕೆಲಸವನ್ನು ಸರ್ಕಾರ ಮಾಡಿತು. ಧರ್ಮ, ಮಂದಿರ, ಹಿಂದುತ್ವ, ಜಾತಿ ಮೀಸಲು ಕೂಪದಿಂದ ತಪ್ಪಿಸಿ ಜನಜಾಗೃತಿಗೊಳಿಸಲು, ಚಿಂತನೆಗೊಂದು ಹೊಸ ಮಜಲು ನೀಡಲು ಈ ಕ್ರಮ ಎನ್ನುವುದು ತಮ್ಮ ಪಕ್ಷದ ಸಿದ್ಧಾಂತ ಎಂದರು. ಇದು ಒಪ್ಪತಕ್ಕದ್ದೇ.. ಇದು ಅಪೇಕ್ಷಿತ ಮತ್ತು ಸೈದ್ಧಾಂತಿಕವಾಗಿಯೂ ಸರಿಯೇ.
ಆದರೆ ಸಂವಿಧಾನ ಮತ್ತು ಏಕತಾ ಸಮಾವೇಶಕ್ಕೆ ಇಂಗ್ಲೆಂಡಿನ ಪ್ರೊಫೆಸರ್ ನಿತಾಶಾ ಕೌಲ್ ಅವರನ್ನು ಕರೆಸುವ ಅಗತ್ಯತೆ ಮತ್ತು ಅನಿವಾರ್ಯತೆ, ವಿವೇಚನೆ ಏಕೆ ಬಂತು?
ನಿತಾಶಾ ಕೌಲ್ ಪಾಕಿಸ್ತಾನದ ಪರ ಧೋರಣೆ ಇರುವವರು, ಕಾಶ್ಮೀರ ಭಾರತದ್ದಲ್ಲ ಎನ್ನುವವರು. ಸಂಘ ಪರಿವಾರ ಅಥವಾ ಹಿಂದುತ್ವದ ಅಥವಾ ಬಲಪಂಥೀಯ ಧೋರಣೆ ವಿರೋಧಿ ಎನ್ನುವ ಕಾರಣಕ್ಕಾಗಿಯೇ ಆಹ್ವಾನಿಸಲಾಯಿತೇ? ಎಳಸು ಧೋರಣೆ ಹೊಂದಿರುವ ನಿತಾಶಾ ಕೌಲ್‌ರಂಥವರು ಸಂವಿಧಾನದ ಬಗ್ಗೆ ಹೇಗೆ ಸಮರ್ಥವಾಗಿ ಮಾತನಾಡಬಲ್ಲರು? ಅವರಿಂದ ಏನು ಸಂದೇಶ ರವಾನಿಸಲಿದ್ದೀರಿ? ಸಂವಿಧಾನದ ಬಗ್ಗೆ ಮಾತನಾಡುವ ಸಾಮರ್ಥ್ಯವಂತರು ಇರಲಿಲ್ಲವೇ?
ಆಕೆಯನ್ನು ವಿಮಾನ ನಿಲ್ದಾಣದಲ್ಲಿ ತಡೆದಾಗ ಎದುರಾದ ಪ್ರತಿರೋಧಕ್ಕಿಂತ ಹೆಚ್ಚಿನ ವಿರೋಧ ಮತ್ತು ಖಂಡನೆ ಆಕೆಯನ್ನು ಸರ್ಕಾರದ ಅತಿಥಿಯಾಗಿ ಆಹ್ವಾನಿಸಿದ್ದರ ಬಗ್ಗೆಯೇ ವ್ಯಕ್ತವಾಯಿತಲ್ಲ.. ಜನರ ನಾಡಿಮಿಡಿತ ತಿಳಿಯದ ಸರ್ಕಾರವಾಯಿತೇ ಅನ್ನಿಸದಿರದು.
ಪ್ರಶ್ನೆ ಇರುವುದು, ಸರ್ಕಾರ ಏಕೆ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದೆ? ದೇವಸ್ಥಾನ ಭವಿಷ್ಯ, ಮಠಾಧೀಶರುಗಳನ್ನು ಗೌರವಿಸಿ ನಮಸ್ಕರಿಸುವ ಡಿಸಿಎಂ ಡಿ.ಕೆ.ಶಿವಕುಮಾರ ಒಂದೆಡೆಯಾದರೆ, ವಾಸ್ತವವಾದಿ, ಅಹಿಂದದ ಪ್ರಖರ ಪ್ರತಿಪಾದಕ ಎನ್ನುವ ಸಿಎಂ ಸಿದ್ದರಾಮಯ್ಯ ಇನ್ನೊಂದೆಡೆ. ಸರ್ಕಾರದ ಎರಡು ಗುಂಪುಗಳೇ ಈ ಎಡಬಿಡಂಗಿತನಕ್ಕೆ ಕಾರಣವೇ? ದುರಂತ ಎಂದರೆ ವಿವಾದಗಳನ್ನು ಮೈಮೇಲೆ ಹಾಕುವವರು ಯಾರೋ, ಅವನ್ನು ನಿರ್ವಹಿಸಬೇಕಾದ ಹೊಣೆ ಈ ಇಬ್ಬರದ್ದೇ. ಮುಜುಗರಕ್ಕೆ ಒಳಗಾಗುವುದು ಒಟ್ಟಾರೆ ಸರ್ಕಾರ. ಹುಸಿನಗು ನಕ್ಕು ಎದೆಯುಬ್ಬಿಸುವುದು ಪ್ರತಿಪಕ್ಷಗಳೇ.
ಬೇಕಿತ್ತಾ ಇಂತಹ ಎಡಬಿಡಂಗಿತನ? ಜನ ಬಯಸಿದ್ದಂತೂ ಇದಲ್ಲ. ಸ್ವಚ್ಛ, ಸುಭದ್ರ, ಸರಳ, ಸರ್ವಸಮ್ಮತ ಸರ್ಕಾರವನ್ನು ಜನ ನಿರೀಕ್ಷಿಸುತ್ತಾರೆ. ಸಮರ್ಥರಿದ್ದಾರೆ. ಅಸಮರ್ಥರೂ ಇದ್ದಾರೆ. ಅನುಭವಿಗಳಿದ್ದಾರೆ. ಅನನುಭವಿಗಳೂ ಇದ್ದಾರೆ ಎಂದರೂ, ಅವರಷ್ಟೇ ಸಮರ್ಥವಾಗಿ ಎಡಬಿಡಂಗಿಗಳೂ ಇದ್ದಾರೆ ಎನ್ನಬಹುದೇನೋ?
ಬಹುಶಃ ವಿಷಿಣ್ಯತೆಯಿಂದ ಪೇಲವವಾಗಿರುವ ಪ್ರತಿಪಕ್ಷಗಳಿಗೆ ಇನ್ನಷ್ಟು ಇಂತಹ ಅಸ್ತ್ರಗಳು, ಟಾನಿಕ್ ದೊರೆಯಬಹುದೇನೋ..