ಎನ್‌ಇಪಿಗೆ ವಿವೇಕದ ಮಾರ್ಗವಿಲ್ಲವೇ?
೧೯೮೬ರ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ೨೦೧೬ರಿಂದ ಹೊಸ ರಾಷ್ಟ್ರೀಯ ಶಿಕ್ಷಣ ರೂಪಿಸುವ ಹೊಣೆ ಹೊತ್ತ ತಂಡ ಸತತ ಅಧ್ಯಯನ, ಚರ್ಚೆ ಸಲಹೆಗಳ ಭಾಗವಾಗಿ ೨೦೧೯ರಲ್ಲಿ ಒಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರು ರೂಪಿಸಿತು. ಇದು ಹಲವಾರು ಬದಲಾವಣೆಗಳೊಂದಿಗೆ ಡಾ. ಕಸ್ತೂರಿರಂಗನ್ ಅವರ ಈ ತಂಡ ೪೮೪ ಪುಟಗಳ ಕರಡು ಶಿಕ್ಷಣ ನೀತಿಯನ್ನು ಸಾರ್ವಜನಿಕ ಸಮಾಲೋಚನೆಗಳಿಗೆ ತೆರೆಯಿತು. ಪ್ರಯುಕ್ತ ೨.೫ ಲಕ್ಷ ಗ್ರಾಮ ಪಂಚಾಯತಿಗಳು, ೬೬೦೦ ಬ್ಲಾಕ್‌ಗಳು, ೬೦೦೦ ನಗರ ಸ್ಥಳೀಯ ಸಂಸ್ಥೆಗಳು ೬೭೬ ಜಿಲ್ಲೆಗಳಿಂದ ಎರಡು ಲಕ್ಷ ಸಲಹೆ ಸ್ವೀಕರಿಸಿದ ಭಾರತ ಕೇಂದ್ರಿತ ಶಿಕ್ಷಣ ನೀತಿಯ ವರದಿ ಸರಕಾರಕ್ಕೆ ಸಲ್ಲಿಸಲಾಯಿತು. ಇದು ೨೦೨೦ ಜುಲೈ ೨೯ರಂದು ಕೇಂದ್ರ ಸರಕಾರದ ಕ್ಯಾಬಿನೇಟ್ ಅಂಗೀಕರಿಸಿತು. ಇದು ೨೦೪೦ ರವರೆಗಿನ ಗುರಿಯೊಂದಿಗೆ ಅಡಿಪಾಯ ಹಂತ, ಪೂರ್ವಸಿದ್ಧತಾ ಹಂತ, ಮಧ್ಯಹಂತ ಹೀಗೆ ವಿವಿಧ ಆಯಾಮಗಳೊಂದಿಗೆ ಒಂದು ಹೊಸ ರಾಷ್ಟ್ರೀಯ ನೀತಿಯನ್ನು ಕೇಂದ್ರ ಸರಕಾರ ಕೊಟ್ಟಾಗಿತ್ತು. ಕರ್ನಾಟಕದಲ್ಲಿ ಇದು ಜಾರಿಗೆ ಕೂಡ ಬಂದಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು, ಅದರ ವರದಿ, ಅದರ ಮೇಲೆ ವಿದೇಶಿ ಪ್ರಭಾವ, ಶಿಕ್ಷಣದ ತಳಪಾಯಕ್ಕೆ ಮಹತ್ವವಿಲ್ಲದ್ದು, ಸಾಕಷ್ಟು ಚರ್ಚೆಗಳು ನಡೆಯದಿರುವುದು. ಯಾರನ್ನೋ ಮೆಚ್ಚಿಸಲು ತರಾತುರಿಯಲ್ಲಿ ಜಾರಿಗೆ ಬಂದ ಎನ್‌ಇಪಿ ನಮಗೆ ಬೇಡ, ನಾವು ಅದನ್ನು ರದ್ದು ಮಾಡಿ ಎಸ್‌ಇಪಿ ಜಾರಿಗೆ ತರುತ್ತೇವೆ ಎಂದು ಕೆಲವು ಕ್ರಮಗಳನ್ನು ಕೂಡಾ ತೆಗೆದುಕೊಂಡಿರುವುದು ಇತಿಹಾಸ. ಆದರೆ ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರು ನಾವು ಎನ್‌ಇಪಿ ರದ್ದುಪಡಿಸಿಲ್ಲ ಎಂಬ ಹೇಳಿಕೆ ಮಹತ್ವ ಪಡೆಯಿತು. ನಾಯಿಯ ಬಾಲವನ್ನು ಎಷ್ಟು ಕತ್ತರಿಸಿ ಹಾಕಿದರೂ ಅದು ನಾಯಿಯೇ ಸರಿ ಎನ್ನುವಂತೆ ಮತ್ತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮರು ಹಳಿಗೆ ಬಂದಾಗಿದೆಯೇನೋ ಎನ್ನುವ ಭಾಸವಾಗುತ್ತಿದೆ.
ಏಕದೇಶ ವಿಕೃತ ಮನನ್ಯವತ್
ಒಂದು ವಸ್ತುವಿನ ಯಾವುದಾದರೊಂದು ಭಾಗವೂ ವ್ಯತ್ಯಾಸ ಹೊಂದಿದರೆ, ಊನವಾದರೆ, ಆ ವಸ್ತುವು ಬೇರೆ ವಸ್ತು ಎನಿಸಿಕೊಳ್ಳುವುದಿಲ್ಲ. ವ್ಯಾಕರಣ ಮಹಾಭಾಷ್ಯದಲ್ಲಿ ಇದಕ್ಕೆ ಒಂದು ಉದಾಹರಣೆಯನ್ನು ಕೊಟ್ಟಿದ್ದಾರೆ. ನಾಯಿಯ ಬಾಲವನ್ನು ಕತ್ತರಿಸಿ ಹಾಕಿದರೂ ಅದು ನಾಯಿಯೆ ಸರಿ. ಅದು ಕುದುರೆ, ಕತ್ತೆಯೂ ಆಗುವುದಿಲ್ಲ. ಅಂತೆಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕೇಂದ್ರ ಸರಕಾರ ಕೊಟ್ಟಾಗಿದ್ದು, ರಾಜ್ಯ ಸರಕಾರ ಬಿಟ್ಟಾಗಿತ್ತು. ಈಗ ಬಿಟ್ಟಿಲ್ಲ ಎಂಬ ಮಾತು ಬಂದಿದೆ ಹಾಗಾದರೆ ಇದನ್ನು ಎಳೆದಾಡುವುದು ಎಷ್ಟು ಸೂಕ್ತ.
ಶತ್ರು ರಾಷ್ಟ್ರ ದೇಶದ ವಿರುದ್ಧ ಯುದ್ಧ ಸಾರಿದಾಗ ಹೇಗೆ ಪಕ್ಷಗಳು ಗೌಣವಾಗಿ ಇಡೀ ದೇಶ ಒಂದಾಗಿ ವರ್ತಿಸುತ್ತದೆಯೋ ಹಾಗೆಯೇ ದೇಶಕ್ಕೆ ಜೀವ ಕೊಡುವ ಶಿಕ್ಷಣದ ವಿಷಯ ಬಂದಾಗ ಸರಿಯಾಗಿ ಒಂದು ನಿರ್ಧಾರ ತೆಗೆದುಕೊಳ್ಳುವಾಗ ತಗಾದೆ ಹುಟ್ಟಿ, ಕೆಲವು ಸರಿ, ತಪ್ಪು ಎಂಬುವುದು ಒಬ್ಬರಿಗೊಬ್ಬರು ವಿರೋಧಿಸುವುದು, ವಿರೋಧಕ್ಕಾಗಿ ಅಲ್ಲ.
ಆದರೆ ವಿವೇಕವಂತರ ಕೈಯಲ್ಲಿ ಇದು ಸಲ್ಲಬೇಕು. ಅವರು ಎನ್‌ಇಪಿ ಕೊರತೆಗಳ ಮರು ವಿಮರ್ಶಿಸಿ ಎಲ್ಲ ಅಂಶಗಳ ಸಮನ್ವಯ ಮಾಡಿಕೊಂಡು ಸಮಂಜಸವಾದ ಒಂದು ಸಿದ್ಧಾಂತಕ್ಕೆ ಬರಬೇಕು, ಶಿಕ್ಷಣದ ದಾರಿಯನ್ನು ಸುಗಮಗೊಳಿಸಿಕೊಳ್ಳುವಂತಾಗಬೇಕು. ಅದು ಬಿಟ್ಟು ಇದು ಹೇಗಾಗುತ್ತದೆ ಎಂದರೆ, ಅಂಬಿಗ ಒಂದು ದೋಣಿಯನ್ನು ತೆಗೆದುಕೊಂಡು ಹೊರಟ, ದೋಣಿಯಲ್ಲಿ ಬಹಳ ಜನರಿದ್ದದ್ದನ್ನು ಕಂಡು, ಅಫೀಮು ತಿಂದ ಒಬ್ಬ ವ್ಯಕ್ತಿ ತನ್ನ ಕಾಲಿಗೆ ಹಗ್ಗವನ್ನು ತಾನೇ ಕಟ್ಟಿಕೊಂಡ. ಅಂಬಿಗ, ಅದೇಕೆ ಹಾಗೆ ಕಟ್ಟಿಕೊಂಡಿರುವೆ ಎಂದು ಕೇಳಿದಾಗ ಆತ ಇಲ್ಲಿ ಬಹಳ ಜನರಿದ್ದಾರೆ ಕೈಚೀಲ, ಚಪ್ಪಲಿಗಳಂತೆ ನಾನು ಅದಲು ಬದಲಾಗಿ ಬಿಟ್ಟೇನೆಂದು ಗುರುತಿಗಾಗಿ ಹಗ್ಗವನ್ನು ಕಟ್ಟಿಕೊಂಡಿದ್ದೇನೆ ಎಂದು ಹೇಳಿದ.
ಆಮೇಲೆ ಅಫೀಮಿನ ಮತ್ತಿನಿಂದ ಆ ವ್ಯಕ್ತಿ ಮಲಗಿದ. ಅಂಬಿಗನು ಚೇಷ್ಟೆಗಾಗಿ ಅವನ ಕಾಲಿನ ಹಗ್ಗವನ್ನು ಬಿಚ್ಚಿ, ತನ್ನ ಕಾಲಿಗೆ ಕಟ್ಟಿಕೊಂಡನು. ಅಫೀಮು ತಿಂದವನಿಗೆ ಎಚ್ಚರವಾದಾಗ ಕಾಲಿನ ಹಗ್ಗ ಅಂಬಿಗನ ಕಾಲಲ್ಲಿರುವುದು ಕಂಡುಬಂದಿತು. ಒಡನೆಯೇ ಅವನು ಎಲೈ, ನಾನೇ ಅಂಬಿಗನಾಗಿ ಹೋಗಿದ್ದೇನೆ! ಕಾಲಿನ ಪಟ್ಟಿ ಇರತಕ್ಕವನೇ ನಾನು! ದೋಣಿಯ ಹುಟ್ಟನ್ನು ಕೊಡು, ನಾನೇ ಅಂಬಿಗ! ನಾ ಹೇಳಿದಂತೆ ಕೇಳು ಜಗಳವನ್ನೇ ತೆಗೆದಿದ್ದ. ಅಂತೆಯೇ ನಾನಾ? ನೀನಾ? ಎನ್ನುವುದು ಬಿಟ್ಟು ಸಮಯ, ಹಣ, ವ್ಯರ್ಥಗೊಳಿಸದೇ ಒಂದು ಶಿಕ್ಷಣ ವ್ಯವಸ್ಥೆ ಹಳಿಗೆ ಬರುವಂತೆ ನೋಡಿಕೊಳ್ಳಬೇಕು. ಇಲ್ಲಿ ರಾಷ್ಟ್ರ ಮುಖ್ಯ. ಪಕ್ಷ, ವ್ಯಕ್ತಿಗಳು ಗೌಣ. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿದರೆ ತಪ್ಪೇನು? ತಿದ್ದಿಕೊಂಡು ಹೋಗುವುದು ವಿವೇಕದ ಮಾರ್ಗವಲ್ಲವೆ? ನೋಡುವ ಕಣ್ಣು ಬೇಕು, ಕಣ್ಣಿರದೇ ಕನ್ನಡಿ ಏನು ಮಾಡೀತು?