For the best experience, open
https://m.samyuktakarnataka.in
on your mobile browser.

ಎನ್‌ಎಸ್‌ಯುಐ ‘ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನ

07:22 PM Sep 10, 2024 IST | Samyukta Karnataka
ಎನ್‌ಎಸ್‌ಯುಐ ‘ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನ

ಮಂಗಳೂರು: ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಸಂಗ್ರಹಿಸಿ, ಬಗೆಹರಿಸುವ ಉದ್ದೇಶದಿಂದ ಎನ್‌ಎಸ್‌ಯುಐ ಸಂಘಟನೆಯು ‘ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನವನ್ನು ರಾಜ್ಯದೆಲ್ಲೆಡೆ ಆರಂಭಿಸಿದ್ದು, ಮಂಗಳೂರಿನಲ್ಲಿ ಮಂಗಳವಾರ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ದ. ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ್, ಸ್ಕಾಲರ್‌ಶಿಪ್, ಬಸ್ ಸಮಸ್ಯೆ, ಎನ್‌ಇಪಿ- ಎಸ್‌ಇಪಿ ಅಳವಡಿಕೆಯಲ್ಲಿನ ಸಮಸ್ಯೆಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿ ಸಮೂಹ ಎದುರಿಸುತ್ತಿದೆ. ಅವುಗಳನ್ನು ಸೂಕ್ತ ವೇದಿಕೆಯ ಮೂಲಕ ಬಗೆಹರಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಗೂಗಲ್ ಫಾರಂ ನೀಡುತ್ತೇವೆ. ಅದರಲ್ಲಿ ಸಮಸ್ಯೆಗಳನ್ನು ನಮೂದಿಸಿ ನೀಡುವ ಮೂಲಕ ಮಾಹಿತಿ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದರು.
ಎನ್‌ಎಸ್‌ಯುಐನ ಎಲ್ಲ ಮುಖಂಡರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಯಾವ ಕಾಲೇಜಿನಲ್ಲಿ ಯಾವ ಸಮಸ್ಯೆಗಳಿವೆ, ಯಾವ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳು ಎಂಬಿತ್ಯಾದಿ ವರ್ಗೀಕರಣ ಮಾಡಿ ಅದರ ಪ್ರಕಾರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ. ಸರ್ಕಾರದ ಮೂಲಕ ಬಗೆಹರಿಸಬೇಕಾದ ಸಮಸ್ಯೆಗಳಿದ್ದರೆ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು. ಒಂದು ವೇಳೆ ಸಮಸ್ಯೆ ಇತ್ಯರ್ಥವಾಗದಿದ್ದರೆ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ಅಭಿಯಾನದ ಮೊದಲ ದಿನ ಮಂಗಳೂರು ವಿವಿ ಸೇರಿದಂತೆ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಮಾಹಿತಿ ಕಲೆಹಾಕಿದ್ದೇವೆ. ಉಪನ್ಯಾಸಕರ ಕೊರತೆ, ಯುಜಿಸಿ ಪೋರ್ಟಲ್, ಬಸ್ ಸಮಸ್ಯೆಗಳು ಪ್ರಧಾನವಾಗಿ ಕಂಡುಬಂದಿವೆ. ಈ ತಿಂಗಳು ಪೂರ್ತಿ ಅಭಿಯಾನ ನಡೆಯಲಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರತ್ಯೇಕ ಯೋಜನೆ: ನಿಗಮಗಳಲ್ಲಿನ ಹಣ ದುರುಪಯೋಗ ಆರೋಪದ ಕುರಿತು ಪ್ರತಿಕ್ರಿಯಿಸಿದ ಕೀರ್ತಿ ಗಣೇಶ್, ದೇವರಾಜ ಅರಸು ನಿಗಮದಲ್ಲಿ ಇಂಥ ಆರೋಪ ಬಂದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ಈ ವರ್ಷ ನಿಗಮಕ್ಕೆ ೧೦೦ ಕೋಟಿ ರು. ಅನುದಾನ ನೀಡಲಾಗಿದ್ದು, ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ, ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಫಹಾಝ್, ಮುಖಂಡರಾದ ರಫೀಕ್, ಅನ್ವಿತ್ ಕಟೀಲ್, ಝಾಕೀರ್, ಕೀರ್ತನ್ ಗೌಡ ಉಪಸ್ಥಿತರಿದ್ದರು.