ಎನ್‌ಐಎ ಅಧಿಕಾರಿಗಳಿಂದ ಮೂವರು ವಶಕ್ಕೆ
ಕಾರವಾರ: ನೌಕಾನೆಲೆಯೊಳಗಿನ ಪೋಟೋ ಸೇರಿದಂತೆ ಇತರೆ ಗೌಪ್ಯ ಮಾಹಿತಿಗಳನ್ನು ವಿದೇಶಿ ಅಧಿಕಾರಿಗಳಿಗೆ ನೀಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಮೂವರು ಹೊರ ಗುತ್ತಿಗೆ ನೌಕರರನ್ನು ರಾಷ್ಟ್ರದ್ರೋಹದ ಆರೋಪದಡಿ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.
ಕಾರವಾರ ತಾಲ್ಲೂಕಿನ ತೋಡೂರಿನ ಸುನೀಲ್ ನಾಯ್ಕ್, ಮುದುಗಾದ ವೇತನ್ ತಾಂಡೇಲ್ ಹಾಗೂ ಅಂಕೋಲಾ ಹಳವಳ್ಳಿಯ ಅಕ್ಷಯ್ ರವಿ ನಾಯ್ಕ್ ವಶಕ್ಕೆ ಪಡೆಯಲಾಗಿದೆ. ೨೦೨೩ರರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಈತನ ವಿಚಾರಣೆ ವೇಳೆ ಕಾರವಾರದ ನೌಕಾನೆಲೆಯಲ್ಲಿನ ಮಾಹಿತಿಗಳು ಸೋರಿಕೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ವೇಳೆ ಆತ ನೀಡಿದ ಮಾಹಿತಿ ಆಧಾರದ ಮೇಲೆ ಎನ್‌ಐಎನ ಓರ್ವ ಡಿವೈಎಸ್‌ಪಿ ಹಾಗೂ ಮೂವರು ಇನ್ಸ್ಪೆಕ್ಟರ್‌ಗಳು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಅವರ ಬ್ಯಾಂಕ್ ದಾಖಲೆ, ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಇವರು ಹಣಕ್ಕಾಗಿ ಸೀಬರ್ಡ್ ನೌಕಾನೆಲೆ ಫೋಟೊ ಹಾಗೂ ಇತರ ಮಾಹಿತಿ ರವಾನಿಸುತ್ತಿದ್ದರು ಎನ್ನಲಾಗಿದೆ. ಸುನೀಲ್ ನಾಯ್ಕ ಹಾಗೂ ವೇತನ್ ತಾಂಡೇಲ್ ಅವರನ್ನು ಸೀಬರ್ಡ್ ಯೋಜನಾ ಪ್ರದೇಶದಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಅಕ್ಷಯ್ ನಾಯ್ಕ ನೌಕಾನೆಲೆಯ್ಲಿ ಕೆಲಸ ಬಿಟ್ಟು ಗೋವಾದಲ್ಲಿ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಅಲ್ಲಿಯೇ ಆತನನ್ನು ವಶಕ್ಕೆ ಪಡೆದಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.