ಎನ್‌ಡಿಎ ನಾಯಕರಾಗಿ ಮೋದಿ ಸರ್ವಾನುಮತದಿಂದ ಆಯ್ಕೆ
ಜೂನ್ 9 ರಂದು ಸಂಜೆ 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ನವದೆಹಲಿ: ಎನ್‌ಡಿಎ ಒಕ್ಕೂಟದ ಸಂಸದೀಯ ಸಭೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತಂತೆ ರಾಜನಾಥ್ ಸಿಂಗ್ ಪ್ರಸ್ತಾವನೆಗೆ ಎನ್‌ಡಿಎ ನಾಯಕರು ಅನುಮೋದನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಪ್ರಹ್ಲಾದ್ ಜೋಶಿ ಅವರು ಇದೇ ಭಾನುವಾರ ಜೂನ್ 9ರಂದು ನರೇಂದ್ರ ಮೋದಿ ಅವರು ದೇಶದ ಮುಂದಿನ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಖಚಿತಪಡಿಸಿದರು. ಸಮಾರಂಭವು ಜೂನ್ 9 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಇನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ನರೇಂದ್ರ ಮೋದಿ ಸಂಸದರನ್ನು ಉದ್ದೇಶಿಸಿ ಮಾತನಾಡಿರುವ ಅವರು ಎನ್‌ಡಿಎ ಎಂದರೆ ನ್ಯೂ ಇಂಡಿಯಾ, ಡೆವಲಪ್ ಇಂಡಿಯಾ, ಚುನಾವಣೆ ವೇಳೆ ಹೇಳಿದಂತೆ ಜನರ ಕೆಲಸಕ್ಕೆ ನಾವು ಸಿದ್ಧ. ಎನ್‌ಡಿಎ ಅಲ್ಲದೆ ಬೇರೆ ಯಾರ ಮೇಲೂ ಜನತೆಗೆ ವಿಶ್ವಾಸವಿಲ್ಲ. ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದೇ ನಮ್ಮ ಗುರಿ. ಇದುವರೆಗಿನ 10 ವರ್ಷಗಳ ಆಡಳಿತ ಬರೀ ಟ್ರೇಲರ್ ಎಂದರು. ದಕ್ಷಿಣ ಭಾರತದಲ್ಲಿ ಎನ್‌ಡಿಎ ಬುನಾದಿ ಭದ್ರವಾಗಿದ್ದು, ಹೊಸ ರಾಜಕೀಯಕ್ಕೆ ಇದು ನಾಂದಿಯಾಗಿದೆ. ಕರ್ನಾಟಕ ಹಾಗೂ ತೆಲಂಗಾಣವನ್ನೇ ತೆಗೆದುಕೊಳ್ಳಿ, ಇತ್ತೀಚೆಗೆ ಬೇರೆ ಪಕ್ಷಗಳ ಸರ್ಕಾರಗಳು ಅಲ್ಲಿ ಆಡಳಿತಕ್ಕೆ ಬಂದಿವೆ. ಆದರೆ, ಜನರು ಭ್ರಮೆಯಿಂದ ಹೊರಬಂದು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಜನ ಎನ್‌ಡಿಎ ಮೈತ್ರಿಕೂಟವನ್ನು ಸ್ವೀಕರಿಸಿದ್ದಾರೆ. ಇದು ಎನ್‌ಡಿಎ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.