ಎರಡು ತಿಂಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಕೆ
ಧಾರವಾಡ: ಬಿಜೆಪಿ ಅವಧಿಯಲ್ಲಿ ನಡೆದಿರುವ ಹಗರಣಗಳ ಸಂಪೂರ್ಣ ತನಿಖೆಗೆ ಸರಕಾರ ಸಮನ್ವಯ ಸಮಿತಿ ರಚಿಸಿದ್ದು, ಎರಡು ತಿಂಗಳಲ್ಲಿ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮನ್ವಯ ಸಮಿತಿಯಲ್ಲಿ ಡಾ. ಜಿ. ಪರಮೇಶ್ವರ, ಎಚ್.ಕೆ. ಪಾಟೀಲ, ನಾನು ಸೇರಿದಂತೆ ಅನೇಕ ಹಿರಿಯ ನಾಯಕರಿದ್ದಾರೆ. ಎರಡು ತಿಂಗಳಲ್ಲಿ ಹಗರಣಗಳ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ತಾಕೀತು ಮಾಡಿದ್ದಾರೆ. ಬಿಜೆಪಿ ಅವಧಿಯಲ್ಲಿಯ ಪ್ರತಿಯೊಂದು ಹಗರಣಗಳನ್ನು ತನಿಖೆ ಮಾಡಿ ವರದಿ ಸಲ್ಲಿಸಲಾಗುವುದು. ಸಮಿತಿಯ ಸಭೆಗೆ ಹಾಜರಾಗಿ ಎಲ್ಲ ಮಾಹಿತಿ ಒದಗಿಸುತ್ತೇನೆ ಎಂದರು.
ಅಮೇರಿಕಾದಲ್ಲಿ ಡಿ.ಕೆ. ಶಿವಕುಮಾರ, ರಾಹುಲ್ ಗಾಂಧಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ನಮ್ಮ ನಾಯಕರು. ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರಲ್ಲಿ ಕುತೂಹಲ ಏನಿಲ್ಲ. ಅವರಿಬ್ಬರು ಭೇಟಿಯಾಗಿದ್ದು ಖುಷಿಯ ವಿಚಾರ. ಅಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆದಿಲ್ಲ. ಅದರ ಬಗ್ಗೆ ಪದೇ ಪದೇ ನನ್ನನ್ನು ಕೇಳಬೇಡಿ ಎಂದರು.