ಎಲೆಕ್ಟ್ರಿಕ್ ವಾಹನ ನೋಂದಣಿ: ೩ನೇ ಸ್ಥಾನದಲ್ಲಿ ಕರ್ನಾಟಕ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಇಂಧನದ ಬದಲು ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇ-ವಾಹನಗಳ (ಇವಿ) ನೋಂದಣಿ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಕಾಣುತ್ತಿದೆ.
೨೦೨೦-೨೧ ರಿಂದ ೨೦೨೩-೨೦೨೪ ರವರೆಗೆ ರಾಜ್ಯದಲ್ಲಿ ಎಲೆಕ್ಟಿçಕ್ ವಾಹನಗಳ ನೋಂದಣಿ ಯಲ್ಲಿ ಶೇ. ೧,೨೭೫ರಷ್ಟು ಬೆಳವಣಿಗೆಯನ್ನು ಕಂಡಿದೆ. ಸಾರಿಗೆ ಅಧಿಕಾರಿಗಳ ಪ್ರಕಾರ, ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.
೨೦೧೭-೧೮ ರಲ್ಲಿ ೧,೯೨೨ ಇ-ವಾಹನಗಳಿಂದ, ೨೦೨೩-೨೦೨೪ ರಲ್ಲಿ (ಮಾರ್ಚ್ ೨೫ ರವರೆಗೆ) ಸಂಖ್ಯೆ ೧,೫೯,೪೨೮ ಕ್ಕೆ ಏರಿಕೆಯಾಗಿದೆ. ವಾಹನಗಳಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಕಾರುಗಳು ಸೇರಿವೆ. ರಾಜ್ಯದಲ್ಲಿ ಒಟ್ಟು ೩.೪ ಲಕ್ಷ ಇ-ವಾಹನಗಳಿದ್ದು, ೨.೯೮ ಲಕ್ಷ ದ್ವಿಚಕ್ರ ವಾಹನಗಳು, ೨೩,೫೧೬ ನಾಲ್ಕು ಚಕ್ರ ಮತ್ತು ೧೮,೨೪೬ ತ್ರಿಚಕ್ರ ವಾಹನಗಳಿವೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದಾಗ, ಜನರು ಈ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಇವುಗಳನ್ನು ಕೊಳ್ಳುವವರ ಸಂಖ್ಯೆಯು ಕಡಿಮೆಯಾಗಿತ್ತು. ಜನರು ಇ-ವಾಹನಗಳ ಕಾರ್ಯಕ್ಷಮತೆಯ ಬಗ್ಗೆ ನಂಬಿಕೆ ಇಟ್ಟುಕೊಂಡಿರಲಿಲ್ಲ. ಜೊತೆಗೆ ಈ ವಾಹನಗಳನ್ನು ಎಲ್ಲಿ ಚಾರ್ಜಿಂಗ್ ಮಾಡಿಸುವುದು ಎಂಬ ಬಗ್ಗೆ ಗೊಂದಲ ಇದ್ದ ಕಾರಣ ಎಲೆಕ್ಟ್ರಿಕ್ ವಾಹನ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲವಾಗಿದೆ.
೨೦೧೭-೧೮ರಲ್ಲಿ ರಾಜ್ಯದಲ್ಲಿ ಕೇವಲ ೧,೯೨೨ ಎಲೆಕ್ಟ್ರಿಕ್ ವಾಹನಗಳಿದ್ದವು. ಅವುಗಳಲ್ಲಿ ೯೭ ದ್ವಿಚಕ್ರ ವಾಹನಗಳು, ೧,೫೮೯ ತ್ರಿಚಕ್ರ ವಾಹನಗಳು ಮತ್ತು ೨೩೬ ಕಾರುಗಳು ಇದ್ದವು. ಆದರೆ, ಈಗ ಪಟ್ಟಣಗಳು ಮತ್ತು ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಮಾರುಕಟ್ಟೆಯಲ್ಲಿ ಅನೇಕ ಇ-ವಾಹನ ಪ್ಲೇಯರ್‌ಗಳು ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದಲ್ಲಿ ಇಂತಹ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಹೇಳಿದ್ದಾರೆ ೨೦೨೩-೨೦೨೪ರಲ್ಲಿ ನೋಂದಣಿಯಾದ ಎಲೆಕ್ಟಿçಕ್ ವಾಹನಗಳ ಪೈಕಿ ದ್ವಿಚಕ್ರ ವಾಹನಗಳು ೧,೪೦,೩೨೭. ಹೀಗಾಗಿ ಬೈಕ್‌ಗಳೇ ಅಗ್ರಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಕಾರುಗಳಿದ್ದು, ಒಟ್ಟು ೧೩,೬೬೭ ಕಾರುಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು, ೫,೪೩೪ ಆಟೋಗಳನ್ನು ನೋಂದಣಿ ಮಾಡಲಾಗಿದೆ.
ರಿಯಾಯ್ತಿಯೇ ಖರೀದಿಗೆ ಕಾರಣ: ಎಲೆಕ್ಟಿçಕ್ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಮುಖ್ಯ ಕಾರಣಗಳೆಂದರೆ ಜನರಲ್ಲಿ ಪರಿಸರ ಕಾಳಜಿ ಮತ್ತು ಕರ್ನಾಟಕ ಸರ್ಕಾರವು ಇಂತಹ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ರಾಜ್ಯದಲ್ಲಿ ೨೫ ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.