ಎಲ್ಲಿ ನನ್ನ ಮಂತ್ರಿಗಳು…?
ಭಯಂಕರ ಇತಿಹಾಸ ಕಾರ ಎಂದೇ ಹೆಸರುವಾಸಿ ಯಾಗಿದ್ದ ತಿಗಡೇಸಿ ಆ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿದ್ದ. ಯಾರೇ ಭೇಟಿಯಾದರೂ ಇತಿಹಾಸದ ಬಗ್ಗೆಯೇ ಮಾತನಾಡುತ್ತಿದ್ದ. ಕೇಳುವವರಿಗೆ ಮನಸ್ಸಿಲ್ಲದಿದ್ದರೂ ಅವರನ್ನು ಎಳೆದೆಳೆದು ಕೂಡಿಸಿಕೊಂಡು ಆವಾಗ ಹೀಗಾಯಿತು…ಅದರ ಹಿಂದೆ ಹಾಗಾಯಿತು…ಆ ರಾಜನು ಹಾಗೆ ಇದ್ದ ಆತನಿಗೆ ಇಷ್ಟು ಹೆಂಡಂದಿರು ಇದ್ದರು ಎಂದು ಹೇಳುತ್ತಿದ್ದ. ಊರ ಮುಂದಿನ ಆಲದ ಮರವನ್ನು ತೋರಿಸಿ…ಕೃಷ್ಣದೇವರಾಯನ ಅಳಿಯ ರಾಮರಾಯನು ಇದೇ ಮರದ ಮೇಲೆ ಕುಳಿತು ಆದಿಲ್ ಶಾ ಸೈನಿಕರ ಮೇಲೆ ಗುಂಡು ಹಾರಿಸಿದ್ದ ಎಂದು ಹೇಳುತ್ತಿದ್ದ. ರಾಷ್ಟçಕೂಟರು, ಚೇಳರಂತೂ ಏಳೇಳು ಫೂಟು ಎತ್ತರವಿದ್ದರು. ಅವರು ಎಡಗೈಯಿಂದಲೇ ಕತ್ತಿ ತಿರುಗಿಸುತ್ತಿದ್ದರು. ಊಟಕ್ಕೆ ಕುಳಿತರೆ ಸಾಕು, ಊಟ ಬಡಿಸುವವರಿಗೆ ಸಾಕು ಸಾಕಾಗಿ ಹೋಗುತ್ತಿತ್ತು ಎಂದು ಹೇಳುತ್ತಿದ್ದ. ಇಂತಹ ತಿಗಡೇಸಿ ಅವತ್ತು ಜಾಲಿಕಟ್ಟೆಯ ಕುಳಿತು ಇತಿಹಾಸದ ಮಾತುಗಳನ್ನು ಹೇಳುತ್ತಿರುವಾಗಲೇ…ಮಧ್ಯೆ ಬಾಯಿ ಹಾಕಿದ ಹುಚ್ಚುಲುಗನು ಅಯ್ಯೋ ಬಿಡಯ್ಯ ಕಂಡಿದ್ದೀನಿ…ನೀನು ಹೇಳುತ್ತಿ ಎಂದರೆ ನಾವು ನಂಬಿ ಬಿಡಬೇಕು ಅಲ್ಲವೇ? ಸ್ಪಾಟ್ ವಿಜಿಟ್ ಮಾಡಿದಿಯ? ಎಂದು ಕೇಳಿದ. ನಾನು ಸ್ಪಾಟಿಗೆ ಹೋಗಿ ಇತಿಹಾಸ ತಿಳಿದುಕೊಂಡು ನಿಮಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಹೇಳಿದ. ಮರುದಿನದಿಂದ ಎಲ್ಲೆಲ್ಲೋ ಹುಡುಕಿ ಮೂರು ದಿನಗಳಾದ ನಂತರ ಜಾಲಿಕಟ್ಟೆಯ ಮೇಲೆ ಕುಳಿತು ಎಲ್ಲರನ್ನೂ ಕರೆಯಿಸಿ…ಕೇಳಿ…ನೀವು ಸ್ಪಾಟ್ ವಿಜಿಟ್ ಅನ್ನುತ್ತೀರಲ್ಲವೇ ನಾಳೆ ಹೋಗೋಣ ಬನ್ನಿ ಎಂದು ಹೇಳಿದ. ಮರುದಿನ ಎಲ್ಲರೂ ಗಾಡಿ ಮಾಡಿಕೊಂಡು ಅಲ್ಲಿಗೆ ಹೋದರು. ರಣಬಿಸಿಲಿನಲ್ಲಿ ಕಲ್ಲಿನ ಗುಡ್ಡದ ಮೇಲೆ ಎಲ್ಲರನ್ನೂ ಕರೆದುಕೊಂಡು ಹೋಗಿ..ಒಂದೆಡೆ ನಿಂತು…ಇದೇ ನೋಡಿ ಗುಹೆ…ಈಗ್ಗೆ ಒಂದೂವರೆ ನೂರು ವರ್ಷದ ಹಿಂದೆ ಯುದ್ಧ ಎದುರಿಸಲಾಗದೇ ರಾಜನು ಇದರಲ್ಲಿ ಸೇರಿಕೊಂಡಿದ್ದಾನೆ ಎಂದು ಆತನ ಇತಿಹಾಸ ಎಲ್ಲ ಹೇಳಿದ. ಇದರಲ್ಲಿ ಹೋದ ಅಂದಮೇಲೆ ಒಳಗಡೆ ಇರಬೇಕಲ್ಲವೇ ಕರೆಯಿರಿ ಎಂದು ತಿಗಡೇಸಿಗೆ ದುಂಬಾಲು ಬಿದ್ದರು. ಆಯಿತು ಎಂದು ಹೇಳಿ ತಿಗಡೇಸಿ ಬಹುಪರಾಕ್ ಹಾಕಿದರು. ವಿಚಿತ್ರವೆಂದರೆ ರಾಜ ಗುಹೆಯಿಂದ ಹೊರಬಂದು ಚಪ್ಪಾಳೆ ಹೊಡೆದು ಯಾರಲ್ಲಿ? ಕರೆಯಿರಿ ಮಂತ್ರಿಗಳನ್ನು ಅಂದ. ರೀ ರಾಜರೇ ಮಂತ್ರಿಗಳು ವಿಧಾನಸೌಧದಲ್ಲಿದ್ದಾರೆ. ಕೆಲವರು ಲಫಡಾ ಮಾಡಿಕೊಂಡು ಹೆದರಿಕೊಂಡಿದ್ದಾರೆ. ಇನ್ನೂ ಹಲವರು ಏನೇನೋ ಮಾಡುತ್ತಿದ್ದಾರೆ. ಆಪರೇಶನ್ ಮಾಡಿದರೆ ಹೇಗೆ ಅನ್ನುತ್ತಿದ್ದಾರೆ. ಈಗ ಬೈ ಎಲೆಕ್ಷನ್ನಿನಲ್ಲಿ ಬಿಜಿ ಆಗಿದ್ದಾರೆ ಎಂದು ತಿಗಡೇಸಿ ಹೇಳಿದ. ಏಯ್ ಏನೇನೋ ಮಾತನಾಡಬೇಡ ನಿನ್ನನ್ನು ಇದೇ ಕತ್ತಿಯಿಂದ ಎಂದು ಕತ್ತಿ ಹೊರತೆಗೆದ…ಹೊಡಿಯೋ ಹೊಡಿ ಮರ್ಡರ್ ಕೇಸ್ ಹಾಕಿಸಿಬಿಡುತ್ತೇನೆ ಎಂದು ಹೇಳಿದಾಗ ಹೆದರಿದ ರಾಜ…ನಿಮ್ಮ ಸಹವಾಸವೇ ಬೇಡ ಎಂದು ಮತ್ತೆ ಗುಹೆಯೊಳಗೆ ಹೋದ.