ಎಲ್ಲೆಡೆ ಮದ್ಯ ವ್ಯಾಪಾರಕ್ಕೆ ಸರ್ಕಾರ ಅನುಮತಿ ಕೊಡಬಾರದು
ಉಡುಪಿ: ಇಂದು ಮದ್ಯ ಎಲ್ಲಾ ಕಡೆ ಸರ್ಕಾರ ಮದ್ಯ ಸೃಷ್ಟಿ ಹಾಗೂ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ ಮಾತನಾಡಿದರು.
ನಮ್ಮ ಆರ್ಥಿಕತೆ ಮದ್ಯಾಧಾರಿತವಾಗಿದ್ದು, ಅದರ ಬದಲಿಗೆ ನಾವು ಕ್ಷೀರದ ಮೂಲಕ ಆರ್ಥಿಕತೆಯನ್ನು ವೃದ್ಧಿಗೊಳಿಸಬೇಕು. ಶ್ರೀಕೃಷ್ಣ ಕೂಡಾ ಇದೇ ಸಂದೇಶ ನೀಡಿದ್ದಾನೆ ಎಂದರು. ಕೃಷ್ಣನ ಭಗವದ್ಗೀತೆಯನ್ನು ನಂಬಿದವರು ಮತ್ತು ಅದರಿಂದ ಸ್ಪೂರ್ತಿ ಪಡೆದವರು ಮಹಾತ್ಮ ಗಾಂಧಿ. ಅವರ ಜಯಂತಿಯನ್ನು ಕೃಷ್ಣ ಸನ್ನಿಧಿಯಲ್ಲಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಎಂದರು. ಅಹಿಂಸೆ ಮೂಲಕ ಸ್ವಾತಂತ್ರ್ಯ ಹೋರಾಟ ಮಾಡಿದವರು ಗಾಂಧೀಜಿ. ಅವರು ಭಗವದ್ಗೀತೆಯಿಂದ ಅಹಿಂಸೆಯ ಸ್ಪೂರ್ತಿ ಪಡೆದವರು. ಕೃಷ್ಣ ಹಿಂಸೆಯನ್ನು ಬೋಧಿಸಿದ್ದಾನೆ ಎಂದು ಹಲವರು ಆಪಾದಿಸುತ್ತಾರೆ. ಕೃಷ್ಣ ಹಿಂಸೆ ಬೋಧಿಸಿದ್ದರೆ ಗಾಂಧೀಜಿ ಅವನಿಂದ ಸ್ಪೂರ್ತಿ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಜನಜಾಗೃತಿ ವೇದಿಕೆ ವ್ಯಸನಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು.
ಸರ್ವರಿಗೂ ಪೂಜ್ಯರಾದ ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಗಾಂಧೀಜಿಯಿಂದ ಸ್ಪೂರ್ತಿ ಪಡೆದು ನಾವು ದುಶ್ಚಟಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದರು. ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಮಾತನಾಡಿ, ಬೆಳ್ತಂಗಡಿಯಲ್ಲಿ ಆರಂಭವಾದ ವೇದಿಕೆ ಇಂದು ರಾಜ್ಯ ಮಟ್ಟಕ್ಕೆ ವಿಸ್ತರಿಸಿದೆ. ವ್ಯಸನಿಗಳನ್ನು ಸರಿದಾರಿಗೆ ತರಲು ವೇದಿಕೆ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ದಾಮೋದರ ಶರ್ಮ ಬಾರ್ಕೂರು ಮಾತನಾಡಿ, ಬಿದ್ದವರನ್ನು ಎಬ್ಬಿಸಿ ಸರಿದಾರಿ ತೋರಿಸಿ, ಸೋತವರ ಕಣ್ಣೀರೊರೆಸುವ ಕೆಲಸವನ್ನು ವೇದಿಕೆ ಮಾಡುತ್ತಿದೆ ಎಂದರು.
ಪುತ್ತಿಗೆ ಮಠದ ಕಿರಿಯ ಶ್ರೀ ಸುಶೀಂದ್ರತೀರ್ಥ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಅನಿಲ್ ಕುಮಾರ್ ಎಸ್.ಎಸ್., ಅಪ್ಪಣ್ಣ ಹೆಗ್ಡೆ, ಆರ್.ಬಿ. ಹೆಬ್ಬಳ್ಳಿ, ದೇವದಾಸ್ ಹೆಬ್ಬಾರ್, ನವೀನ್ ಅಮೀನ್, ಸತ್ಯಾನಂದ ನಾಯಕ್, ದುಗ್ಗೇಗೌಡ, ನಾಗರಾಜ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.