ಏಕತೆಯ ಮಹಾಮಂತ್ರ ಶ್ರೀರಾಮನಾಮ
ಐದು ಶತಮಾನಗಳ ಕಾಯುವಿಕೆಯ ತರುವಾಯ ಬಾಲರಾಮ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ತ್ಯಾಗ, ಬಲಿದಾನ, ಸಂಘರ್ಷ, ಭಕ್ತಿ, ಕಾನೂನು ಹೋರಾಟದ ಹಂತಗಳನ್ನು ದಾಟಿ ವಿರಾಜಮಾನನಾದ ಭರತವರ್ಷದ ಅಸ್ಮಿತೆಯ ಮೂರ್ತರೂಪ ರಘುಕುಲತಿಲಕನ ಮುದ್ದುಮುಖವನ್ನು ಕಣ್ತುಂಬಿಕೊಳ್ಳಲು ಕಣ್ಗಳೆರಡು ಸಾಲದೆಂಬ ಕೋಟ್ಯಂತರ ಭಕ್ತರ ಅನಿಸಿಕೆ ಸುಳ್ಳಲ್ಲ. ಬದುಕಿನ ಹಾದಿಯಲ್ಲಿ ಸಂಕಷ್ಟಗಳು ಎದುರಾದಾಗ, ಈ ಪ್ರಸಂಗವನ್ನು ರಾಮ ಹೇಗೆ ಎದುರಿಸುತ್ತಿದ್ದ, ಆತನ ನಡೆ ಹೇಗಿರುತ್ತಿತ್ತು' ಎಂಬ ಕುತೂಹಲಭರಿತ ಸಮಾಧಾನವನ್ನು ತರುವ ಸೀತಾಪತಿ ಯಶಸ್ವೀ ಬದುಕಿಗೆ ಪ್ರೇರಣೆ. ಸತ್ಯ, ನ್ಯಾಯ, ನೀತಿಗಳಿಗೆ ಪರ್ಯಾಯದಂತಿರುವ ರಾಮಪಥ ಅಧ್ಯಾತ್ಮಚಿಂತಕರಿಗೆ ಮಾತ್ರವೇ ಗುರಿ ತೋರಿದ್ದಲ್ಲ. ರಾಜಾ ವಿಕ್ರಮಾದಿತ್ಯ, ರಾಜಾ ಲಲಿತಾದಿತ್ಯ, ಗುಪ್ತಭೂಪಾಲರಿಂದ ಮೊದಲ್ಗೊಂಡು ಮರಾಠಾ ಸಾಮ್ರಾಜ್ಯದ ಚಕ್ರವರ್ತಿಗಳೆಲ್ಲ ಪ್ರಜಾಪಾಲನೆ ನಡೆಸಿದ್ದು ರಾಮಾದರ್ಶದ ತಳಹದಿಯ ಮೇಲೆಯೇ.
ಪ್ರಜಾಸುಖತ್ವೇ ಚಂದ್ರಸ್ಯ ವಸುಧಾಯಾ: ಕ್ಷಮಾಗುಣೈ:, ಬುಧ್ಯಾ ಬೃಹಸ್ಪತೇಸ್ತುಲ್ಯೋ ವೀರ್ಯೇ ಸಾಕ್ಷಾತ್ ಶಚೀಪತೇ:' ಎಂಬಂತಿದ್ದ ಶ್ರೀರಾಮನಿಂದ ಪ್ರಭಾವಿತರಾದ ರಾಜರ್ಷಿಗಳು ಶೌರ್ಯವೀರ್ಯ ಪರಾಕ್ರಮಗಳಲ್ಲಿ ಲೋಕಾಭಿರಾಮರಾಗಿ ಸಮಸ್ತ ಭೂಮಂಡಲವನ್ನಾಳಿದ್ದು ಇತಿಹಾಸ. ಮಹರ್ಷಿ ವಾಲ್ಮೀಕಿಯಿಂದ ರಂಗನಾಥ ಶರ್ಮಾವರೆಗೆ ಲಕ್ಷಾಂತರ ಕವಿ, ನಾಟಕಕಾರ, ಕಲಾವಿದರಿಗೆ ಸ್ಫೂರ್ತಿಸ್ಥಾನವಾದ ರಾಮಕಥೆ, ದಾಸ್ಯದ ಅಂಧಕಾರವನ್ನು ದೂರೀಕರಿಸಲು ಪ್ರಾಣವನ್ನೇ ಪಣಕ್ಕಿಟ್ಟ ಸ್ವಾತಂತ್ರ‍್ಯ ಹೋರಾಟಗಾರರಿಗೂ ಶಕ್ತಿಪುಂಜ. ಬಾಬರನಿಂದ ಧ್ವಂಸಗೊಂಡ ರಾಮಮಂದಿರದ ಪುನರುತ್ಥಾನಕ್ಕಾಗಿ ಸುಮಾರು ಎಪ್ಪತ್ತೈದಕ್ಕೂ ಅಧಿಕ ಯುದ್ಧಗಳು ನಡೆದಿದ್ದರೂ ಆ ಸಮರಗಳ ಅಂತಿಮ ಉದ್ದೇಶ ಅಖಂಡ ಭಾರತದ ಮುಕ್ತಿಯೇ ಆಗಿತ್ತು. ರಾಮನಾಮದ ದಿವ್ಯತೆಯಿಂದ ಸಮಾಜ ಒಂದಾಗಿ ಸ್ವಾತಂತ್ರ‍್ಯ ಘೋಷ ಮೊಳಗಿಸಬೇಕೆಂಬ ಕನಸು ಕಂಡ ಸಹಸ್ರಾರು ದೇಶಭಕ್ತರಲ್ಲಿ ದುಗ್ಗಿರಲ ಗೋಪಾಲಕೃಷ್ಣಯ್ಯರದು ಅಗ್ರಪಂಕ್ತಿಯಲ್ಲಿ ಶೋಭಾಯಮಾನವಾಗುವ ಹೆಸರು.ನಿನ್ನೆ, ಇಂದು, ನಾಳೆ ಹಾಗೂ ಎಂದೆಂದಿಗೂ ಭಾರತದ ಆಡಳಿತ ಭಾರತೀಯರದೇ. ಎಲ್ಲಿಂದಲೋ ಬಂದು ರಾಜ್ಯಭಾರ ಮಾಡುವ ಅಧಿಕಾರ ವಿದೇಶೀ ದಾಳಿಕೋರರಿಗಿಲ್ಲ. ನಮ್ಮ ನೆಲ, ಜಲ, ಸಂಪತ್ತನ್ನು ಕೊಳ್ಳೆಹೊಡೆದು ಜನಸಾಮಾನ್ಯರ ಬದುಕಿಗೆ ಭಾರವಾಗುವ ಕಾನೂನುಗಳನ್ನು ಜಾರಿಗೊಳಿಸಿ ಭಾರತವನ್ನೇ ಲಪಟಾಯಿಸುವ ದುರ್ಬುದ್ಧಿಯನ್ನು ಚಿವುಟದಿದ್ದರೆ ನಮ್ಮ ಬದುಕಿಗೆ ಬೆಲೆಯಿಲ್ಲ. ಅದಕ್ಕಿರುವ ಪರಿಹಾರವೊಂದೇ, ಅದು ರಾಮಧ್ಯಾನ. ಸಾಮಾನ್ಯ ಕಪಿಗಳು ರಾಮಮಂತ್ರದಿಂದ ಸೇತುವೆ ಕಟ್ಟಬಲ್ಲರಾದರೆ ನಾವು ಮಾನವರು ದೇಶವನ್ನು ಬಂಧಮುಕ್ತಗೊಳಿಸಲು ಸಾಧ್ಯವಾಗದೇ? ಶ್ರೀರಾಮನ ದಾಸರಾಗಿ, ಆತನ ನಾಮಸ್ಮರಣೆಗೈದು ನಾವೊಂದಾಗೋಣ. ಪ್ರಭುವಿನ ನೆಲಕ್ಕೊದಗಿದ ಕಂಟಕ ಕಳೆಯಲು ನಮ್ಮೊಳಗಿನ ಹನುಮಶಕ್ತಿ ಜಾಗೃತವಾಗಲಿ. ಬ್ರಿಟಿಷ್ ಸಾಮ್ರಾಜ್ಯವನ್ನು ಕೆಡವಿ ಭವ್ಯ ಹಿಂದುಸ್ಥಾನ ಕಟ್ಟಲು ಹೊರಟಿರುವ
ರಾಮ ದಂಡು' ಇತಿಹಾಸ ನಿರ್ಮಿಸಲಿದೆ, ನೋಡುತ್ತಿರಿ' ಎಂಬ ಪ್ರೇರಣಾದಾಯಿ ಮಾತು ಮತ್ತು ಬರಹಗಳಿಂದ ಯುವಕರ ಮನದಲ್ಲಿ ದೇಶಭಕ್ತಿಯ ನಂದಾದೀಪ ಉರಿಸಿದ ಗೋಪಾಲಕೃಷ್ಣಯ್ಯರು ಆಂಧ್ರ ರತ್ನ' ಬಿರುದಾಂಕಿತ ತತ್ವಜ್ಞಾನಿ ಹಾಗೂ ಅದ್ವಿತೀಯ ಮಾತುಗಾರ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಅಧ್ಯಾಪಕ ಕೋದಂಡರಾಮಸ್ವಾಮಿ-ಸೀತಮ್ಮ ದಂಪತಿಗಳಿಗೆ ಜನಿಸಿದ ಗೋಪಾಲಕೃಷ್ಣಯ್ಯರು ಬದುಕು ಅರ್ಥವಾಗುವ ಮೊದಲೇ ಹೆತ್ತವರನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಕುಟುಂಬಿಕರ ಸಹಕಾರದಿಂದ ಉನ್ನತ ಶಿಕ್ಷಣ ಪಡೆದು ಈಡನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಆರು ವರ್ಷಗಳ ಕಾಲ ಅಧ್ಯಯನಗೈದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿ ಗುಂಟೂರಿನಲ್ಲಿ ಉಪನ್ಯಾಸಕ ವೃತ್ತಿಜೀವನ ಆರಂಭಿಸಿದರು. ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ಕೇವಲ ಮಾಹಿತಿ ವಿನಿಮಯ ಕೇಂದ್ರವಾಗಿದೆಯೇ ಹೊರತು ಭಾರತೀಯ ಪರಂಪರೆಯ ಕುರಿತು ಅಭಿಮಾನ ಮೂಡಿಸುವುದಿಲ್ಲವೆಂಬ ಸತ್ಯದ ಅರಿವಾಗಿ ಹುದ್ದೆಗೆ ರಾಜೀನಾಮೆಯಿತ್ತು ಸ್ವಾತಂತ್ರ‍್ಯ ಚಳವಳಿಗೆ ಧುಮುಕಿದರು. ಬದುಕಿಗೆ ಆಶ್ರಯವಾಗಿದ್ದ ಉದ್ಯೋಗಕ್ಕೆ ನಮಸ್ಕಾರ ಹೇಳಿದ ಬಳಿಕ ವೈಯಕ್ತಿಕ ಜೀವನ ಕಷ್ಟಕ್ಕೀಡಾದರೂ ದೇಶಹಿತದೆದುರು ಎಲ್ಲವೂ ತೃಣಸಮಾನವಾಯಿತು. ಮನಸ್ಸು ಮಾಡಿದ್ದರೆ ಇಂಗ್ಲೆಂಡ್ ಅಥವಾ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಅವಕಾಶಗಳಿದ್ದರೂ ಅವೆಲ್ಲವನ್ನೂ ಕಾಲಿನಿಂದೊದ್ದು ಕಾಂಗ್ರೆಸ್‌ನ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಧುಮುಕಿದರು. ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾದ ಗೋಪಾಲಕೃಷ್ಣಯ್ಯರು, ಸ್ವದೇಶೀ-ಸತ್ಯಾಗ್ರಹ-ಅಸಹಕಾರ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿದರು. ಗಾಂಧೀಜಿಯವರ ಪ್ರತಿಯೊಂದು ಮಾತನ್ನೂ ಅಕ್ಷರಶಃ ಪಾಲಿಸಿ ಸ್ವಾತಂತ್ರ‍್ಯ ಚಳವಳಿಗೆ ಯೋಗದಾನವಿತ್ತರಲ್ಲದೆ, ಆನಿ ಬೆಸೆಂಟರ ಹೋಮ್ ರೂಲ್ ಲೀಗಿನ ಕಾರ್ಯದರ್ಶಿಯಾಗಿ ಆಂಧ್ರಪ್ರದೇಶದಲ್ಲಿ ಇತಿಹಾಸ ನಿರ್ಮಿಸಿ, ಧಾರ್ಮಿಕತೆಯ ತಳಹದಿಯ ಮೇಲೆ ಸದೃಢ ರಾಷ್ಟçನಿರ್ಮಾಣ ಸಾಧ್ಯವೆಂದು ಅರಿತರು. ಶ್ರೀರಾಮನ ಅನನ್ಯ ಭಕ್ತರಾಗಿದ್ದ ದುಗ್ಗಿರಲ, ರಾಮಸೇವಕರ ತಂಡ ನಿರ್ಮಿಸಿ
ಭಾರತ ಕೇಸರಿ ಸೈನ್ಯ'ವೆಂಬ ಹೊಗಳಿಕೆಗೆ ಪಾತ್ರವಾದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿದರು. ವಿಜಯವಾಡ ಕಾಂಗ್ರೆಸ್ ಅಧಿವೇಶನದಲ್ಲಿ ಕೇಸರಿ ವಸ್ತç - ರುದ್ರಾಕ್ಷಿಮಾಲೆ ಧರಿಸಿದ ನೂರಾರು ಕಾರ್ಯಕರ್ತರ ಬಲದಿಂದ ರಾಷ್ಟ್ರೀಯ ನಾಯಕರ ಕಣ್ಣಿಗೂ ಬಿದ್ದರು. ರಾಮನ ಸೇವೆಗೆ ಕಪಿಗಳು ಬಂದಂತೆ, ದೇಶದ ಬಂಧಮುಕ್ತಿಗೆ ನಾವು ಬಂದಿದ್ದೇವೆಂದು ಘೋಷಿಸಿದ ಸೇನೆ ಹೊಸ ಶಕೆ ನಿರ್ಮಿಸಲು ಸಿದ್ಧವಾಯಿತು. ದೇಶದಾದ್ಯಂತ ಪ್ರಸಿದ್ಧಿ ಪಡೆದ ಕರ ನಿರಾಕರಣೆಯ ಆಂದೋಲನಕ್ಕೆ ಆಂಧ್ರದಲ್ಲಿ ಬೀಜಬಿತ್ತಿ ಒಂದೇ ದಿನದೊಳಗೆ ಹದಿಮೂರು ಸಾವಿರ ಜನರನ್ನು ಒಗ್ಗೂಡಿಸಿ ಹನ್ನೊಂದು ತಿಂಗಳ ಕಾಲ ಅಹಿಂಸಾತ್ಮಕ ಹೋರಾಟ ನಡೆಸಿ ಗೆದ್ದು ಜೈಲು ಶಿಕ್ಷೆಗೂ ಗುರಿಯಾದರು. ಆದರೆ ಕಾಂಗ್ರೆಸ್‌ನ ಆಘಾತಕಾರಿ ನಿಲುವುಗಳು ದುಗ್ಗಿಲರ ಮನಸ್ಸಿಗೆ ನೋವಿತ್ತಿತು. ವಿಪರೀತ ತುಷ್ಟೀಕರಣ, ಕ್ರಾಂತಿಕಾರಿ ನೀತಿಯ ವಿರೋಧದ ಕಾರಣಕ್ಕಾಗಿ ಕಾಂಗ್ರೆಸ್‌ನ್ನೇ ವಿರೋಧಿಸಿ ಚಿತ್ತರಂಜನದಾಸರ ಸ್ವರಾಜ್ಯ ಪಕ್ಷ ಸೇರಿ ರಚನಾತ್ಮಕ ಕಾರ್ಯಗಳಲ್ಲಿ ಜೊತೆಯಾದ ರಾಮದಾಸ ದುಗ್ಗಿರಲರು ಸಂಸ್ಕೃತ, ಹಿಂದಿ, ತೆಲುಗು, ಇಂಗ್ಲಿಷ್‌ನಲ್ಲಿ ಅಪಾರ ಹಿಡಿತ ಸಾಧಿಸಿದ್ದ ಪ್ರತಿಭಾಶಾಲಿ ಲೇಖಕರೂ ಹೌದು. ರಾಷ್ಟ್ರೀಯ ಹೋರಾಟದ ದೃಷ್ಟಿಕೋನದ ನೂರಾರು ಲೇಖನಗಳನ್ನು ಬರೆದು ತನ್ಮೂಲಕ ಯುವಜನತೆಯಲ್ಲಿ ರಾಷ್ಟ್ರಪ್ರೇಮದ ಭಾವವನ್ನು ಬಿತ್ತಿದರು.
ಸಾಹಿತ್ಯಸೇವೆಗಾಗಿಯೇ ಆಂಧ್ರ ವಿದ್ಯಾಪೀಠ ಗೋಷ್ಠಿ' ಸ್ಥಾಪಿಸಿದರಲ್ಲದೆ ನಂದಿಕೇಶ್ವರರ ಅಭಿನಯದರ್ಪಣವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದರು. ಪ್ರಭು ರಾಮನ ಆದರ್ಶಗಳನ್ನು ವಿದ್ಯಾರ್ಥಿಗಳು ಅರಿತು ಅಳವಡಿಸಬೇಕೆಂಬ ಹಿನ್ನೆಲೆಯಲ್ಲಿ
ರಾಮಭಕ್ತ ವಿದ್ಯಾರ್ಥಿ ಸಭಾ' ಪ್ರಾರಂಭಿಸಿದ ದುಗ್ಗಿರಲ, ಹಿಂದೂ ಚಿಂತನೆಗಳ ಆಧಾರದಲ್ಲಿ ರಾಷ್ಟ್ರೀಯತೆಯ ಬೆಳವಣಿಗೆಗೆ ನೀಲನಕಾಶೆ ರೂಪಿಸಿದರು. ಹಿಂದೂಸಮಾಜದ ಎಲ್ಲಾ ಜಾತಿಗಳೂ ಒಂದಾಗಿ ರಾಮಪೂಜೆಯಲ್ಲಿ ಭಾಗಿಯಾಗಬೇಕೆಂದು ಕರೆಕೊಟ್ಟು ರಾಮಮಂದಿರ ನಿರ್ಮಾಣಕ್ಕೆ ಕರೆಯಿತ್ತರು. ಉತ್ತರ ಭಾರತದಲ್ಲಿ ನಡೆದ ಆಕ್ರಮಣಗಳ ಕಾರಣಗಳಿಂದಾಗಿಯೇ ಅಲ್ಲಿ ಕ್ಷಾತ್ರವೃತ್ತಿ ಜಾಗೃತವಾಗಿದೆಯೆಂದು ಮನಗಂಡು ದಕ್ಷಿಣದ ಸ್ಥಿತಿ ಹಾಗಾಗದಿರಲು ಏಕತೆಯ ಸೂತ್ರ ಘೋಷಿಸಿದರು. ಬಾಲಕರಿಗೆ ರಾಮಾಯಣದ ನೀತಿಸೂತ್ರಗಳು ಸುಲಭವಾಗಿ ಲಭ್ಯವಾಗಬೇಕೆಂದು ಪುಸ್ತಕ ರಚನೆಯಲ್ಲೂ ತೊಡಗಿಸಿ ಭಾರತೀಯತೆಯ ವಿಕಾಸಕ್ಕೆ ನಾಂದಿ ಹಾಡಿದರು. ದುರ್ದೈವವಶಾತ್ ತಾರುಣ್ಯಾವಸ್ಥೆಯಲ್ಲೇ ಅನಾರೋಗ್ಯಕ್ಕೀಡಾಗಿ ಬಡತನದಲ್ಲೇ ಅಂತಿಮ ಜೀವನ ನಡೆಸಿದ ಗೋಪಾಲಕೃಷ್ಣಯ್ಯ, ರಾಮನಾಮ ಜಪಿಸುತ್ತಲೇ ತಮ್ಮ ನಲ್ವತ್ತರ ಹರೆಯದಲ್ಲಿ ರಾಮಪಾದ ಸೇರಿದರು.
ಧರ್ಮಪ್ರಧಾನ ರಾಜಕಾರಣವನ್ನು ಪ್ರತಿಪಾದಿಸಿದ ಮೇರುವ್ಯಕ್ತಿ ದುಗ್ಗಿರಲರು, ಶ್ರೀರಾಮನನ್ನು ರಾಷ್ಟçಪುರುಷನೆಂದು ಪರಿಗಣಿಸಿ ರಾಮರಾಜ್ಯದ ಸಂಕಲ್ಪಗೈದ ಪ್ರಥಮ ರಾಜಕಾರಣಿ. ಅಯೋಧ್ಯಾ ಪ್ರಾಣಪ್ರತಿಷ್ಠೆಯ ಶುಭಾವಸರದ ದಿನದಂದೇ ಗೋಪಾಲಕೃಷ್ಣಯ್ಯರು ಸ್ಥಾಪಿಸಿದ ರಾಮದಂಡಿಗೆ ನೂರಹತ್ತು ವರ್ಷಗಳು ತುಂಬಿದೆ. ರಾಜಕಾರಣವು ಧರ್ಮದ ಚೌಕಟ್ಟಿನಲ್ಲಿದ್ದಾಗ ಅದು ರಾಷ್ಟ್ರನಿರ್ಮಾಣಕ್ಕೆ ಪೂರಕವೆಂಬ ನೀತಿಬೋಧಕ ಮಹಾತ್ಮನ ಆಶಯವು ಸರ್ವಶಾಸಕರಿಗೂ ಪ್ರೇರಣೆಯಾಗಿ ರಾಮರಾಜ್ಯಕ್ಕೆ ಮುನ್ನುಡಿ ಬರೆಯಲಿ.