ಏಕಾದಶಿ ‘ಉಪ-ವಾಸ’ದ ಅನಂತ ಫಲಗಳು
ಒಂದು ಪಕ್ಷದ (ಶುಕ್ಲ-ಕೃಷ್ಣ) ಈ ಮೂರು ದಿನಗಳಿಗೆ (ದಶಮಿ, ಏಕಾದಶಿ, ದ್ವಾದಶಿ) ‘ದಿನತ್ರಯಗಳು’ ಎಂದು ಕರೆಯುತ್ತಾರೆ. ಅದರಲ್ಲೂ ಏಕಾದಶಿ ಎಂದರೆ ಹರಿಯ ದಿನ. ಇದನ್ನು ಪೂರ್ಣಿಮಾ (ಹುಣ್ಣಿಮೆಯ ದಿನ) ಅಥವಾ ಅಮಾವಾಸ್ಯೆಯಿಂದ ಚಂದ್ರನ ಚಕ್ರದ ಹನ್ನೊಂದನೆಯ ದಿನದಂದು ಆಚರಿಸಲಾಗುತ್ತದೆ. ಇದು ಅತ್ಯಂತ ಮಂಗಳಕರ ದಿನ. ವಸಿಷ್ಠ ಪುರಾಣದಲ್ಲಿ ನಾರದರು, ‘ಗಂಗಾ, ಗಯಾ, ಕಾಶಿ, ಪುಷ್ಕರ, ಕುರುಕ್ಷೇತ್ರ, ರೇಖಾ, ವೇದಿಕಾ, ಯಮುನಾ, ಚಂದ್ರಭಾಗಾ ನದಿಗಳಲ್ಲಿ ಸ್ನಾನ ಮಾಡಿದರೂ ಸಿಗುವಂತಹ ಫಲ ಹರಿದಿನದ ಏಕಾದಶಿಗೆ ಸಮವಲ್ಲ’ ಎಂದು ಹೇಳಿದ್ದಾರೆ. ಅಂದರೆ ಹರಿದಿನವಾದ ಏಕಾದಶಿಯಂದು ಕೈಗೊಳ್ಳುವ ಉಪವಾಸದ ಮಹತ್ವವನ್ನು ತಿಳಿದುಕೊಳ್ಳಬೇಕು. ಏಕಾದಶಿ ತಿಥಿ ಎಂದು ಗೊತ್ತಿಲ್ಲದೆ ಇದ್ದರೂ ಅಂದು ಯಾರಾದರೂ ಉಪವಾಸ ಮಾಡಿದರೆ ಅವರ ಪಾಪಗಳು ಸುಟ್ಟು ಬೂದಿಯಾಗುತ್ತವೆ ಎಂದರೆ ಇನ್ನು ಏಕಾದಶಿಯನ್ನು ಅರಿತು ಉಪವಾಸ ಮಾಡಿದರೆ ಸಿಗುವ ಫಲ ಅನಂತ.
‘ಉಪವಾಸ’ ಎಂದರೆ ಭಗವಂತನ ಪರಮ ವ್ಯಕ್ತಿತ್ವಕ್ಕೆ ಹತ್ತಿರವಾಗುವುದು. ಇದರಲ್ಲಿ ‘ಉಪ’ ಮತ್ತು ‘ವಾಸ’ ಎಂಬ ಎರಡು ಪದಗಳಿವೆ. ನಿತ್ಯದ ವಾಸಕ್ಕಿಂತ ‘ಉಪ-ವಾಸ’ ದೇವರಿಗಾಗಿ ಮೀಸಲಿಟ್ಟ ಒಂದು ದಿನ ಎಂದು ಇದರ ಅರ್ಥ. ೩೬ ಗಂಟೆಗಳ ಕಾಲ ನೀರು ಸಹಿತ ಎಲ್ಲ ಆಹಾರಗಳನ್ನು ತ್ಯಜಿಸಿ ದೇವರ ಧ್ಯಾನದಲ್ಲಿ ನಿರತನಾದರೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ರಹದಾರಿ ಎಂದು ಗೋಪಿಕಾಸ್ತ್ರೀಯರಲ್ಲಿ ಶ್ರೇಷ್ಠಳಾದ ರಾಧೆ ತಿಳಿಸಿಕೊಡುತ್ತಾಳೆ. ‘ಶ್ರೀಕೃಷ್ಣನನ್ನು ಹೇಗೆ ಮೆಚ್ಚಿಸಬೇಕು’ ಎಂದು ಗೋಪಿಕೆಯರು ಕೇಳಿದಾಗ, ರಾಧೆಯು ಅವರಿಗೆ ಏಕಾದಶಿ ಉಪವಾಸ ವ್ರತವನ್ನು ಆಚರಿಸಲು ಸೂಚಿಸುತ್ತಾಳೆ. ಏಕಾದಶಿ ವ್ರತಕ್ಕೆ ಅಷ್ಟು ಮಹತ್ವವಿದೆ. ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ‘ಅಶ್ವಮೇಧ ಯಜ್ಞ’ ಮಾಡಿದ ಪ್ರಯೋಜನವನ್ನು ಪಡೆಯುತ್ತಾರೆ ಎಂಬ ಉಲ್ಲೇಖ ಗರ್ಗಸಂಹಿತೆಯಲ್ಲಿದೆ. ಏಕಾದಶಿಯಂದು ಇಂದ್ರಿಯಗಳನ್ನು ಕೇವಲ ಶ್ರವಣದಲ್ಲಿ ತೊಡಗಿಸಿಕೊಳ್ಳುವುದರಿಂದ, ಶ್ರೀಹರಿಯ ಮಹಿಮೆಗಳನ್ನು ಪಠಿಸುವುದರಿಂದ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ.
ಇನ್ನು ಏಕಾದಶಿಯ ನಿಜವಾದ ಅರ್ಥವೆಂದರೆ, ನಮ್ಮ ಸೂಕ್ಷ್ಮದೇಹದ ಬೇಡಿಕೆಗಳನ್ನು ಕಡಿಮೆ ಮಾಡುವುದು. ಅಂದರೆ ಏಕಾದಶಿಯಂದು ಅಕ್ಕಿ, ಗೋದಿ, ರಾಗಿ, ಬೇಳೆಕಾಳುಗಳು ತರಕಾರಿ ಸಹಿತ ತಿನ್ನಬಹುದಾದ ಎಲ್ಲ ಧಾನ್ಯಗಳು ವರ್ಜ್ಯ. ಇದರಿಂದ ನಮ್ಮ ಚಯಾಪಚಯ ಕ್ರಿಯೆಗಳಿಗೆ, ನಮ್ಮ ಅಂಗಾಂಗಗಳಿಗೆ ಕೊಂಚ ವಿಶ್ರಾಂತಿ ದೊರೆಯುವುದು. ಯಂತ್ರೋಪಕರಣಗಳಿಗೆ ಕೆಲಸದ ನಂತರ ಹೇಗೆ ವಿಶ್ರಾಂತಿ ಬೇಕೋ ಹಾಗೆಯೇ ನಮ್ಮ ದೇಹದ ಅಂಗಾಂಗಗಳಿಗೂ ದೀರ್ಘಾವಧಿಯವರೆಗೆ ಕೆಲಸ ಮಾಡಿದ ನಂತರ ವಿಶ್ರಾಂತಿ ಬೇಕು. ಹದಿನೈದು ದಿನಗಳಿಗೊಮ್ಮೆ ನಮ್ಮ ಚಯಾಪಚಯ ಕ್ರಿಯೆಗಳಿಗೆ ವಿಶ್ರಾಂತಿ ನೀಡಿದರೆ ನಮ್ಮ ದೇಹದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಉಪವಾಸವು ನಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಹಾಗೂ ದೇಹದಲ್ಲಿರುವ ಕೊಬ್ಬನ್ನು ನಿವಾರಿಸುತ್ತದೆ. ಉಪವಾಸದಿಂದ ಇನ್ನೂ ಹಲವಾರು ಪ್ರಯೋಜನಗಳಿವೆ, ಅದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ದೇಹವು ಹೆಚ್ಚು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಆಯುರ್ವೇದ ತಿಳಿಸಿಕೊಡುತ್ತದೆ.
ದಶಮಿಯ ರಾತ್ರಿ ಫಲಾಹಾರ, ಏಕಾದಶಿಯಂದು ಸಂಪೂರ್ಣ ನಿರಾಹಾರ (ನೀರನ್ನೂ ಸೇವಿಸಬಾರದು), ದ್ವಾದಶಿಯಂದು ಸೂರ್ಯೋದಯದ ನಂತರ ಪಾರಣೆ ಮಾಡುವುದು ದಿನತ್ರಯಗಳ ಪದ್ಧತಿ. ಏಕಾದಶಿ ಉಪವಾಸ ಮಾಡುವುದು ಎಷ್ಟು ಮುಖ್ಯವೋ ದ್ವಾದಶಿಯಂದು ಸೂರ್ಯೋದಯದ ನಂತರ ಪಾರಣೆ ಮಾಡುವುದೂ ಅಷ್ಟೇ ಮುಖ್ಯ. ದ್ವಾದಶಿಯಂದು ಸರಿಯಾದ ಸಮಯಕ್ಕೆ ಪಾರಣೆ ಮಾಡುವುದರಿಂದ ಏಕಾದಶಿ ಆಚರಣೆಯ ಸಂಪೂರ್ಣ ಫಲ ಪ್ರಾಪ್ತವಾಗುತ್ತದೆ. ದೇಹ-ಮನಸ್ಸುಗಳ ಆರೋಗ್ಯವನ್ನು ಕಾಪಾಡುವ, ದೇವರಿಗೆ ಪ್ರೀತಿಪಾತ್ರವಾದ, ಹರಿದಿನವಾದ ಏಕಾದಶಿಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಂಡು ದಿನತ್ರಯಗಳ ಪದ್ಧತಿಯನ್ನು ಪಾಲಿಸಿ ಕೃತಾರ್ಥರಾಗಬೇಕು.