For the best experience, open
https://m.samyuktakarnataka.in
on your mobile browser.

ಏಕ್ ಭಾರತ್ ಶ್ರೇಷ್ಠ ಭಾರತ್ ಸಂಕಲ್ಪಕ್ಕೆ ಬೆಂಬಲ

11:13 AM Dec 12, 2023 IST | Samyukta Karnataka
ಏಕ್ ಭಾರತ್ ಶ್ರೇಷ್ಠ ಭಾರತ್ ಸಂಕಲ್ಪಕ್ಕೆ ಬೆಂಬಲ

ಕಳೆದ ಹಲವು ದಶಕಗಳಲ್ಲಿ ಸಮಸ್ಯೆಯನ್ನು ಹತ್ತಿರದಿಂದ ನೋಡಿದ ಒಬ್ಬ ಕಾರ್ಯಕರ್ತನಾಗಿ, ನಾನು ಸಮಸ್ಯೆಯ ನಿರ್ದಿಷ್ಟತೆಗಳು ಮತ್ತು ಸಂಕೀರ್ಣತೆಗಳ ಸೂಕ್ಷ್ಮವಾದ ತಿಳಿವಳಿಕೆಯನ್ನು ಹೊಂದಿದ್ದೆ. ಆದರೂ, ನನಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಅದೆಂದರೆ, ಜಮ್ಮು ಮತ್ತು ಕಾಶ್ಮೀರದ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ ಮತ್ತು ಅವರು ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳ ಆಧಾರದ ಮೇಲೆ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಬಯಸುತ್ತಾರೆ, ಅವರು ತಮ್ಮ ಮಕ್ಕಳ ಉತ್ತಮ ಗುಣಮಟ್ಟದ ಜೀವನವನ್ನು, ಹಿಂಸೆ ಮತ್ತು ಅನಿಶ್ಚಿತತೆಯಿಂದ ಮುಕ್ತವಾದ ಜೀವನವನ್ನು ಬಯಸುತ್ತಾರೆ ಎಂಬುದು.

ನರೇಂದ್ರ ಮೋದಿ, ಪ್ರಧಾನಮಂತ್ರಿ
ಡಿಸೆಂಬರ್ ೧೧ ರಂದು, ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ೩೭೦ ಮತ್ತು ೩೫ (ಎ) ವಿಧಿಗಳ ರದ್ದತಿಯ ಬಗ್ಗೆ ಐತಿಹಾಸಿಕ ತೀರ್ಪು ನೀಡಿತು. ತನ್ನ ತೀರ್ಪಿನ ಮೂಲಕ, ನ್ಯಾಯಾಲಯವು ಪ್ರತಿಯೊಬ್ಬ ಭಾರತೀಯನು ಗೌರವಿಸುವ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿದಿದೆ. ೨೦೧೯ ರ ಆಗಸ್ಟ್ ೫ ರಂದು ತೆಗೆದುಕೊಂಡ ನಿರ್ಧಾರವನ್ನು ಸಾಂವಿಧಾನಿಕ ಏತತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಾಡಲಾಗಿದೆಯೇ ಹೊರತು ವಿಘಟನೆಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸರಿಯಾಗಿ ಗಮನಿಸಿದೆ. ೩೭೦ನೇ ವಿಧಿ ಶಾಶ್ವತವಲ್ಲ ಎಂಬ ಅಂಶವನ್ನೂ ನ್ಯಾಯಾಲಯವೂ ಗುರುತಿಸಿದೆ.
ಜಮ್ಮು, ಕಾಶ್ಮೀರ ಮತ್ತು ಲಡಾಖ್ ನ ಅದ್ಭುತವಾದ ಭೂದೃಶ್ಯಗಳು, ಪ್ರಶಾಂತ ಕಣಿವೆಗಳು ಮತ್ತು ಭವ್ಯವಾದ ಪರ್ವತಗಳು ತಲೆಮಾರುಗಳಿಂದ ಕವಿಗಳು, ಕಲಾವಿದರು ಮತ್ತು ಸಾಹಸಿಗಳ ಮನಸೂರೆಗೊಂಡಿವೆ. ಇದು ಭವ್ಯತೆಯು ಅಸಾಧಾರಣವಾದುದನ್ನು ಸಂಧಿಸುವ ಸ್ಥಳವಾಗಿದೆ, ಇಲ್ಲಿ ಹಿಮಾಲಯವು ಆಕಾಶದೆತ್ತರಕ್ಕೆ ನಿಂತಿದೆ ಮತ್ತು ಸರೋವರಗಳು ಮತ್ತು ನದಿಗಳ ಶುದ್ಧ ನೀರು ಸ್ವರ್ಗವನ್ನು ಪ್ರತಿಬಿಂಬಿಸುತ್ತವೆ. ಆದರೆ, ಕಳೆದ ಏಳು ದಶಕಗಳಿಂದ, ಈ ಸ್ಥಳಗಳು ಹಿಂಸಾಚಾರ ಮತ್ತು ಅಸ್ಥಿರತೆಗೆ ಸಾಕ್ಷಿಯಾಗಿದ್ದವು, ಇದು ಇಲ್ಲಿನ ಅದ್ಭುತವಾದ ಜನರಿಗೆ ಎಂದಿಗೂ ಅರ್ಹವಾದುದಾಗಿರಲಿಲ್ಲ.
ದುರದೃಷ್ಟವಶಾತ್, ಶತಮಾನಗಳ ವಸಾಹತುಶಾಹಿಯಿಂದಾಗಿ, ಮುಖ್ಯವಾಗಿ ಆರ್ಥಿಕ ಮತ್ತು ಮಾನಸಿಕ ಅಧೀನತೆಯಿಂದಾಗಿ, ನಮ್ಮದು ಒಂದು ರೀತಿಯ ಗೊಂದಲಮಯ ಸಮಾಜವಾಗಿದೆ. ಮೂಲಭೂತ ವಿಷಯಗಳ ಬಗ್ಗೆ ಸ್ಪಷ್ಟತೆಯ ಬದಲು, ನಾವು ದ್ವಂದ್ವಕ್ಕೀಡಾಗುತ್ತೇವೆ. ವಿಷಾದದ ವಿಷಯವೆಂದರೆ, ಜಮ್ಮು ಮತ್ತು ಕಾಶ್ಮೀರ ಇಂತಹ ಮನಸ್ಥಿತಿಯ ದೊಡ್ಡ ಬಲಿಪಶುವಾಯಿತು. ಸ್ವಾತಂತ್ರ್ಯದ ಸಮಯದಲ್ಲಿ, ನಾವು ರಾಷ್ಟ್ರೀಯ ಐಕ್ಯತೆಯ ಹೊಸ ಆರಂಭದ ಆಯ್ಕೆಯನ್ನು ಹೊಂದಿದ್ದೆವು. ಆದರೆ, ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಗೊಂದಲಮಯ ಸಮಾಜದ ವಿಧಾನವನ್ನು ಮುಂದುವರಿಸಲು ನಾವು ನಿರ್ಧರಿಸಿದೆವು.
ನನ್ನ ಜೀವನದ ಆರಂಭದಿಂದಲೂ ಜಮ್ಮು ಮತ್ತು ಕಾಶ್ಮೀರ ಆಂದೋಲನದೊಂದಿಗೆ ಸಂಪರ್ಕ ಹೊಂದುವ ಅವಕಾಶವನ್ನು ನಾನು ಪಡೆದಿದ್ದೇನೆ. ನಾನು ಜಮ್ಮು ಮತ್ತು ಕಾಶ್ಮೀರವು ಕೇವಲ ರಾಜಕೀಯ ವಿಷಯವಲ್ಲ ಎಂಬ ಸೈದ್ಧಾಂತಿಕ ಚೌಕಟ್ಟಿಗೆ ಸೇರಿದವನು. ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ನೆಹರೂ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ಹೊಂದಿದ್ದರು ಮತ್ತು ಅವರು ದೀರ್ಘಕಾಲ ಸರ್ಕಾರದಲ್ಲಿ ಉಳಿಯಬಹುದಿತ್ತು. ಆದರೂ, ಅವರು ಕಾಶ್ಮೀರ ಸಮಸ್ಯೆಯ ಕಾರಣದಿಂದಾಗಿ ಸಂಪುಟ ತೊರೆದರು ಮತ್ತು ಮುಂದೆ ತಮ್ಮ ಜೀವನವನ್ನು ಪಣಕ್ಕಿಟ್ಟು ಕಠಿಣ ಹಾದಿ ಹಿಡಿದರು. ಅವರ ಪ್ರಯತ್ನಗಳು ಮತ್ತು ತ್ಯಾಗದಿಂದಾಗಿ ಕೋಟ್ಯಂತರ ಭಾರತೀಯರು ಕಾಶ್ಮೀರ ಸಮಸ್ಯೆಯೊಂದಿಗೆ ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದಾರೆ. ವರ್ಷಗಳ ನಂತರ, ಶ್ರೀನಗರದ ಸಾರ್ವಜನಿಕ ಸಭೆಯೊಂದರಲ್ಲಿ ಅಟಲ್ ಜಿ ಅವರು 'ಇನ್ಸಾನಿಯಾತ್', 'ಜಮ್ಹೂರಿಯಾತ್' ಮತ್ತು 'ಕಾಶ್ಮೀರಿಯಾತ್' ಎಂಬ ಪ್ರಬಲ ಸಂದೇಶವನ್ನು ನೀಡಿದರು, ಇದು ಯಾವಾಗಲೂ ಸ್ಫೂರ್ತಿಯ ಮೂಲವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವುದು ನಮ್ಮ ದೇಶಕ್ಕೆ ಮತ್ತು ಅಲ್ಲಿ ವಾಸಿಸುವ ಜನರಿಗೆ ಮಾಡಿದ ದೊಡ್ಡ ದ್ರೋಹ ಎಂಬುದು ನನ್ನ ದೃಢವಾದ ನಂಬಿಕೆಯಾಗಿತ್ತು. ಈ ಕಳಂಕವನ್ನು, ಜನರಿಗೆ ಮಾಡಿದ ಅನ್ಯಾಯವನ್ನು ತೊಡೆದುಹಾಕಲು ನಾನು ಏನನ್ನಾದರೂ ಮಾಡಬೇಕೆಂಬುದು ನನ್ನ ಬಲವಾದ ಬಯಕೆಯಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಜನರ ನೋವನ್ನು ನಿವಾರಿಸಲು ನಾನು ಸದಾಕಾಲ ಕೆಲಸ ಮಾಡಲು ಬಯಸುತ್ತೇನೆ.
ಮೂಲಭೂತವಾಗಿ ಹೇಳುವುದಾದರೆ- ೩೭೦ ಮತ್ತು ೩೫ (ಎ) ವಿಧಿಗಳು ಪ್ರಮುಖ ಅಡೆತಡೆಗಳಾಗಿದ್ದವು. ಅದು ಒಡೆಯಲಾಗದ ಗೋಡೆಯಂತೆ ಕಾಣುತ್ತಿತ್ತು ಮತ್ತು ಇದರಿಂದ ಬಡವರು ಮತ್ತು ದೀನದಲಿತರು ಬಳಲುತ್ತಿದ್ದರು. ೩೭೦ ಮತ್ತು ೩೫(ಎ) ವಿಧಿಗಳು ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಇತರ ಸಹ ಭಾರತೀಯರು ಪಡೆದ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ಎಂದಿಗೂ ಪಡೆಯದಂತೆ ಮಾಡಿದ್ದವು. ಈ ವಿಧಿಗಳಿಂದಾಗಿ, ಒಂದೇ ರಾಷ್ಟçಕ್ಕೆ ಸೇರಿದ ಜನರ ನಡುವೆ ಅಂತರವನ್ನು ಸೃಷ್ಟಿಸಲಾಯಿತು. ಈ ಅಂತರದಿಂದಾಗಿ, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲು ಬಯಸಿದ ನಮ್ಮ ರಾಷ್ಟ್ರದ ಅನೇಕರು ಅಲ್ಲಿನ ಜನರ ನೋವನ್ನು ಸ್ಪಷ್ಟವಾಗಿ ಅನುಭವಿಸಿದರೂ ಅದನ್ನು ಮಾಡಲು ಸಾಧ್ಯವಾಗಲಿಲ್ಲ.
ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸೇವೆ ಸಲ್ಲಿಸುವಾಗ, ನಾವು ಮೂರು ಆಧಾರ ಸ್ತಂಭಗಳಿಗೆ ಆದ್ಯತೆ ನೀಡಿದ್ದೇವೆ- ನಾಗರಿಕರ ಕಾಳಜಿಯನ್ನು ಅರ್ಥಮಾಡಿಕೊಳ್ಳುವುದು, ಬೆಂಬಲ ಕ್ರಮಗಳ ಮೂಲಕ ವಿಶ್ವಾಸವನ್ನು ಬೆಳೆಸುವುದು ಮತ್ತು ಅಭಿವೃದ್ಧಿ, ಅಭಿವೃದ್ಧಿ ಮತ್ತು ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡುವುದು.
೨೦೧೪ ರಲ್ಲಿ, ನಾವು ಅಧಿಕಾರ ವಹಿಸಿಕೊಂಡ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿನಾಶಕಾರಿ ಪ್ರವಾಹಗಳು ಸಂಭವಿಸಿದವು, ಕಾಶ್ಮೀರ ಕಣಿವೆಯಲ್ಲಿ ಸಾಕಷ್ಟು ಹಾನಿಯಾಯಿತು. ಸೆಪ್ಟೆಂಬರ್ ೨೦೧೪ ರಲ್ಲಿ, ನಾನು ಪರಿಸ್ಥಿತಿಯನ್ನು ತಿಳಿಯಲು ಶ್ರೀನಗರಕ್ಕೆ ಹೋಗಿದ್ದೆ ಮತ್ತು ಪುನರ್ವಸತಿಗಾಗಿ ವಿಶೇಷ ಸಹಾಯವಾಗಿ ೧೦೦೦ ಕೋಟಿ ರೂಪಾಯಿಗಳನ್ನು ಘೋಷಿಸಿದೆ, ಬಿಕ್ಕಟ್ಟಿನ ಸಂದರ್ಭದಲ್ಲಿ ಜನರನ್ನು ಬೆಂಬಲಿಸಲು ನಮ್ಮ ಸರ್ಕಾರದ ಬದ್ಧತೆಯನ್ನು ತಿಳಿಸಿದೆ. ನಾನು ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿ ಮಾಡುವ ಅವಕಾಶವನ್ನು ಪಡೆದಿದ್ದೇನೆ ಮತ್ತು ಈ ಸಂವಾದಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ- ಜನರು ಅಭಿವೃದ್ಧಿಯನ್ನು ಬಯಸುವುದು ಮಾತ್ರವಲ್ಲ, ಅವರು ದಶಕಗಳಿಂದ ಚಾಲ್ತಿಯಲ್ಲಿರುವ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಮುಕ್ತಿಯನ್ನೂ ಬಯಸುತ್ತಾರೆ. ಅದೇ ವರ್ಷ, ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಕಳೆದುಕೊಂಡವರ ಸ್ಮರಣಾರ್ಥವಾಗಿ ನಾನು ದೀಪಾವಳಿಯನ್ನು ಆಚರಿಸದಿರಲು ನಿರ್ಧರಿಸಿದೆ. ನಾನು ದೀಪಾವಳಿಯ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿರಲು ಸಹ ನಿರ್ಧರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಪಯಣವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ನಮ್ಮ ಸರ್ಕಾರದ ಸಚಿವರು ಆಗಾಗ ಅಲ್ಲಿಗೆ ಹೋಗಿ ಜನರೊಂದಿಗೆ ನೇರವಾಗಿ ಸಂವಾದ ನಡೆಸಬೇಕೆಂದು ನಾವು ನಿರ್ಧರಿಸಿದೆವು. ಈ ಭೇಟಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸೌಹಾರ್ದತೆಯನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ. ಮೇ ೨೦೧೪ ರಿಂದ ಮಾರ್ಚ್ ೨೦೧೯ ರವರೆಗೆ ಸಚಿವರ ೧೫೦ ಕ್ಕೂ ಹೆಚ್ಚು ಭೇಟಿಗಳು ನಡೆದಿವೆ. ಇದೊಂದು ದಾಖಲೆಯಾಗಿದೆ. ೨೦೧೫ ರ ವಿಶೇಷ ಪ್ಯಾಕೇಜ್ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಅಗತ್ಯಗಳನ್ನು ಪರಿಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಉತ್ತೇಜನ ಮತ್ತು ಕರಕುಶಲ ಉದ್ಯಮಕ್ಕೆ ಬೆಂಬಲವಾಗಿದೆ.
ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡೆಯ ಶಕ್ತಿಯನ್ನು ಬಳಸಿಕೊಂಡಿದ್ದೇವೆ, ಯುವಜನರ ಕನಸುಗಳಿಗೆ ಕಿಚ್ಚು ಹೊತ್ತಿಸುವ ಸಾಮರ್ಥ್ಯವನ್ನು ಗುರುತಿಸಿದ್ದೇವೆ. ಕ್ರೀಡಾ ಉಪಕ್ರಮಗಳ ಮೂಲಕ, ಅವರ ಆಕಾಂಕ್ಷೆಗಳು ಮತ್ತು ಭವಿಷ್ಯದಲ್ಲಿ ಅಥ್ಲೆಟಿಕ್ ಹಾದಿ ಹಿಡಿಯುವ ಅವರ ರೂಪಾಂತರದ ಪರಿಣಾಮವನ್ನು ನಾವು ನೋಡಿದ್ದೇವೆ. ಕ್ರೀಡಾ ಸ್ಥಳಗಳನ್ನು ಮೇಲ್ದರ್ಜೆಗೇರಿಸಲಾಗಿದೆ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮತ್ತು ತರಬೇತುದಾರರು ಲಭ್ಯವಾಗುವಂತೆ ಮಾಡಲಾಗಿದೆ. ಅತ್ಯಂತ ವಿಶಿಷ್ಟವಾದ ವಿಷಯವೆಂದರೆ ಸ್ಥಳೀಯ ಫುಟ್ಬಾಲ್ ಕ್ಲಬ್ ಗಳ ಸ್ಥಾಪನೆಯನ್ನು ಪ್ರೋತ್ಸಾಹಿಸುವುದು. ಫಲಿತಾಂಶಗಳು ಅತ್ಯುತ್ತಮವಾಗಿದ್ದವು. ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಅಫ್ಶಾನ್ ಆಶಿಕ್ ಅವರ ಹೆಸರು ನನ್ನ ನೆನಪಿಗೆ ಬರುತ್ತದೆ- ಡಿಸೆಂಬರ್ ೨೦೧೪ ರಲ್ಲಿ ಅವರು ಶ್ರೀನಗರದಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದ ಗುಂಪಿನ ಭಾಗವಾಗಿದ್ದರು, ಆದರೆ ಸೂಕ್ತ ಪ್ರೋತ್ಸಾಹ ದೊರೆತ ಕಾರಣದಿಂದ ಆಕೆ ಫುಟ್ಬಾಲ್ ಕಡೆಗೆ ತಿರುಗಿದರು, ಅವರನ್ನು ತರಬೇತಿಗೆ ಕಳುಹಿಸಲಾಯಿತು ಮತ್ತು ಆಟದಲ್ಲಿ ಮಿಂಚಿದರು. ಫಿಟ್ ಇಂಡಿಯಾ ಡೈಲಾಗ್ ಒಂದರಲ್ಲಿ ನಾನು ಅವರೊಂದಿಗೆ ಸಂವಾದ ನಡೆಸಿದ್ದು ನೆನಪಿದೆ, ಅಲ್ಲಿ ನಾನು ಬೆಂಡ್ ಇಟ್ ಲೈಕ್ ಬೆಕ್ಹ್ಯಾಮ್'ಬಿಟ್ಟುಏಸ್ ಇಟ್ ಲೈಕ್ ಅಫ್ಶಾನ್'ಆಗುವ ಸಮಯ ಬಂದಿದೆ ಎಂದು ಹೇಳಿದೆ. ಇತರ ಯುವಕರು ಕಿಕ್ ಬಾಕ್ಸಿಂಗ್, ಕರಾಟೆ ಮತ್ತು ಇತರ ಕ್ರೀಡೆಗಳಲ್ಲಿ ಮಿಂಚಲು ಪ್ರಾರಂಭಿಸಿದರು.
ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಂಚಾಯತ್ ಚುನಾವಣೆಗಳು ಒಂದು ಅಭೂತಪೂರ್ವ ಕ್ಷಣವಾಗಿದೆ. ಮತ್ತೊಮ್ಮೆ, ನಾವು ಅಧಿಕಾರದಲ್ಲಿ ಉಳಿಯುವ ಅಥವಾ ನಮ್ಮ ತತ್ವಗಳ ಮೇಲೆ ನಿಲ್ಲುವ ಆಯ್ಕೆಯನ್ನು ಎದುರಿಸಿದೆವು- ಆಯ್ಕೆಯು ಎಂದಿಗೂ ಕಠಿಣವಾಗಿರಲಿಲ್ಲ ಮತ್ತು ನಾವು ಸರ್ಕಾರವನ್ನು ಬಿಡುತ್ತೇವೆ, ಆದರೆ ನಮ್ಮ ಆದರ್ಶಗಳನ್ನಲ್ಲ. ಜಮ್ಮು ಮತ್ತು ಕಾಶ್ಮೀರದ ಜನರ ಆಕಾಂಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಂಚಾಯತ್ ಚುನಾವಣೆಯ ಯಶಸ್ಸು ಜಮ್ಮು ಮತ್ತು ಕಾಶ್ಮೀರದ ಜನರ ಪ್ರಜಾಸತ್ತಾತ್ಮಕ ಗುಣವನ್ನು ಸೂಚಿಸುತ್ತದೆ. ಹಳ್ಳಿಗಳ ಪ್ರಧಾನರೊಂದಿಗೆ ನಡೆಸಿದ ಸಂವಾದವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇತರ ಸಮಸ್ಯೆಗಳ ಜೊತೆಗೆ, ನಾನು ಅವರಿಗೆ ಯಾವುದೇ ಹಂತದಲ್ಲೂ ಶಾಲೆಗಳನ್ನು ಸುಡಬಾರದು ಮತ್ತು ಅದಾಗದಂತೆ ಖಚಿತಪಡಿಸಿಕೊಳ್ಳಬೇಕು ಎಂದು ವಿನಂತಿಯನ್ನು ಮಾಡಿದೆ. ಅವರು ಇದಕ್ಕೆ ಬದ್ಧವಾಗಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಅಷ್ಟಕ್ಕೂ, ಶಾಲೆಗಳನ್ನು ಸುಟ್ಟರೆ ಹೆಚ್ಚು ನಷ್ಟಕ್ಕೊಳಗಾಗುವವರು ಪುಟ್ಟ ಮಕ್ಕಳು.
ಆಗಸ್ಟ್ ೫ರ ಐತಿಹಾಸಿಕ ದಿನವು ಪ್ರತಿಯೊಬ್ಬ ಭಾರತೀಯನ ಹೃದಯ ಮತ್ತು ಮನಸ್ಸಿನಲ್ಲಿ ಅಚ್ಚೊತ್ತಿದೆ. ನಮ್ಮ ಸಂಸತ್ತು ೩೭೦ ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಅಂಗೀಕರಿಸಿತು. ಅಂದಿನಿಂದ, ಜಮ್ಮು, ಕಾಶ್ಮೀರ ಮತ್ತು ಲಡಾಖ್ ನಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನ್ಯಾಯಾಲಯದ ತೀರ್ಪು ಡಿಸೆಂಬರ್ ೨೦೨೩ ರಲ್ಲಿ ಬಂದಿದೆ, ಆದರೆ ಜಮ್ಮು, ಕಾಶ್ಮೀರ ಮತ್ತು ಲಡಾಖ್ ನಾದ್ಯಂತ ಅಭಿವೃದ್ಧಿಯ ಅಲೆಯನ್ನು ಜನತಾ ನ್ಯಾಯಾಲಯವು ನಾಲ್ಕು ವರ್ಷಗಳಿಂದ ನೋಡಿದೆ. ೩೭೦ ಮತ್ತು ೩೫ (ಎ) ವಿಧಿಗಳನ್ನು ರದ್ದುಗೊಳಿಸುವ ಸಂಸತ್ತಿನ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.
ರಾಜಕೀಯವಾಗಿ, ಕಳೆದ ೪ ವರ್ಷಗಳು ತಳಮಟ್ಟದ ಪ್ರಜಾಪ್ರಭುತ್ವದಲ್ಲಿ ಹೊಸ ನಂಬಿಕೆಯೊಂದಿಗೆ ಗುರುತಿಸಲ್ಪಟ್ಟಿವೆ. ಮಹಿಳೆಯರು, ಆದಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಮಾಜದ ಕಟ್ಟಕಡೆಯ ವರ್ಗದವರಿಗೆ ಅವರ ಸವಲತ್ತುಗಳು ಸಿಗುತ್ತಿರಲಿಲ್ಲ. ಅದೇ ಸಮಯದಲ್ಲಿ, ಲಡಾಖ್ ನ ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಆಗಸ್ಟ್ ೫, ೨೦೧೯ ಎಲ್ಲವನ್ನೂ ಬದಲಾಯಿಸಿತು. ಎಲ್ಲಾ ಕೇಂದ್ರೀಯ ಕಾನೂನುಗಳು ಈಗ ಭಯ ಅಥವಾ ಪಕ್ಷಪಾತವಿಲ್ಲದೇ ಅನ್ವಯವಾಗುತ್ತಿವೆ. ಪ್ರಾತಿನಿಧ್ಯವು ಹೆಚ್ಚು ವ್ಯಾಪಕವಾಗಿದೆ- ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ, ಬಿಡಿಸಿ ಚುನಾವಣೆಗಳು ನಡೆದಿವೆ ಮತ್ತು ಎಲ್ಲವನ್ನು ಕಳೆದುಕೊಂಡ ನಿರಾಶ್ರಿತ ಸಮುದಾಯಗಳು ಅಭಿವೃದ್ಧಿಯ ಫಲವನ್ನು ಪಡೆಯಲು ಪ್ರಾರಂಭಿಸಿವೆ.
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಪರಿಪೂರ್ಣತೆಯ ಮಟ್ಟವನ್ನು ತಲುಪಿವೆ, ಹೀಗಾಗಿ ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಿವೆ. ಇವುಗಳಲ್ಲಿ ಸೌಭಾಗ್ಯ, ಉಜ್ವಲಾ ಮತ್ತು ಉಜಾಲ ಯೋಜನೆಗಳು ಸೇರಿವೆ. ವಸತಿ, ನಲ್ಲಿ ನೀರಿನ ಸಂಪರ್ಕ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ದಾಪುಗಾಲು ಹಾಕಲಾಗಿದೆ. ಜನರಿಗೆ ಪ್ರಮುಖ ಸವಾಲಾಗಿರುವ ಆರೋಗ್ಯ ರಕ್ಷಣೆಯ ಮೂಲಸೌಕರ್ಯವನ್ನು ಉನ್ನತೀಕರಿಸಲಾಗಿದೆ. ಎಲ್ಲಾ ಗ್ರಾಮಗಳು ಒಡಿಎಫ್ ಪ್ಲಸ್ ಸ್ಥಾನಮಾನಗಳನ್ನು ಸಾಧಿಸಿವೆ. ಭ್ರಷ್ಟಾಚಾರ ಮತ್ತು ಪಕ್ಷಪಾತದ ಕೂಪವಾಗಿದ್ದ ಸರ್ಕಾರಿ ಹುದ್ದೆಗಳನ್ನು ಪಾರದರ್ಶಕ ಮತ್ತು ಪ್ರಕ್ರಿಯೆ ಚಾಲಿತ ರೀತಿಯಲ್ಲಿ ಭರ್ತಿ ಮಾಡಲಾಗಿದೆ. ಐಎಂಆರ್ ನಂತಹ ಇತರ ಸೂಚಕಗಳು ಸುಧಾರಣೆಯನ್ನು ತೋರಿಸಿವೆ. ಮೂಲಸೌಕರ್ಯ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಎಲ್ಲರಿಗೂ ಕಾಣಿಸುತ್ತಿದೆ. ಇದರ ಶ್ರೇಯ ಸಹಜವಾಗಿ ಜಮ್ಮು ಮತ್ತು ಕಾಶ್ಮೀರದ ಜನರ ಸ್ಥೈರ್ಯಕ್ಕೆ ಸಲ್ಲುತ್ತದೆ, ಅವರು ಅಭಿವೃದ್ಧಿಯನ್ನು ಮಾತ್ರ ಬಯಸುತ್ತಾರೆ ಮತ್ತು ಈ ಸಕಾರಾತ್ಮಕ ಬದಲಾವಣೆಯ ಚಾಲಕರಾಗಲು ಸಿದ್ಧರಿದ್ದಾರೆ ಎಂದು ಪದೇ ಪದೇ ತೋರಿಸಿದ್ದಾರೆ. ಈ ಹಿಂದೆ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಪರಿಸ್ಥಿತಿಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇತ್ತು. ಈಗ, ದಾಖಲೆಯ ಬೆಳವಣಿಗೆ, ದಾಖಲೆಯ ಅಭಿವೃದ್ಧಿ, ದಾಖಲೆ ಪ್ರವಾಸಿಗರ ಒಳಹರಿವಿನ ಬಗ್ಗೆ ಆಶ್ಚರ್ಯಸೂಚಕ ಚಿಹ್ನೆಗಳು ಮಾತ್ರ ಇವೆ.
ಡಿ. ೧೧ ರಂದು ತನ್ನ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಾಲಯವು `ಏಕ್ ಭಾರತ್, ಶ್ರೇಷ್ಠ ಭಾರತ್'ಎಂಬ ಮನೋಭಾವವನ್ನು ಬಲಪಡಿಸಿದೆ - ಅದು ನಮಗೆ ಏಕತೆಯ ಬಂಧಗಳು ಮತ್ತು ಉತ್ತಮ ಆಡಳಿತದ ಹಂಚಿಕೆಯ ಬದ್ಧತೆಯನ್ನು ನೆನಪಿಸಿದೆ. ಇಂದು ಜಮ್ಮು, ಕಾಶ್ಮೀರ ಮತ್ತು ಲಡಾಖ್ ನಲ್ಲಿ ಜನಿಸಿದ ಪ್ರತಿಯೊಂದು ಮಗುವೂ ಸ್ವಚ್ಛವಾದ ಕ್ಯಾನ್ವಾಸ್ ನೊಂದಿಗೆ ಜನಿಸುತ್ತದೆ, ಅಲ್ಲಿ ಅವನು ಅಥವಾ ಅವಳು ರೋಮಾಂಚಕ ಆಕಾಂಕ್ಷೆಗಳಿಂದ ಕೂಡಿದ ಭವಿಷ್ಯವನ್ನು ಚಿತ್ರಿಸಬಹುದು. ಇಂದು, ಜನರ ಕನಸುಗಳು ಬಂಧಿಗಳಾಗದೆ ಭವಿಷ್ಯದ ಸಾಧ್ಯತೆಗಳಾಗಿವೆ. ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ಘನತೆಯು ಭ್ರಮನಿರಸನ, ನಿರಾಶೆ ಮತ್ತು ಹತಾಶೆಯನ್ನು ಬದಲಿಸಿವೆ.