ಏನಾದರೂ ಆಗು… ಮೊದಲು ಕ್ಲಿಕ್ ಆಗು!
ಜೀವನದಲ್ಲಿ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಬೇಕು ಎಂಬ ಆಸೆ ಎಲ್ಲ ತಂದೆ-ತಾಯಿಗೂ ಇದ್ದೇ ಇರುತ್ತದೆ. ಆದರೆ ಮಕ್ಕಳ ಆಸೆ ಏನು ಎಂಬುದು ಬಲ್ಲವರು ಯಾರು..? ಅವರಿಗೆ ವಿದ್ಯಾಭ್ಯಾಸದ ಹೊರತಾಗಿ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ, ಅವರ ದೃಷ್ಟಿಕೋನದಲ್ಲಿ ಜೀವನ ಅಂದರೆ ಏನು ಎಂಬುದರ ಕುರಿತು ಪೋಷಕರು ಒಮ್ಮೆಯೂ ಮಕ್ಕಳ ಅಭಿಪ್ರಾಯ ಕೇಳುವುದಿಲ್ಲ. ಸದಾ ಓದು ಓದು...' ಎನ್ನುತ್ತಿದ್ದರೆ, ಇದರಿಂದ ಬೇಸತ್ತ ಮಕ್ಕಳು ಅನ್ಯಮಾರ್ಗ ಕಂಡುಕೊಳ್ಳುತ್ತಾರೆ. ಕ್ಲಿಕ್ ಸಿನಿಮಾ ಸಹ ಅದೇ ಹಾದಿಯಲ್ಲಿ ಕಥೆಯ ಒಂದೊಂದೇ ಪುಟ ತೆರೆದುಕೊಳ್ಳುತ್ತದೆ. ಸಿನಿಮಾ ಒಂದು ಹಂತಕ್ಕೆ ಸಾಗಿದ ಬಳಿಕ ಅಸಲಿ ಕಥೆ ಶುರುವಾಗುತ್ತದೆ. ಜೀವನದ ನಾನಾ ಮಜಲುಗಳ ದರ್ಶನ, ಮಕ್ಕಳ ಬಯಕೆ, ಅವರ ಮನಸ್ಸಿನ ತಳಮಳಗಳ ಕುರಿತು ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಈ ನಿಟ್ಟಿನಲ್ಲಿ ಪಾಲಕರು, ಮಕ್ಕಳ ಮನಸ್ಸಿನಾಳದಲ್ಲಿ ಉಳಿಯುವ ಕೆಲವೊಂದು ಅಂಶಗಳು ಸಿನಿಮಾದಲ್ಲಿ ದಾಖಲಾಗಿವೆ. ಒಟ್ಟಾರೆಯಾಗಿ ಜೀವನದಲ್ಲಿ ಓದು ಮುಖ್ಯ... ಪಠ್ಯೇತರ ಚಟುವಟಿಕೆಗಳೂ ಅಗತ್ಯ ಎಂಬುದು ಒಂದಾದರೆ, ಏನಾದರೂ ಆಗು, ಮೊದಲು ಜೀವನದಲ್ಲಿ
ಕ್ಲಿಕ್' ಆಗು ಎಂಬ ಸಂದೇಶ ಸಾರುತ್ತದೆ. ಅದಕ್ಕೆ ಬೇಕಾದ ಸಾರವೂ ಚಿತ್ರದಲ್ಲಿದೆ.
ಪವನ್ ಬಸ್ರೂರು, ಕಾರ್ತಿಕ್ ನಟನೆಯಲ್ಲಿ ಗಮನ ಸೆಳೆಯುತ್ತಾರೆ. ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನಾ ಶಶಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಸಿನಿಮಾಕ್ಕೆ ಪೂರಕವಾಗಿದೆ.