ಏಪ್ರಿಲ್ ವೇಳೆಗೆ ‘ಕಲಾಲೋಕ’ ಲಭ್ಯ!
ಬೆಂಗಳೂರು: ರಾಜ್ಯದ ಅಸ್ಮಿತೆಗೆ ಹೆಸರಾದ ಉತ್ಪನ್ನಗಳು ವಿಮಾನ ನಿಲ್ದಾಣದ ‘ಕಲಾಲೋಕ’ ದಲ್ಲಿ ಏಪ್ರಿಲ್ ವೇಳೆಗೆ ಲಭ್ಯವಾಗಲಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು "ಕನ್ನಡ ನಾಡಿನ ಅಸ್ಮಿತೆಗೆ ಹೆಸರಾದ ಸರ್ಕಾರಿ ಉದ್ದಿಮೆಗಳ ಉತ್ಪನ್ನಗಳ 2 ಮಾರಾಟ ಮಳಿಗೆಗಳು "ಕಲಾಲೋಕ" ಹೆಸರಿನಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಏಪ್ರಿಲ್ ವೇಳೆಗೆ ಆರಂಭಿಸಲಾಗುವುದು. ಈ ಬಗ್ಗೆ ಇಂದು ನಡೆಸಿದ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. #KSDL ನ ಉತ್ಪನ್ನಗಳು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, #KSIC-ಸೀರೆಗಳು, ಕಾಫಿ ಬೋರ್ಡ್ ಮತ್ತು ಲಿಡ್ಕರ್ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಜತೆಗೆ ರಾಜ್ಯದಲ್ಲಿ ತಯಾರಾಗುವ ಪಾರಂಪರಿಕ ಚನ್ನಪಟ್ಟಣದ ಆಟಿಕೆಗಳು, ಇಳಕಲ್ ಸೀರೆ, ಲಂಬಾಣಿ ಕಸೂತಿ ಇತ್ಯಾದಿ ಉತ್ಪನ್ನಗಳು ಕೂಡ ಲಭ್ಯವಾಗಲಿದೆ.
ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ, KSDLನ MD ಪ್ರಶಾಂತ್, ವಿಮಾನ ನಿಲ್ದಾಣದ ಉಪಾಧ್ಯಕ್ಷ ವೆಂಕಟರಾಮನ್, KSMCA ವ್ಯವಸ್ಥಾಪಕ ನಿರ್ದೇಶಕ ಸಿದ್ಧಲಿಂಗಪ್ಪ ಪೂಜಾರ್ ಮತ್ತಿತರರು ಸಭೆಯಲ್ಲಿದ್ದರು ಎಂದಿದ್ದಾರೆ.