ಏರ್ ಇಂಡಿಯಾದಲ್ಲೂ ವೈ-ಫೈ
ನವದೆಹಲಿ: ಏರ್ ಇಂಡಿಯಾ ಸಂಸ್ಥೆ ಈಗ ತನ್ನ ವಿಮಾನಗಳಲ್ಲಿ ವೈ-ಫೈ ಸೇವೆ ಕಲ್ಪಿಸುತ್ತಿದೆ. ಸೆ.೨ರಂದು ಲಂಡನ್‌ನಿಂದ ದೆಹಲಿಗೆ ತೆರಳಿದ ವಿಮಾನದಲ್ಲಿ ಈ ಸೇವೆ ಆರಂಭವಾಗಿದೆ. ಇಂಟರ್ನೆಟ್‌ನಿಂದ ಮಾಡಬಹುದಾದ ಎಲ್ಲಾ ಸೇವೆಗಳನ್ನು ಈಗ ವಿಮಾನದಲ್ಲಿ ವೈಫೈ ಮೂಲಕ ಮಾಡಬಹುದು. ಶೀಘ್ರದಲ್ಲೇ ಏರ್ ಇಂಡಿಯಾದ ಎಲ್ಲಾ ವಿಮಾನಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಈಗ ವಿಸ್ತಾರ ಏರ್‌ಲೈನ್ಸ್ ಮಾತ್ರ ತನ್ನ ಅಂತಾರಾಷ್ಟ್ರೀಯ ಮಟ್ಟದ ವಿಮಾನಗಳಲ್ಲಿ ವೈ-ಫೈ ಸೇವೆ ಒದಗಿಸುತ್ತಿರುವ ಮೊದಲ ವಿಮಾನಯಾನ ಸಂಸ್ಥೆ. ಆ ಸಾಲಿಗೆ ಈಗ ಏರ್ ಇಂಡಿಯಾ ಕೂಡಾ ಸೇರ್ಪಡೆಯಾಗಿದೆ.
ವಿಮಾನದಲ್ಲಿ ಈ ಸೌಲಭ್ಯ ಹೇಗೆ?
ವಿಮಾನಗಳಲ್ಲಿ ವೈ_ಫೈ ಸೌಲಭ್ಯ ಕಲ್ಪಿಸುವುದು ಕ್ಯಾಪ್ಟನ್ ವಿವೇಚನೆಗೊಳಪಡುವ ವಿಷಯ. ಸಾಮಾನ್ಯವಾಗಿ ವಿಮಾನ ಅತಿಎತ್ತರದಲ್ಲಿ ಹಾರಾಡುವಾಗ ವೈ-ಫೈ ಸೌಲಭ್ಯ ಕಲ್ಪಿಸಲಾಗುತ್ತದೆ. ವಿಮಾನ ಇಳಿಯುವಾಗ ಅಥವಾ ಹವಾಮಾನ ವೈಪರೀತ್ಯ ಇದ್ದಾಗ ಈ ಸೌಲಭ್ಯ ಸಿಗಲಾರದು.
ವಿಮಾನಗಳಲ್ಲಿ ವೈಫೈ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಕುತೂಹಲಕಾರಿ ಸಂಗತಿ. ಇದು ವಿಮಾನಯಾನ ಸಂಸ್ಥೆ ಹಾಗೂ ವಿಮಾನವಲ್ಲದೆ, ಏರ್ ಥ್ರೂ ಗ್ರೌಂಡ್, ಉಪಗ್ರಹ ಹಾಗೂ ವೈ-ಫೈಯನ್ನು ಅವಲಂಬಿಸಿದೆ. ಏರ್ ಥ್ರೂ ಗ್ರೌಂಡ್ ವಿಧಾನವು ಫೋನ್‌ನ ಇಂಟರ್ನೆಟ್ ಸಂಪರ್ಕದಂತೆ ಕಾರ್ಯನಿರ್ವಹಿಸುತ್ತದೆ. ಭೂಮಿ ಮೇಲಿನ ಸೆಲ್ ಟವರ್‌ನಿಂದ ಆಕಾಶದಲ್ಲಿ ಹಾರಾಡುವ ವಿಮಾನಗಳಿಗೆ ವೈ-ಫೈ ಸಂಕೇತ ರವಾನೆಯಾಗುತ್ತದೆ.
ಇನ್ನೊಂದು ವಿಧಾನ ಉಪಗ್ರಹ ಬಳಕೆ ಮಾಡುವಂತಹದ್ದು. ವಿಮಾನದ ಮೇಲೆ ಅಂಟೆನಾ ಅಳವಡಿಸಲಾಗುತ್ತದೆ. ಅದರ ಮೂಲಕ ಉಪಗ್ರಹಗಳಿಂದ ಸಂಕೇತಗಳನ್ನು ಸ್ವೀಕರಿಸುವ ಮೂಲಕ ಪ್ರಯಾಣಿಕರಿಗೆ ವೈ-ಫೈ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ತಂತ್ರಜ್ಞಾನ ಬಹಳ ಹೊಸದಾದರೂ ಹಲವಾರು ವಿಮಾನಯಾನ ಸಂಸ್ಥೆಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ವೈ-ಫೈ ಸೇವೆ ಒದಗಿಸುವ ಅಂತಾರಾಷ್ಟ್ರೀಯ ವಿಮಾನಗಳು
ಎಮಿರೇಟ್ಸ್, ಅಮೆರಿಕನ್ ಏರ್‌ಲೈನ್ಸ್, ಡೆಲ್ಟಾ ಏರ್‌ಲೈನ್ಸ್, ಜೆಟ್‌ಬ್ಲೂ, ನಾರ್ವೆಯನ್ ಏರ್, ಫಿಲಿಫೈನ್ ಏರ್, ಏರ್ ನ್ಯೂ ನ್ಯೂಜಿಲ್ಯಾಂಡ್, ಚೀನಾ ಈಸ್ಟರ್ನ್ ಏರ್‌ಲೈನ್ಸ್, ಯುನೆಟೈಡ್ ಏರ್‌ಲೈನ್ಸ್ ಹಾಗೂ ವರ್ಜಿನ್ ಅಟ್ಲಾಂಟಿಕ್