ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಏರ್ ಇಂಡಿಯಾ ಕನಸು ವಿಸ್ತರಿಸುವುದೇ?

02:40 AM Sep 30, 2024 IST | Samyukta Karnataka

ಕೆಲವೊಂದು ಉದ್ಯಮಗಳಲ್ಲಿ ಕೆಲವೇ ಕೆಲವರು ಮಾತ್ರ ಪ್ರವೇಶ ಮಾಡಬಹುದು. ಅಂತಹ ಎರಡು ಉದ್ಯಮಗಳೆಂದರೆ ಒಂದು ವಿಮಾನಯಾನ ಮತ್ತೊಂದು ಸುದ್ದಿ ಚಾನಲ್‌ಗಳು. ವಿಮಾನಯಾನ ಸಂಸ್ಥೆಗೂ ಸುದ್ದಿ ಸಂಸ್ಥೆಗೂ ತಾಳೆ ಹಾಕುವುದು ಸರಿಯಲ್ಲ, ಆದರೆ ಆ ಸಂಸ್ಥೆಗಳನ್ನು ನಡೆಸುವುದೆಂದರೆ ಮುಳ್ಳಿನ ಮೇಲಿನ ನಡಿಗೆಯಲ್ಲ, ಅದು ಕೆಂಡದ ಮೇಲಿನ ನಡಿಗೆಯೇ ಸರಿ. ಏಕೆಂದರೆ ಈ ಸಂಸ್ಥೆಗಳು ತಮ್ಮ ದಿನ ನಿತ್ಯದ ಬೇಕು ಬೇಡಗಳಿಗೆ ಬೇಡುವ ಬಂಡವಾಳ (wo
rking capital) ಹಾಗೂ ಅವುಗಳನ್ನು ಪೂರೈಸುವ ಸವಾಲು. ಅದು ಎಷ್ಟೇ ದೊಡ್ಡ ಉದ್ಯಮಿಯಾಗಿರಲಿ, ಆತನನ್ನು ಹಣ್ಣು ಹಣ್ಣಾಗಿಸುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಉದಾಹರಣೆಗಳೆಂದರೆ ಕಿಂಗ್‌ಫಿಷರ್ ಹಾಗೂ ಜೆಟ್ ಏರ್ವೇಸ್ ಸಂಸ್ಥೆಗಳು. ಮೊದ ಮೊದಲು ಕಿಂಗ್‌ಫಿಷರ್ ಸಂಸ್ಥೆ ಅತ್ಯಂತ ಯಶಸ್ವಿಯಾಗುವಂತೆ ಕಾಣುತ್ತಿತ್ತು. ಆದರೆ ಕಾಲ ಸರಿದಂತೆ ಕಿಂಗ್‌ಫಿಷರ್ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿತು. ಅದೇ ರೀತಿ ಜೆಟ್ ಏರ್ವೇಸ್ ಕೂಡ ಕದ ಮುಚ್ಚಿತು. ಸಾವಿರಾರು ಸಿಬ್ಬಂದಿ ವರ್ಗ ಬೀದಿಗೆ ಬಂದರು. ಹಾಗಾದರೆ ವಿಮಾನಯಾನ ಸಂಸ್ಥೆಗಳ ಸಮಸ್ಯೆಗಳೇನು ಎಂದು ನೋಡ ಹೊರಟಾಗ ತತಕ್ಷಣಕ್ಕೆ ಕಂಡು ಬಂದದ್ದು ಇಂಧನದ ದರ ಹಾಗೂ ವಿಮಾನಗಳ ಸವಕಳಿ ಮತ್ತು ಅವುಗಳ ನಿರ್ವಹಣೆ. ಇದಾಗ್ಯೂ ಕೂಡ ಇಂಡಿಗೋ ಹಾಗೂ ಸ್ಪೆಸ್ ಜೆಟ್ ಸಂಸ್ಥೆಗಳು ದೇಶಿಯ ವಿಮಾನ ಸಂಪರ್ಕದ ವ್ಯವಹಾರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಲೇ ಇದೆ. ಏರ್ ಇಂಡಿಯಾ ಟಾಟಾ ತೆಕ್ಕೆಗೆ ಬಂದ ನಂತರ ಮತ್ತೆ ಎದ್ದು ನಿಂತಿದೆ. ಏರ್ ಇಂಡಿಯಾ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಸುಮಾರು ಶೇ. ೬೦ ನಷ್ಟವನ್ನು ತಗ್ಗಿಸಿಕೊಂಡು ತನ್ನ ಕನಸುಗಳನ್ನು ವಿಸ್ತಾರಗೊಳಿಸುವತ್ತ ಹೆಜ್ಜೆ ಹಾಕಿದೆ. ಹೀಗೆ ವಿಮಾನ ಯಾನ ಸಂಸ್ಥೆಗಳ ಬೆಳವಣಿಗೆ ಅತ್ಯಂತ ಆಶಾದಾಯಕವಾಗಿ ಕಾಣುತ್ತಿವೆ. ಆದರೆ ಇವು ಇತಿಹಾಸದತ್ತ ಒಮ್ಮೆ ತಿರುಗಿ ಇತರೆ ಸಂಸ್ಥೆಗಳು ಮಾಡಿದ ಅಜಾಗರೂಕ ನಿರ್ಣಯಗಳನ್ನು ಗಮನಿಸಿ ಅಂತಹ ನಿರ್ಣಯಗಳಿಗೆ ಆಹುತಿಯಾಗದೆ ಮುನ್ನಡೆದರೆ ಒಳಿತು. ಅದರಲ್ಲೂ ಏರ್ ಇಂಡಿಯಾ ಹಾದಿಯಲ್ಲಿರುವ ಸವಾಲುಗಳು ನಾನಾ ವಿಧವಾದದ್ದು. ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸಂಸ್ಥೆ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಾಗ ಟಾಟಾ ಸಂಸ್ಥೆಯ ಪರಿಸ್ಥಿತಿ ಸಂತೋಷ ಹಾಗೂ ದುಃಖಗಳ ಮಿಶ್ರಣದ ಹೂರಣದಂತಿದ್ದಿರಬೇಕು. ಏಕೆಂದರೆ ಏರ್ ಇಂಡಿಯಾಗೂ ಟಾಟಾ ಸಂಸ್ಥೆಗೂ ಒಂದು ಕರಳು ಬಳ್ಳಿಯ ಸಂಬಂಧವಿದೆ. ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವಿಮಾನಯಾನ ಸಂಸ್ಥೆ ಪ್ರಾರಂಭಿಸಿದ್ದೆ ದಿ ಗ್ರೇಟ್ ಜೆಆರ್‌ಡಿ ಟಾಟಾ. ೧೯೩೦ರ ದಶಕದಲ್ಲಿ ಭಾರತದ ಮೊದಲ ವಾಣಿಜ್ಯ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಟಾಟಾ ಏರ್‌ಲೈನ್ಸ್‌ಗೆ ಸಲ್ಲುತ್ತದೆ. ಫೆಬ್ರವರಿ ೧೯೨೯ರಲ್ಲಿ ಜೆಆರ್‌ಡಿ ತನ್ನ ಪೈಲಟ್ ಪರವಾನಗಿಯನ್ನು ಪಡೆದು ೧೯೩೨ರಲ್ಲಿ ಕರಾಚಿಯ ಡ್ರಿಗ್ ರೋಡ್ ಏರೋಡ್ರೋಮ್‌ನಿಂದ ಅಹಮದಾಬಾದ್ ಮೂಲಕ ಮುಂಬೈನ ಜುಹು ಏರ್‌ಸ್ಟ್ರಿಪ್‌ಗೆ ಟಾಟಾ ಏರ್ ಸರ್ವಿಸಸ್‌ನ ಮೊದಲ ಹಾರಾಟವನ್ನು ಪ್ರಾಯೋಗಿಕವಾಗಿ ನಡೆಸುವ ಮೂಲಕ ಇತಿಹಾಸವನ್ನು ನಿರ್ಮಿಸಿ ಟಾಟಾ ಏರ್‌ಲೈನ್ಸ್‌ಗೆ ಚಾಲನೆ ನೀಡಿದರು. ೧೯೪೬ರಲ್ಲಿ ಇದನ್ನು ಏರ್-ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಎರಡು ವರ್ಷಗಳ ನಂತರ, ಟಾಟಾ ಸರ್ಕಾರದ ಸಹಯೋಗದೊಂದಿಗೆ ಏರ್-ಇಂಡಿಯಾ ಇಂಟರ್‌ನ್ಯಾಷನಲ್ ಅನ್ನು ಸ್ಥಾಪಿಸಿತ್ತು.
ಐದೇ ಐದು ವರ್ಷಗಳ ನಂತರ ಇತ್ತ ಸಮಾಜವಾದಿಯು ಅಲ್ಲದ ಅತ್ತ ಬಂಡವಾಳ ಶಾಹಿಯು ಅಲ್ಲದ ಸರ್ಕಾರದ ಇಬ್ಬಗೆಯ ನೀತಿ ವಾಯುಯಾನ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಲು ನಿರ್ಧರಿಸಿ ಟಾಟಾ ಕನಸಿಗೆ ತಣ್ಣೀರೆರಚಿತ್ತು, ಅಲ್ಲದೆ ಟಾಟಾರವರನ್ನೇ ಏರ್-ಇಂಡಿಯಾದ ಅಧ್ಯಕ್ಷರಾಗುವಂತೆ ಸರ್ಕಾರ ಕೇಳಿಕೊಂಡಿತು. ಅವರು ೧೯೭೮ರವರೆಗೆ ಈ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿಯೂ ಇದ್ದರು ಮತ್ತು ಸಣ್ಣ ಸಣ್ಣ ವಿಷಯಗಳ ಬಗ್ಗೆ ಅತ್ಯಂತ ಆಸ್ಥೆಯಿಂದ ತಮ್ಮ ಸಲಹೆಗಳನ್ನು ಕೊಟ್ಟು ಏರ್ ಇಂಡಿಯಾದ ಉನ್ನತಿಗಾಗಿ ಶ್ರಮಿಸಿದ್ದರು. ಆದರೆ ಅವರ ಸೇವೆಯನ್ನು ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ರದ್ದುಗೊಳಿಸಿದ್ದರು. ೧೯೮೦ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿ ಟಾಟಾ ಅವರನ್ನು ಪುನಃ ನೇಮಿಸಿಕೊಂಡರು. ಕಾಲಾನುಕ್ರಮದಲ್ಲಿ ವಿಮಾನಯಾನ ಉದ್ಯಮದಲ್ಲಿ ಮತ್ತೆ ಖಾಸಗಿ ಸಂಸ್ಥೆಗಳು ಲಗ್ಗೆ ಇಟ್ಟವು, ಕೆಲವು ಉಳಿದವು, ಇನ್ನು ಕೆಲವು ದಿವಾಳಿಯಾದವು. ಹೀಗೆ ಸಾಲು ಸಾಲು ವಿಮಾನ ಯಾನ ಸಂಸ್ಥೆಗಳು ದಿವಾಳಿಯಾದಾಗ ಅವುಗಳ ಮೇಲೆ ಕಣ್ಣಿಟ್ಟ ಸರ್ಕಾರ ಅವುಗಳ ಸಂಸ್ಥಾಪಕರನ್ನೋ ಅಥವಾ ಆ ಸಂಸ್ಥೆಗಳಿಗೆ ಹಣಕಾಸು ಸಹಾಯ ಮಾಡಿದ ಸಂಸ್ಥೆಯನ್ನು ಕರೆದು ನಿಲ್ಲಿಸಿ ಹೀಗೇಕೆ ಮತ್ತು ಇದರಲ್ಲಿ ನಿಮ್ಮ ಪಾತ್ರವೇನು ಎಂದು ಕೇಳಿದ ಉದಾಹರಣೆಗಳಿವೆ. ಆದರೆ ತನ್ನ ಹಿತ್ತಲಿನಲ್ಲಿದ್ದ ಏರ್ ಇಂಡಿಯಾದ ಬಗ್ಗೆ ಮಾತ್ರ ಕಾಲದಿಂದ ಕಾಲಕ್ಕೆ ಬೇಲ್ ಔಟ್ ಪ್ಯಾಕೇಜುಗಳನ್ನು ಕೊಟ್ಟು ದಿವ್ಯ ಮೌನಕ್ಕೆ ಶರಣಾಗುತ್ತಿತ್ತು. ಪರಿಣಾಮ ದಿವಾಳಿಯಾಗುವ ಹಂತಕ್ಕೆ ಬಂದಿದ್ದ ಏರ್ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ ೨೦೨೨ರಲ್ಲಿ ಸ್ವಾಧೀನ ಪಡಿಸಿಕೊಂಡು ಏರ್ ಇಂಡಿಯಾದ ರಕ್ಷಣೆಗೆ ಮುಂದಾಯಿತು. ಅದೇ ೨೦೨೨ರ ಅಂತ್ಯದಲ್ಲಿ ಆಕಾಸ್ ಏರ್ ಎಂಬ ಸಂಸ್ಥೆ ವಿಮಾನಯಾನ ಮಾರುಕಟ್ಟೆಯನ್ನು ಪ್ರವೇಶಿಸಿತು. ಅದರ ಅರ್ಥ ಸ್ಪಷ್ಟ ವಿಮಾನ ಯಾನ ಸಂಸ್ಥೆಗಳಲ್ಲಿ ಲಾಭ ಇದ್ದೆ ಇದೆ ಎಂದು. ಆದರೆ ಸರ್ಕಾರಗಳು ಏರ್ ಇಂಡಿಯಾ ವಿಷಯದಲ್ಲಿ ನಿರ್ಲಕ್ಷ ವಹಿಸಿತು. ಪರಿಣಾಮ ಏರ್ ಇಂಡಿಯಾ ನಷ್ಟದ ಸಂಕೋಲೆಯಿಂದ ಹೊರ ಬರಲಿಲ್ಲ. ಮತ್ತೊಮ್ಮೆ ಟಾಟಾ ಸಮೂಹ ಸಂಸ್ಥೆ ತನ್ನ ಕರಳು ಬಳ್ಳಿ ಏರ್ ಇಂಡಿಯಾಗಾಗಿ ೨೦೧೩ರಲ್ಲಿ ತಾನೇ ಸ್ಥಾಪಿಸಿದ್ದ "ವಿಸ್ತಾರ" ಎಂಬ ವಿಮಾನ ಯಾನ ಸಂಸ್ಥೆಯ ಕನಸನ್ನು ತನ್ನ ಕೈಯಾರೆ ತಾನೇ ಚಿವುಟಿ ಹಾಕುವ ಒಲ್ಲದ ನಿರ್ಧಾರಕ್ಕೆ ಬಂದಿತು, ಪರಿಣಾಮ ವಿಸ್ತಾರ ಹಾಗೂ ಏರ್ ಇಂಡಿಯಾ ಇಲ್ಲಿಯವರೆಗೂ ಒಟ್ಟೊಟ್ಟಿಗೆ ಸಾಗುತ್ತ ಬಂದಿದೆ. ಆದರೆ ಇನ್ನೊಂದು ತಿಂಗಳಲ್ಲಿ ವಿಸ್ತಾರವೆಂಬ ಬ್ರಾಂಡ್ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ.
ವಿಸ್ತಾರದ ಗ್ರಾಹಕರು ಒಲ್ಲದ ಮನಸ್ಸಿನಿಂದ ವಿಸ್ತಾರದ ಮೆಟ್ಟಿಲಿಳಿಯುತ್ತಿದ್ದಾರೆ. ಕಾರಣವಿಷ್ಟೇ ವಿಸ್ತಾರ ತನ್ನ ಪಯಣದ ಹಾದಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದರು. ಗ್ರಾಹಕರತ್ತ ತೋರುತ್ತಿದ್ದ ಉನ್ನತ ದರ್ಜೆಯ ಆತಿಥ್ಯದಲ್ಲಾಗಲಿ ಅಥವಾ ಸೌಲಭ್ಯಗಳತ್ತವಾಗಲಿ ರಾಜಿ ಮಾಡಿಕೊಂಡಿರಲಿಲ್ಲ. ವಿಸ್ತಾರ ಹಾಗೂ ಏರ್ ಇಂಡಿಯಾ ಎರಡನ್ನು ಒಟ್ಟೊಟ್ಟಿಗೆ ಕೊಂಡೊಯ್ಯಬಹುದಾಗಿತ್ತು. ವಿಸ್ತಾರವನ್ನು ಪ್ರೀಮಿಯಂ ಗ್ರಾಹಕರಿಗಾಗಿ ಹಾಗೂ ಏರ್ ಇಂಡಿಯಾವನ್ನು ಇಂಡಿಗೋದಂತೆ ಎಕನಾಮಿಕ್ ವಿಭಾಗದ ಗ್ರಾಹಕರಿಗಾಗಿ ಎಂಬ ತಂತ್ರ ಹೆಣೆಯಬಹುದಿತ್ತು. ಆದರೆ ಟಾಟಾ ಸಂಸ್ಥೆ ಎರಡು ದೋಣಿಯಲ್ಲಿ ಕಾಲಿಟ್ಟು ಸಾಗಲು ಆಸಕ್ತಿ ತೋರುತ್ತಿಲ್ಲ. ಕಾರಣ ಸ್ಪಷ್ಟ ಟಾಟಾ ಗುರಿ ಏನಿದ್ದರೂ ಏರ್ ಇಂಡಿಯಾವನ್ನು ಪ್ರೀಮಿಯಂ ಬ್ರಾಂಡ್ ಮಾಡುವುದು. ಹಾಗಾದರೆ ವಿಸ್ತಾರದ ಗ್ರಾಹಕ ವಿಸ್ತಾರದ ಮೆಟ್ಟಿಲಿಳಿದು ಏರ್ ಇಂಡಿಯಾ ಮೆಟ್ಟಿಲು ಹತ್ತುವನೇ? ಕಾದು ನೋಡಬೇಕು. ಏರ್ ಇಂಡಿಯಾ ಬಾಬು ರಾಜ್‌ನಿಂದ ಮುಕ್ತವಾಗಿರಬಹುದು. ಆದರೆ ಅದರ ಛಾಯೆಯಿಂದಲ್ಲ, ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕು. ವಿಸ್ತಾರದ ಗ್ರಾಹಕರನ್ನು ಸೆಳೆಯಲು ಆಕಾಸ್ ಏರ್ ಹೊಂಚು ಹಾಕಿ ಕುಳಿತಿದೆ. ಟಾಟಾ ತನ್ನದಲ್ಲದ ತಪ್ಪಿಗೆ ಎರಡೆರಡು ಬಾರಿ ತನ್ನ ಕನಸಿನ ಪಯಣವನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಗಿದೆ. ಆ ಕಾರಣಕ್ಕಾದರೂ ಏರ್ ಇಂಡಿಯಾ ಗೆಲ್ಲಬೇಕು. ಪ್ರಪಂಚದಾದ್ಯಂತ ಗಗನದಲ್ಲಿ ಭಾರತದ ಲೋಹದ ಹಕ್ಕಿ ಇಂಡಿಯಾ ಎಂಬ ಹೆಸರನ್ನು ಹೊತ್ತು ಸದ್ದು ಮಾಡಬೇಕು.

Next Article