ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ
ನವದೆಹಲಿ: ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ.
ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆ ಕರೆ ಬಂದ ನಂತರ, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ವಿಮಾನಯಾನ ಸಂಸ್ಥೆಗೆ ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೇ ಹೈ ಅಲರ್ಟ್ ಆದ ಅಧಿಕಾರಿಗಳು ತಕ್ಷಣವೇ ನ್ಯೂಯಾರ್ಕ್‌ನತ್ತ ತೆರಳುತ್ತಿದ್ದ ವಿಮಾನವನ್ನು ದೆಹಲಿಯತ್ತ ತಿರುಗಿಸಿದರು, ಏರ್ ಇಂಡಿಯಾ ವಿಮಾನವು ಈಗ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರೀತಿಯ ಭದ್ರತಾ ತಪಾಸಣೆ ನಡೆಸಲಾಗುತ್ತಿದೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 2 ಗಂಟೆಗೆ ಏರ್ ಇಂಡಿಯಾ ವಿಮಾನ ನ್ಯೂಯಾರ್ಕ್‌ಗೆ ಹೊರಟಿತು. ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಬಾಂಬ್ ಬೆದರಿಕೆ ಬಂದಿತ್ತು. ಈ ಬೆದರಿಕೆಯ ನಂತರ, ಭದ್ರತಾ
ಕಾರಣಗಳಿಗಾಗಿ ವಿಮಾನವನ್ನು ದೆಹಲಿಯ ಕಡೆಗೆ ತಿರುಗಿಸಲಾಯಿತು. ಇದೊಂದು ಹುಸಿ ಬೆದರಿಕೆ ಕರೆ ಎಂದು ಹೇಳಲಾಗುತ್ತಿದ್ದು ಅಧಿಕಾರಿಗಳು ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ