ಏಳು ವರ್ಷದ ಬಾಲಕ 4 ಲಕ್ಷ ರೂ.ಗೆ ಮಾರಾಟ: ನಾಲ್ವರ ಬಂಧನ
ಕೆಲವು ಮಧ್ಯವರ್ತಿಗಳು ಬಾಲಕನನ್ನು ಮಹಿಳೆಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು.
ಬೆಳಗಾವಿ: ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಗುವಿನ ಮಲತಂದೆ ಸುಲ್ತಾನಪುರದ ಸದಾಶಿವ ಶಿವಬಸಪ್ಪ ಮಗದುಮ್ಮ (32), ಪ್ರಸ್ತುತ ಸುಲ್ತಾನಪುರದಲ್ಲಿರುವ ಭಡ್ಗಾಂವ್ ಮೂಲದ ಲಕ್ಷ್ಮಿ ಬಾಬು ಗೋಲಬಾವಿ (38), ಅಂಬೇಡ್ಕರ್ ನಗರದಲ್ಲಿ ವಾಸವಿರುವ ಮಹಾರಾಷ್ಟ್ರದ ಕೊಲ್ಲಾಪುರದ ನಾಗಲಾ ಪಾರ್ಕ್‌ನ ಸಂಗೀತಾ ವಿಷ್ಣು ಸಾವಂತ್ (40) ಮತ್ತು ಕಾರವಾರದ ಹಳಿಯಾಳ ತಾಲೂಕಿನ ಕೆಸ್ರೋಲಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ (50) ಎಂದು ಗುರುತಿಸಲಾಗಿದೆ. ಪ್ರಕರಣದ ಕುರಿತು ಮಾತನಾಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ್, ಶಿವಬಸಪ್ಪ ಮಗದುಮ್ಮ ಮತ್ತು ಕೊಲ್ಲಾಪುರ ಹಾಗೂ ಕಾರವಾರದ ಕೆಲವು ಮಧ್ಯವರ್ತಿಗಳು ಬಾಲಕನನ್ನು ಬೆಳಗಾವಿ ನಗರದ ದಿಲ್ಶಾದ್ ಸಿಕಂದರ್ ತಹಶೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ದಿಲ್ಶಾದ್ ಅವರು ಗಂಡು ಮಗುವನ್ನು ಬಯಸಿದ್ದರು ಎಂದು ತಿಳಿಸಿದ್ದಾರೆ.