ಏ. 8ರಿಂದ 108 ಆಂಬುಲೆನ್ಸ್ ಸೇವೆ ಸ್ಥಗಿತದ ಆತಂಕ
ಬೆಂಗಳೂರು: ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ೧೦೮ ಆಂಬುಲೆನ್ಸ್ ಚಾಲಕರು ಏಪ್ರಿಲ್ ೮ರಿಂದ ಸಾಮೂಹಿಕ ರಜೆ ಹಾಕಲು ನಿರ್ಧರಿಸಿದ್ದು ಇದರಿಂದ ೧೦೮ ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಹಲವಾರು ದಿನಗಳಿಂದ ಬಾಕಿ ವೇತನ ಪಾವತಿ ಮಾಡುವಂತೆ ಮನವಿ ಮಾಡಿದರೂ ಸ್ಪಂದಿಸದೇ ಇರುವುದರಿಂದ ಏಪ್ರಿಲ್ ೮ರವರೆಗೆ ಗಡುವು ನೀಡಿರುವ ಚಾಲಕರು ಅಷ್ಟರೊಳಗೆ ವೇತನ ಪಾವತಿ ಮಾಡದೇ ಇದ್ದಲ್ಲಿ ಸಾಮೂಹಿಕ ರಜೆ ಹಾಕುವ ಮೂಲಕ ಸೇವೆ ಸ್ಥಗಿತ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರದೊಳಗೆ ಬಾಕಿ ಉಳಿದಿರುವ ಎಲ್ಲಾ ವೇತನವನ್ನು ಪಾವತಿಸಬೇಕು ಎಂದು ಆರೋಗ್ಯ ಇಲಾಖೆ ಮತ್ತು ಜಿವಿಕೆ ಕಂಪನಿಗೆ ಅಂಬುಲೆನ್ಸ್ ಸಂಘಟನೆಗಳು ಗಡುವು ನೀಡಿದ್ದೇವೆ ಎಂದು ಆಂಬುಲೆನ್ಸ್ ಚಾಲಕ ಸಂಘಟನೆ ಪರಮಶಿವ, ದಯಾನಂದ್ ಹೇಳಿಕೆ ನೀಡಿದ್ದಾರೆ.
ನಾವು ಯಾವುದೇ ಹೋರಾಟ, ಪ್ರತಿಭಟನೆ ಮಾಡಲ್ಲ. ವೇತನ ನೀಡದಿದ್ದಕ್ಕೆ ನಮ್ಮ ಆಕ್ರೋಶವಿದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಮೊದಲೇ ಮಾಹಿತಿ ನೀಡಿದ್ದೇವೆ. ಕಳೆದ ನಾಲ್ಕು ತಿಂಗಳಿನಿಂದ ವೇತನ ಇಲ್ಲದೇ ಜೀವನ ನಡೆಸೋದು ಕಷ್ಟ ಆಗ್ತಿದೆ ಎಂದು ಅಂಬುಲೆನ್ಸ್ ಸಿಬ್ಬಂದಿ ಕಷ್ಟ ಹೇಳಿಕೊಳ್ಳುತ್ತಿದ್ದಾರೆ.
ಕಳೆದ ೧೦ ದಿನಗಳ ಹಿಂದೆ ವೇತನ ನೀಡದಿದ್ದರೆ ಹೋರಾಟದ ಎಚ್ಚರಿಕೆ ನೀಡಲಾಗಿತ್ತು. ಈ ಬಗ್ಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ. ಇಂದು ಮತ್ತೊಂದು ಪತ್ರ ಬರೆಯುತ್ತಿದ್ದೇವೆ. ಸೋಮವಾರದೊಳಗೆ ಬಾಕಿ ವೇತನ ನೀಡದಿದ್ದರೆ ಸಾಮೂಹಿಕ ರಜೆ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಕಳೆದ ವಾರ ಪ್ರತಿಭಟನೆ ಕುರಿತು ಸಂಯುಕ್ತ ಕರ್ನಾಟಕ ವರದಿ ಪ್ರಕಟಿಸಿತ್ತು.