For the best experience, open
https://m.samyuktakarnataka.in
on your mobile browser.

ಐಟಿ ಸಿಬ್ಬಂದಿಯ ಸಂಕಟ

02:30 AM Jul 23, 2024 IST | Samyukta Karnataka
ಐಟಿ ಸಿಬ್ಬಂದಿಯ ಸಂಕಟ

ಯಾವುದೇ ಆಯಾಮದ ದುಡಿಮೆಯಾದರೂ ಸರಿಯೇ, ಅದಕ್ಕೊಂದು ರೀತಿ ನೀತಿಯ ಜೊತೆಗೆ ಮಿತಿ ಇರಲೇಬೇಕು. ದಿನವಿಡೀ ದುಡಿಮೆ ಎಂಬುದಕ್ಕೆ ಅರ್ಥವೂ ಇಲ್ಲ-ಅದು ಸಾಧ್ಯವೂ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ದೇಶಗಳು ಅನುಸರಿಸುತ್ತಿರುವುದು ದಿನಕ್ಕೆ ೮ ಗಂಟೆಯ ದುಡಿಮೆ. ಜೊತೆಗೆ ವಾರಕ್ಕೊಮ್ಮೆ ರಜೆ, ಕೆಲವು ದೇಶಗಳಲ್ಲಿ ಹಾಗೂ ಆಯ್ದ ಕ್ಷೇತ್ರಗಳಲ್ಲಿ ವಾರಕ್ಕೆ ಎರಡು ದಿನ ರಜೆ ಸೌಲಭ್ಯ ಇರುವುದೂ ಉಂಟು. ಭಾರತದಲ್ಲಿಯೂ ಕೂಡಾ ಈಗ ಜಾರಿಯಲ್ಲಿರುವ ನೀತಿ ದಿನಕ್ಕೆ ಎಂಟು ಗಂಟೆಯ ದುಡಿಮೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ದಿಮೆಗಳು ಹಾಗೂ ಕಂಪನಿಗಳು ಈ ಸಂಪ್ರದಾಯ ಹಾಗೂ ಕಾರ್ಮಿಕ ಶಾಸನವನ್ನು ಮಾರ್ಪಾಟು ಮಾಡಿ ದಿನಕ್ಕೆ ೧೪ ಗಂಟೆ ದುಡಿಯಲು ಅವಕಾಶ ಸೃಷ್ಟಿಸುವಂತೆ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಆಗ್ರಹಪಡಿಸಿರುವುದು ನಿಜಕ್ಕೂ ಅರ್ಥವಾಗದ ಸಂಗತಿ. ೨೪ ಗಂಟೆಗಳ ದಿನದ ಅವಧಿಯಲ್ಲಿ ೧೪ ಗಂಟೆಗಳನ್ನು ದುಡಿಮೆಗಾಗಿಯೇ ಮೀಸಲಿಟ್ಟರೆ ಆ ಸಿಬ್ಬಂದಿಯ ಮಾನಸಿಕ ಸ್ಥಿತಿ ಹೇಗಾಗಬಹುದು ಎಂಬ ಚಿಂತನೆಯೂ ಕೂಡಾ ಈ ಐಟಿ ಕಂಪನಿಗಳಿಗೆ ಇದ್ದಂತಿಲ್ಲ. ಸರ್ಕಾರಕ್ಕೂ ಕೂಡಾ ಇಂತಹ ಅತಿರೇಕದ ನಿಯಮವನ್ನು ಜಾರಿಗೆ ತರುವ ಬಗ್ಗೆ ಅಷ್ಟಾಗಿ ಉತ್ಸಾಹ ಕಾಣುತ್ತಿಲ್ಲ. ಆದರೆ, ಐಟಿ ಉದ್ದಿಮೆಯ ಕ್ಷೇತ್ರ ಬೊಕ್ಕಸಕ್ಕೆ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಪಾವತಿ ಮಾಡುತ್ತದೆ. ಮೊಟ್ಟೆ ಇಡುವ ಕೋಳಿಯನ್ನು ಜತನದಿಂದಲೇ ನೋಡಿಕೊಳ್ಳಬೇಕೆ ವಿನಃ ತಾತ್ಸಾರ ಮಾಡುವ ಸ್ಥಿತಿಯಲ್ಲಿ ಸರ್ಕಾರದವರು ಇಲ್ಲ. ಇಂತಹ ಇಬ್ಬಂದಿಯ ಸನ್ನಿವೇಶದಲ್ಲಿ ದುಡಿಮೆಯ ಅವಧಿಯನ್ನು ಹೆಚ್ಚಿಸುವ ಸಾಧಕ ಬಾಧಕಗಳ ಬಗ್ಗೆ ಸಾರ್ವಜನಿಕ ಸಂವಾದದ ಮೂಲಕವೇ ಜನಾಭಿಪ್ರಾಯವನ್ನು ಗುರುತಿಸುವುದು ಯೋಗ್ಯವಾದ ಮಾರ್ಗವಾಗಬಹುದು.
ಕರ್ನಾಟಕದ ಪ್ರಮುಖ ಐಟಿ ಉದ್ದಿಮೆ ಇನ್ಫೋಸಿಸ್ ಸಂಸ್ಥೆ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಐಟಿ ಕಂಪನಿಗಳ ಉದ್ಯೋಗಿಗಳು ವಾರಕ್ಕೆ ೭೦ ಗಂಟೆ ಕೆಲಸ ಮಾಡಬೇಕು ಎಂಬ ಅರ್ಥಬರುವ ರೀತಿಯಲ್ಲಿ ವಾದವನ್ನು ಮಂಡಿಸಿದ ನಂತರ ದೇಶಾದ್ಯಂತ ವ್ಯಾಪಕ ಚರ್ಚೆಯೂ ನಡೆಯಿತು. ದೇಶದ ಅಮೂಲಾಗ್ರವಾಗಿ ಬಲವರ್ಧನೆಯಾಗಬೇಕಾದರೆ ಯುವಕರು ಶ್ರಮಜೀವಿಗಳಾಗಬೇಕು ಎಂಬುದು ನಾರಾಯಣಮೂರ್ತಿ ಅವರ ಒಟ್ಟಾರೆ ಮಾತಿನ ಸಾರಾಂಶ. ಈ ಮಾತಿನ ಸ್ಫೂರ್ತಿ ಪಡೆದವರಂತೆ ಐಟಿ ಕಂಪನಿಗಳ ಆಡಳಿತಗಾರರು ಕರ್ನಾಟಕ ಸರ್ಕಾರಕ್ಕೆ ದುಡಿಮೆಯ ಅವಧಿಯನ್ನು ೧೦ ಗಂಟೆಯಿಂದ ೧೪ ಗಂಟೆಗೆ ವಿಸ್ತರಿಸಿ ಶಾಸನವನ್ನು ಬದಲಾಯಿಸುವಂತೆ ಕೋರಿರುವುದು ಈಗ ಕಾರ್ಮಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗ್ರಾಸವಾಗಿದೆ. ಐಟಿ ಕಂಪನಿಗಳ ಉದ್ಯೋಗಸ್ಥರು ಅಮೆರಿಕ ಹಾಗೂ ಯೂರೋಪ್ ದೇಶಗಳ ಸಂಸ್ಥೆಗಳ ಕಂಪನಿಗೆ ಅನುಕೂಲವಾಗುವಂತೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವುದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲಸ ಮನೆಯಿಂದ ಮಾಡಿದರೂ ಅಷ್ಟೆ. ಕಚೇರಿಗೆ ಹೋಗಿ ನಿರ್ವಹಿಸಿದರೂ ಅಷ್ಟೆ. ಸಮಯದ ಅವಧಿ ವ್ಯತ್ಯಾಸವೇನೂ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಹತ್ತರಿಂದ ೧೪ ಗಂಟೆಗೆ ವಿಸ್ತರಿಸಿದರೆ ಮನುಷ್ಯನ ಬೌದ್ಧಿಕ ಸಾಮರ್ಥ್ಯ ಅದನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಈಗಾಗಲೇ ಹಲವಾರು ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗಳು ತಲೆದೋರಿರುವುದು ಹೊಸ ವಿಷಯವೇನೂ ಅಲ್ಲ. ದಾಂಪತ್ಯದ ಬದುಕಿನಲ್ಲಿಯೂ ಕೂಡಾ ಬಿರುಕು ಕಾಣಿಸಿಕೊಂಡು ವಿಚ್ಚೇದನಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಗಮನಿಸಬೇಕು.
ಪ್ರತಿಯೊಬ್ಬರಿಗೂ ಉದ್ಯೋಗ ಬೇಕು. ಉದ್ಯೋಗವಿಲ್ಲದೆ ಬದುಕಿಲ್ಲ. ಆದರೆ, ಉದ್ಯೋಗವೇ ಬದುಕಲ್ಲ ಎಂಬ ಪರಮಸತ್ಯವನ್ನು ಐಟಿ ಕಂಪನಿಗಳ ಆಡಳಿತಗಾರರು ಹಾಗೂ ಸರ್ಕಾರದವರು ಅರ್ಥ ಮಾಡಿಕೊಳ್ಳಬೇಕು. ಈ ಹೆಚ್ಚುವರಿ ದುಡಿತಕ್ಕೆ ಆರ್ಥಿಕ ಪ್ರತಿಫಲ ಹೆಚ್ಚುವರಿಯಾಗಿ ದೊರಕಬಹುದು. ಹಣದಿಂದಲೇ ಶಾಂತಿ ಸಮಾಧಾನಗಳನ್ನು ಪಡೆಯಲು ಸಾಧ್ಯವಿಲ್ಲ. ಅದಕ್ಕೊಂದು ಒತ್ತಡ ಮುಕ್ತ ಮಾನಸಿಕ ಸ್ಥಿತಿ ಬೇಕು. ಭಾರತದಲ್ಲಿ ನಿರುದ್ಯೋಗದ ಬವಣೆ ಹೆಚ್ಚಿದೆ. ಇದರ ಪರಿಣಾಮವಾಗಿ ಅರೆ ಉದ್ಯೋಗವೇ ನಿರುದ್ಯೋಗಿಗಳಿಗೆ ದೊಡ್ಡ ಉದ್ಯೋಗವಾಗಿಯೂ ಕಂಡಿದೆ. ಆದರೆ ಇಂತಹ ದುಸ್ಥಿತಿಯನ್ನು ಬಳಸಿಕೊಂಡು ಐಟಿ ವಲಯದ ಕಾರ್ಮಿಕರನ್ನು ಇಕ್ಕಟ್ಟಿಗೆ ಸಿಕ್ಕಿಸಿ ದಿನವಿಡೀ ದುಡಿಯುವ ಯಂತ್ರಗಳಾಗಿ ಪರಿವರ್ತಿಸುವ ಲೆಕ್ಕಾಚಾರ ನಿಜವಾದ ಅರ್ಥದಲ್ಲಿ ಜೀವವಿರೋಧಿ. ಹಣದಿಂದ ಬದುಕನ್ನು ಅಳೆಯಲು ಹೋಗಬಾರದು. ಹಣ ಬೇಕು. ಆದರೆ, ಹಣದಿಂದಲೇ ಎಲ್ಲವನ್ನೂ ಪಡೆಯುವುದು ಅಸಾಧ್ಯ. ಅರ್ಥಶಾಸ್ತçಜ್ಞ ಆಲ್ಫೆçಡ್ ಮಾರ್ಷಲ್ ಹೇಳುವಂತೆ ಹಣ ಎಂದರೆ ಏನನ್ನು ನಾವು ಬಯಸುತ್ತೇವೋ ಅದನ್ನು ಪಡೆಯುವ ಸಾಧನವಷ್ಟೆ. ಅದೇ ಸರ್ವಸ್ವ ಆಗಕೂಡದು.
ಕನ್ನಡಿಗರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಪ್ರಾಧಾನ್ಯತೆ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ನಿರ್ಧಾರ ನನೆಗುದಿಗೆ ಬಿದ್ದ ಒಂದು ವಾರದ ಬೆನ್ನ ಹಿಂದೆಯೇ ಐಟಿ ಉದ್ಯೋಗಿಗಳಿಗೆ ಹತ್ತು ಗಂಟೆಯ ಬದಲು ಹದಿನಾಲ್ಕು ಗಂಟೆ ಉದ್ಯೋಗದ ಅವಧಿಯನ್ನು ವಿಸ್ತರಿಸಬೇಕೆಂಬ ಪ್ರಸ್ತಾಪದ ಪರಾಮರ್ಶೆಯಾಗುತ್ತಿರುವುದು ಪರಿಸ್ಥಿತಿಯ ಕ್ರೂರ ಅಣಕ.