ಐಪಿಎಲ್‌ನಿಂದ ಶಮಿ ಔಟ್
ನವದೆಹಲಿ: ೨೦೨೩ನೇ ಐಪಿಎಲ್ ಆವೃತ್ತಿಯ ಅತ್ಯಧಿಕ ವಿಕೆಟ್ ಸರದಾರ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ವೇಗಿ ಮೊಹಮ್ಮದ್ ಶಮಿ ೨೦೨೪ರ ಐಪಿಎಲ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಶಮಿ, ಇನ್ನೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ವೇಗಿ ಆಗಿರುವ ಮೊಹಮ್ಮದ್ ಶಮಿ ಕಳೆದ ಆವೃತ್ತಿಯಲ್ಲಿ ೨೮ ವಿಕೆಟ್‌ಗಳನ್ನು ಕಬಳಿಸಿ, ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ, ಮುಂಬರುವ ಐಪಿಎಲ್‌ನಲ್ಲಿ ಹಾಲಿ ರನ್ನರ್‌ಅಪ್ ತಂಡ ಗುಜರಾತ್ ಟೈಟನ್ಸ್‌ಗೆ ಭಾರಿ ಪೆಟ್ಟು ಬಿದ್ದಂತಾಗಿದೆ.
ಮೊಹಮ್ಮದ್ ಶಮಿ ಅಲಭ್ಯತೆ ಹಿನ್ನೆಲೆಯಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿ ಬೌಲಿಂಗ್ ಪಡೆ ಕಳೆಗುಂದಿದೆ. ಕಳೆದ ಆವೃತ್ತಿಯಲ್ಲಿ ಶಮಿ ಜೊತೆಗೆ ವೇಗಿ ಮೋಹಿತ್ ಶರ್ಮಾ ಹಾಗೂ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ತಲಾ ೨೭ ವಿಕೆಟ್ ಪಡೆದುಕೊಂಡಿದ್ದರು. ಆದರೆ, ಈ ಬಾರಿ ಶಮಿ ಅಲಭ್ಯರಾಗುವ ಕಾರಣ, ಗುಜರಾತ್ ಬೌಲಿಂಗ್ ಪಡೆಗೆ ದೊಡ್ಡ ಸವಾಲು ಎದುರಾಗಲಿದೆ.
ಗುಜರಾತ್ ಟೈಟನ್ಸ್ಗೆ ೨೦೨೪ರ ಐಪಿಎಲ್‌ಗೂ ಮುನ್ನವೇ ಇದು ಎರಡನೇ ಪೆಟ್ಟಾಗಿದೆ. ಇದಕ್ಕೂ ಮುನ್ನ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಆಟಗಾರರ ಹರಾಜಿಗೆ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಸದ್ಯ ಮುಂಬರುವ ಆವೃತ್ತಿಯಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ.