ಐಪಿಎಲ್ ಮೆಗಾ ಆಕ್ಷನ್: ಮೊದಲ ದಿನ ಆಟಗಾರರ ಭರ್ಜರಿ ಖರೀದಿ
ಜೆಡ್ಡಾ (ಯುಎಇ): ೨೦೨೫ರ ಐಪಿಎಲ್ ಮೆಗಾ ಆಕ್ಷನ್‌ನ ಮೊದಲ ದಿನ ಆಟಗಾರರ ಭರ್ಜರಿ ಖರೀದಿ ನಡೆದಿದ್ದು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ರಿಶಬ್ ಪಂತ್ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಐಪಿಎಲ್ ೨೦೨೫ರ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ) ಬರೋಬ್ಬರಿ ೨೭ ಕೋಟಿಗೆ ರಿಷಬ್ ಪಂತ್‌ರನ್ನು ಖರೀದಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಅಷ್ಟೇ ಅಲ್ಲದೇ, ಅಬ್ಬರದ ಸೌತ್‌ಪಾವ್ ಶ್ರೇಯಸ್ ಅಯ್ಯರ್‌ರನ್ನು ಕೂಡ ಪಂಜಾಬ್ ಕಿಂಗ್ಸ್ ೨೬.೭೫ ಕೋಟಿಗೆ ಖರೀದಿಸಿದ್ದು, ಈ ಐಪಿಎಲ್‌ನ ಅತ್ಯಂತ ದುಬಾರಿ ಅಟಗಾರರಾಗಿ ಈ ಇಬ್ಬರು ಕಾಣಿಸಿಕೊಂಡಿದ್ದಾರೆ. ಇನ್ನು ಕೆಕೆಆರ್ ತಂಡ ಕೂಡ ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ ೨೩.೭೫ ಕೋಟಿಗೆ ಖರೀದಿಸಿದೆ.
ಈ ವರ್ಷದ ಆರಂಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಚಾಂಪಿಯನ್ ಆಗಿಸಿದ್ದ ಶ್ರೇಯಸ್‌ರನ್ನು ಖರೀದಿಸಲು ಬಿರುಸಿನ ಬಿಡ್ಡಿಂಗ್ ಕಂಡು ಬಂತು. ಆದರೆ, ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡ ೨೬.೭೫ ಕೋಟಿ ರೂ.ಗಳನ್ನು ಚೆಲ್ಲಿದರು. ಶ್ರೇಯಸ್ ಅವರನ್ನು ಕೇವಲ ೨೫ ಲಕ್ಷಗಳಿಂದ ಮೀರಿಸಿದ ಪಂತ್ ಅತ್ಯಂತ ದುಬಾರಿ ಆಟಗಾರರಾದರು. ಈ ಇಬ್ಬರೂ ಆಟಗಾರರು ತಮ್ಮ ಹಿಂದಿನ ಫ್ರಾಂಚೈಸಿಗಳೊಂದಿಗೆ ಕೆಲ ಕಾರಣಾಂತರಗಳಿಂದ ಬೇರ್ಪಟ್ಟು ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಮೆಗಾ ಆಕ್ಷನ್‌ನ ಆರಂಭದಲ್ಲಿ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಅನ್ನು ೨೦.೭೫ ಕೋಟಿ ನೀಡಿ ಉಳಿಸಿಕೊಳ್ಳಲು ಯತ್ನಿಸಿತು. ಆದರೆ, ಎಲ್‌ಎಸ್‌ಜಿ ಫ್ರಾಂಚೈಸಿಗಳು ಬಿಡ್ಡಿಂಗ್‌ನಲ್ಲಿ ೨೭ ಕೋಟಿಗೆ ಏರಿಸಿತು. ಹಾಗಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂತ್‌ರನ್ನು ಅಷ್ಟು ಮೊತ್ತಕ್ಕೆ ಖರೀದಿಸದೇ ಸುಮ್ಮನಾಯಿತು. ಇನ್ನು ೨ನೇ ಸೆಟ್ ಆಟಗಾರರಲ್ಲೂ ತೀವ್ರ ಪೈಪೋಟಿ ಕಂಡು ಬಂದಿತು. ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಸ್ಪಿನ್ ಬೌಲರ್ ಯೆಜುವೇಂದ್ರ ಚಹಲ್ ೧೮ ಕೋಟಿಗೆ ಬಿಡ್ ಆದರು.