For the best experience, open
https://m.samyuktakarnataka.in
on your mobile browser.

ಐವನ್ ವಿರುದ್ಧ ಪ್ರಕರಣ ದಾಖಲಿಗೆ ೨೪ ತಾಸು ಗಡುವು ಜಿಲ್ಲೆಯಾದ್ಯಂತ ಹೋರಾಟದ ಎಚ್ಚರಿಕೆ

07:44 PM Aug 21, 2024 IST | Samyukta Karnataka
ಐವನ್ ವಿರುದ್ಧ ಪ್ರಕರಣ ದಾಖಲಿಗೆ ೨೪ ತಾಸು ಗಡುವು ಜಿಲ್ಲೆಯಾದ್ಯಂತ ಹೋರಾಟದ ಎಚ್ಚರಿಕೆ

ಮಂಗಳೂರು: ಕಾಂಗ್ರೆಸ್ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿ ಠಾಣಾ ಮುತ್ತಿಗೆ ಬದಲು ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಬುಧವಾರ ಮತ್ತೆ ಗಡುವು ವಿಧಿಸಿದೆ. ಮುಂದಿನ ೨೪ ಗಂಟೆಯೊಳಗೆ ಎಫ್‌ಐಆರ್ ದಾಖಲಿಸದೇ ಇದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದೆ.

ಪ್ರಚೋದನಕಾರಿ ಭಾಷಣ ವಿರುದ್ಧ ಐವನ್ ಡಿಸೋಜಾ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿ ಯುವ ಮೋರ್ಚಾ ವತಿಯಿಂದ ಬರ್ಕೆ ಪೊಲೀಸರಿಗೆ ಮಂಗಳವಾರ ದೂರು ನೀಡಲಾಗಿತ್ತು. ಅಲ್ಲದೆ ೪೮
ಗಂಟೆಗಳೊಳಗೆ ದೂರು ದಾಖಲಿಸದಿದ್ದರೆ, ಠಾಣೆಗೆ ಮುತ್ತಿಗೆ ಹಾಕುವುದಾಗಿ ಯುವ ಮೋರ್ಚಾ ಮುಖಂಡರು ಹೇಳಿದ್ದರು.
ಮುತ್ತಿಗೆ ಇಲ್ಲ : ಬುಧವಾರ ಮಧ್ಯಾಹ್ನ ವರೆಗೂ ಬರ್ಕೆ ಠಾಣೆ ಪೊಲೀಸರು ಐವನ್ ಡಿಸೋಜಾ ವಿರುದ್ಧ ಕೇಸು ದಾಖಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಯುವ ಮೋರ್ಚಾ ಸಂಜೆ ಠಾಣೆಗೆ ಮುತ್ತಿಗೆ ನಡೆಸುವುದಾಗಿ ತಿಳಿಸಿತ್ತು. ಅದರಂತೆ ನಿಗದಿತ ಅರ್ಧ ಗಂಟೆ ಬಳಿಕ ಯುವ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬರ್ಕೆ ಠಾಣೆಗೆ ಆಗಮಿಸಿದರು. ಆದರೆ ಠಾಣೆಗೆ ಮುತ್ತಿಗೆ ಬದಲು ಮತ್ತೊಮ್ಮೆ ಮಾತುಕತೆ ನಡೆಸಲು ಆಗಮಿಸಿರುವುದಾಗಿ ತಿಳಿಸಿದರು. ಬಳಿಕ ಠಾಣೆಯೊಳಗೆ ತೆರಳಿ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಜೊತೆ ಮಾತುಕತೆ ನಡೆಸಿದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮಾತನಾಡಿ, ಯುವ ಮೋರ್ಚಾದಿಂದ ಐವನ್ ಡಿಸೋಜಾ ವಿರುದ್ಧ ದೂರು ನೀಡಿ ೪೮ ಗಂಟೆ ಕಳೆದಿದೆ. ಠಾಣೆಯಿಂದ ಹಿಂಬರಹ ನೀಡಿದ್ದು ಬಿಟ್ಟರೆ ಎಫ್‌ಐಆರ್ ದಾಖಲಾಗಿಲ್ಲ. ಐವನ್ ಡಿಸೋಜಾ ಅವರು ಪ್ರಚೋದನಾಕಾರಿ ಮಾತನಾಡಿದ ಕಾರಣ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಸ್‌ಗೆ ಕಲ್ಲು ತೂರಾಟದಂತಹ ಘಟನೆಗಳು ನಡೆದಿವೆ. ಕಲ್ಲು ತೂರಾಟ ಮಾಡಿದವರನ್ನು ಕೇವಲ ಠಾಣಾ ಜಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಇದು ಅಹಿತಕರ ಘಟನೆಗೆ ನಡೆಸಿದವರ ಮೇಲೆ ಪೊಲೀಸರು ಏನೂ ಕ್ರಮಕೈಗೊಳ್ಳುತ್ತಿಲ್ಲ ಎಂಬ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೂಡಲೇ ಐವನ್ ಡಿಸೋಜಾ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಪ್ರತಾಪ್ಸಿಂಗ್ ಥೋರಟ್, ಕೇಸು ದಾಖಲಿಸಲು ಕಾನೂನು ತಜ್ಞರ ಸಲಹೆ ಪಡೆಯಬೇಕು ಎಂದರು. ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಶೇಟ್ ಮಾತನಾಡಿ, ಪೊಲೀಸರ ಎದುರಿನಲ್ಲೇ ಐವನ್ ಡಿಸೋಜಾ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಾಕ್ಷ್ಯ ಕೂಡ ಪೊಲೀಸರಲ್ಲಿ ಇದೆ. ಆದರೆ ಮೇಲಿನವರ ಒತ್ತಡದಿಂದಾಗಿ ಕೇಸು ದಾಖಲಿಸುತ್ತಿಲ್ಲ ಎಂದು ದೂರಿದರು.
ಪ್ರಕರಣಗಳು : ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಐವನ್ ಡಿಸೋಜಾ ಮೇಲೆ ಬರ್ಕೆ ಠಾಣೆಯಲ್ಲಿ ನಾನು ಮಾತ್ರವಲ್ಲ ಶಹನವಾಜ್, ಅಖಿಲೇಶ್ ಶೆಟ್ಟಿ, ಅಕ್ಷಿತ್ ಶೆಟ್ಟಿ ಸೇರಿ ನಾಲ್ಕು ಮಂದಿ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಠಾಣೆ ಸೇರಿದಂತೆ ಸುಮಾರು ೩೪ಕ್ಕೂ ಅಧಿಕ ಕೇಸುಗಳು ಯುವ ಮೋರ್ಚಾದಿಂದ ದಾಖಲಾಗಿದೆ. ಆ.೨೨ರ ಸಂಜೆಯೊಳಗೆ ಬರ್ಕೆ ಠಾಣೆಯಲ್ಲಿ ಐವನ್ ಡಿಸೋಜಾ ಮೇಲೆ ಕೇಸು ದಾಖಲಿಸದಿದ್ದರೆ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಕಾನೂನು ಎಲ್ಲರಿಗೂ ಒಂದೇ ಎನ್ನುವ ಪೊಲೀಸರು ಕಾಂಗ್ರೆಸಿಗರಿಗೆ ಪ್ರತ್ಯೇಕ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಠಾಣೆಯಲ್ಲಿ ಮಾತುಕತೆ ವೇಳೆ ನಿಯೋಗದಲ್ಲಿ ಯುವ ಮೋರ್ಚಾ ಮುಖಂಡರಾದ ನಿಶಾಂತ್ ಪೂಜಾರಿ, ಸಾಕ್ಷಾತ್ ಶೆಟ್ಟಿ, ರಕ್ಷಿತ್ ಕೊಟ್ಟಾರಿ, ಅವಿನಾಶ್ ಸುವರ್ಣ, ಜೋಯಲ್ ಮೆಂಡೋನ್ಸಾ ಮೊದಲಾದವರಿದ್ದರು. ಯುವ ಮೋರ್ಚಾ ಮುತ್ತಿಗೆ ಕರೆ ಹಿನ್ನೆಲೆಯಲ್ಲಿ ಬರ್ಕೆ ಠಾಣೆಯ ಸುತ್ತಮುತ್ತ ಬಿಗು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು

Tags :