ಒಂಟಿ ಮಹಿಳೆಯ ಮಾನಸಿಕ ತೊಳಲಾಟ…
ಚಿತ್ರ: ಅಂಶು
ನಿರ್ಮಾಣ: ಗ್ರಹಣ ಎಲ್.ಎಲ್.ಪಿ
ತಾರಾಗಣ: ನಿಶಾ ರವಿಕೃಷ್ಣನ್ ಇತರರು.
ರೇಟಿಂಗ್ಸ್: ೩
ಜಿ.ಆರ್.ಬಿ
ಒಂದೇ ಪಾತ್ರ. ಮತ್ತಷ್ಟು ಪಾತ್ರಗಳ ಚಿತ್ರಣ ಅಸ್ಪಷ್ಟ…. ಆದರೆ ಅದಕ್ಕೆ ಕಾರಣಗಳು ಮಾತ್ರ ಸ್ಪಷ್ಟ. ಇದು ಮಾಮೂಲಿ ಧಾಟಿಯ ಸಿನಿಮಾ ಅಲ್ಲ ಎಂಬುದು ಶುರುವಾದ ಕೆಲವೇ ನಿಮಿಷಗಳಲ್ಲಿ ಗೋಚರವಾಗುತ್ತದೆ. ಹೀಗಾಗಿ ಆ್ಯಕ್ಷನ್, ರೊಮ್ಯಾನ್ಸ್, ಕಾಮಿಡಿ ಇತ್ಯಾದಿಗಳಿಗೆಲ್ಲ ಇಲ್ಲಿ ಜಾಗವಿಲ್ಲ. ಒಂಟಿ ಮಹಿಳೆಯ ಒಂದಷ್ಟು ವೇದನೆಗಳು, ಸಮಾಜದ ಕೆಲವು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ, ಕೆಲವೊಂದು ವಿಷಯಗಳನ್ನು ಹೇಳಿಕೊಳ್ಳಲಾಗದೇ ಒಳಗೊಳಗೇ ನರಳುವ ಅಂಶವೇ ಅಂಶು ಸಿನಿಮಾದ ಮೂಲಕಥನ.
ಈ ಸಿನಿಮಾ ಒಂದು ಮನೋವ್ಯಾದಿಗೆ ತುತ್ತಾದ ಮಹಿಳೆಯ ಅಂತರಂಗದ ಕಥನ. ಸಮಾಜದಲ್ಲಿ ಆಕೆ ಎದುರಿಸುವ ಕ್ಲಿಷ್ಟ ಸವಾಲುಗಳು ಮತ್ತು ಅವುಗಳ ಜತೆಗಿನ ಸಂಘರ್ಷದ ಕಥೆಯೇ ಸಿನಿಮಾದ ಮೂಲದ್ರವ್ಯ. ಮಹಿಳೆಯ ವೈಯಕ್ತಿಕ ಬದುಕು, ಸಾಂಸಾರಿಕ ಜೀವನ, ಹೆಣ್ಣಿನ ಮೇಲಿನ ದಬ್ಬಾಳಿಕೆ, ಗಂಡನ ಕಿರುಕುಳ, ಜಾತಿ ವ್ಯವಸ್ಥೆ, ಅತ್ಯಾಚಾರದ ಯಾತನೆ, ಹೆಣ್ಣು ಭ್ರೂಣ ಹತ್ಯೆಯ ನೋವು… ಹೀಗೆ ಹಲವಾರು ವಿಚಾರಗಳನ್ನು ಒಂದೇ ಸಿನಿಮಾದಲ್ಲಿ ದಾಟಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಎಂ.ಸಿ.ಚನ್ನಕೇಶವ.
ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ಇಷ್ಟಪಡುವವರಿಗೆ… ಅದರಲ್ಲೂ ಒಂದೇ ಪಾತ್ರ ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗುವುದನ್ನು ಮೆಚ್ಚಿಕೊಳ್ಳುವವರಿಗೆ `ಅಂಶು' ಆಪ್ತವಾಗುವುದರಲ್ಲಿ ಅನುಮಾನವಿಲ್ಲ. ಅಂದಹಾಗೆ ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿರುವುದು ನಿಶಾ ರವಿಕೃಷ್ಣನ್. ತಮ್ಮ ನಟನೆಯಿಂದಲೇ ಸಾಕಷ್ಟು ವಿಷಯಗಳನ್ನು ಮನಮುಟ್ಟುವಂತೆ ಹೇಳಿದ್ದಾರೆ ನಿಶಾ. ಇದೇ ಸಿನಿಮಾದ ಪ್ಲಸ್ ಪಾಯಿಂಟ್. ಕನ್ನಡದಲ್ಲಿ ಈ ರೀತಿಯ ಪ್ರಯೋಗ ತುಂಬಾ ವಿರಳವೇ ಸರಿ.
ತೆರೆಯ ಮೇಲೆ ಖಾಲಿ ಖಾಲಿ… ಎಂದು ಭಾಸವಾಗದಂತೆ ತಾಂತ್ರಿಕ ತಂಡ ಕೆಲಸ ಮಾಡಿದೆ. ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಜಿ.ವಿ.ಪ್ರಕಾಶ್, ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ಸಂಯೋಜನೆ, ರಿಕಿ ಮಾರ್ಟಿನ್ ಸಂಕಲನ ಸಿನಿಮಾಕ್ಕೆ ಪೂರಕವಾಗಿದೆ.