ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

11:23 AM Dec 09, 2023 IST | Samyukta Karnataka

ತಮಿಳುನಾಡಿನಲ್ಲಿ ಪ್ರವಾಹ ಬಂತು ಎಂದ ಕೂಡಲೇ ಕೇಂದ್ರ ೪೫೦ ಕೋಟಿ ರೂ. ಬಿಡುಗಡೆ ಮಾಡುತ್ತದೆ. ನಮ್ಮಲ್ಲಿ ಬರಗಾಲ ಬಂದು ಹಲವು ತಿಂಗಳು ಕಳೆದಿವೆ. ಒಂದು ನಯಾಪೈಸೆ ಪರಿಹಾರ ಇಲ್ಲ. ಈ ತಾರತಮ್ಯ ಏಕೆ? ನಮ್ಮ ಸಂಸದರ ಮೌನ ಏಕೆ?

ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಎರಡೂ ಒಂದೇ ಇರಬೇಕು. ಎರಡೂ ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷಗಳೇ ಅಧಿಕಾರದಲ್ಲಿವೆ. ಬಿಜೆಪಿ ಕರ್ನಾಟಕದಲ್ಲಿ ಆಡಳಿತ ಕಳೆದುಕೊಂಡಿತು. ತಮಿಳುನಾಡಿನಲ್ಲಿ ಆಡಳಿತಕ್ಕೆ ಬಂದೇ ಇಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ತಮಿಳುನಾಡಿಗೆ ಹೆದರುತ್ತದೆಯೇ? ಅಲ್ಲಿ ಪ್ರವಾಹ ಬಂದಕೂಡಲೇ ಕೇಂದ್ರ ರಕ್ಷಣಾ ಸಚಿವರು ವೈಮಾನಿಕ ಸಮೀಕ್ಷೆ ನಡೆಸುತ್ತಾರೆ. ಪ್ರಧಾನಿ ದೂರವಾಣಿ ಮೂಲಕ ತಮಿಳುನಾಡು ಸಿಎಂ ಜತೆ ಮಾತನಾಡಿದ್ದಲ್ಲದೆ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ಕೊಡುತ್ತಾರೆ. ೪೫೦ ಕೋಟಿ ರೂ. ಪರಿಶೀಲನೆಗೆ ಮುನ್ನವೇ ನೀಡುತ್ತಾರೆ. ಇದು ತಪ್ಪು ಎಂದು ಯಾರೂ ಹೇಳುವುದಿಲ್ಲ. ಪ್ರವಾಹಕ್ಕೆ ತುರ್ತು ಪರಿಹಾರ ಅಗತ್ಯ.
ಆದರೆ ಕರ್ನಾಟಕದಲ್ಲಿ ಬರಗಾಲ ಬಂದು ಹಲವು ತಿಂಗಳೇ ಕಳೆದಿದ್ದರೂ ಒಂದು ನಯಾಪೈಸೆ ಪರಿಹಾರ ಬಿಡುಗಡೆಯಾಗಿಲ್ಲ. ನಮ್ಮ ಸಂಸದರು ಸಂಸತ್ತಿನಲ್ಲಿ ಏನು ಮಾಡುತ್ತಿದ್ದಾರೋ ತಿಳಿಯದು. ಸಂಸತ್ತಿನಲ್ಲಿ ಕನಿಷ್ಠ ಧರಣಿ ನಡೆಸಲೂ ಆಗದ ಸ್ಥಿತಿಯಲ್ಲಿ ನಮ್ಮ ಸಂಸದರು ಇದ್ದಾರೆಯೇ? ರಾಜ್ಯ ಸರ್ಕಾರ ಕಾನೂನುಬದ್ಧವಾಗಿ ಎಲ್ಲ ಕೆಲಸವನ್ನೂ ಕೈಗೊಂಡಿದೆ. ಬರಗಾಲದ ಪರಿಸ್ಥಿತಿಯನ್ನು ವಿವರಿಸಿ ವರದಿಯನ್ನು ಸಲ್ಲಿಸಲಾಗಿದೆ. ಕೇಂದ್ರ ಸಚಿವರನ್ನು ನಮ್ಮ ಸಚಿವರು ಭೇಟಿಯಾಗಿ ಪರಿಹಾರಕ್ಕಾಗಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ, ಹಣಕಾಸು ಸಚಿವೆ ನಮ್ಮ ರಾಜ್ಯವನ್ನೇ ಪ್ರತಿನಿಧಿಸುವವರು. ರಾಜ್ಯ ಸರ್ಕಾರದ ವರದಿಗೆ ಎಜಿ ಸಹಿ ಮಾಡಿಲ್ಲ ಎಂದು ಕುಂಟು ನೆಪ ಹೇಳುತ್ತಿದ್ದಾರೆ. ತಮಿಳುನಾಡಿಗೆ ತುರ್ತು ಹಣ ಬಿಡುಗಡೆ ಮಾಡುವಾಗ ಯಾವ ನಿಯಮವನ್ನು ಪಾಲಿಸಿದ್ದಾರೋ ಅದೇ ನಿಯಮ ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲವೆ? ಕರ್ನಾಟಕ ಮೊದಲಿನಿಂದಲೂ ಒಕ್ಕೂಟ ವ್ಯವಸ್ಥೆಗೆ ಬೆಲೆ ಕೊಡುತ್ತ ಬಂದಿದೆ. ಹಾಗೆ ನೋಡಿದರೆ ತಮಿಳುನಾಡು ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವ ಧೋರಣೆ ತೋರಿತ್ತು. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಗೌರವ ಕೊಡುವುದಿಲ್ಲ ಎಂದರೆ ಕರ್ನಾಟಕವೂ ಅದೇರೀತಿ ನಡೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹಿಂದೆ ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಸಾಧ್ಯವಾಗಲಿಲ್ಲ ಎಂದು ಅಂಬರೀಷ್ ರಾಜೀನಾಮೆ ನೀಡಿ ಮತ್ತೆ ದೆಹಲಿ ಕಡೆ ತಿರುಗಿ ನೋಡಲಿಲ್ಲ. ಆ ಗಟ್ಟಿ ಮನಸ್ಸನ್ನು ನಮ್ಮ ರಾಜ್ಯವನ್ನು ಈಗ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ಮಾಡಬೇಕು. ರಾಜ್ಯದ ಹಿತಕ್ಕಿಂತ ಅಧಿಕಾರ ಮುಖ್ಯವಲ್ಲ. ಇದೆಲ್ಲ ಜನರು ಕೊಟ್ಟ ಅಧಿಕಾರ ಎಂಬುದನ್ನು ಮರೆಯಬಾರದು. ಇನ್ನು ಕೆಲವೇ ತಿಂಗಳಲ್ಲಿ ಇದೇ ಕೇಂದ್ರ ಸಚಿವರು ಜನರ ಮುಂದೆ ಮತ ಕೇಳಬೇಕಾಗುತ್ತದೆ. ಆಗ ಯಾವ ನೈತಿಕತೆ ಅವರಿಗಿರುತ್ತದೆ ಎಂಬುದನ್ನು ಈಗಲೇ ತಿಳಿದುಕೊಳ್ಳುವುದು ಒಳಿತು. ಕನ್ನಡಿಗರು ಸ್ವಾಭಿಮಾನಿಗಳು. ಅವರು ಯಾರ ಕೃಪೆಯಿಲ್ಲದೆ ಬದುಕಬಲ್ಲರು ಎಂಬುದು ಕೇಂದ್ರದಲ್ಲಿರುವವರು ತಿಳಿದುಕೊಳ್ಳಬೇಕು. ಇಲ್ಲವೆ ತಿಳಿಸುವ ಕಾಲ ಬರಲಿದೆ.ಜನರ ತಾಳ್ಮೆಗೂ ಮಿತಿ ಇದೆ. ಬರಗಾಲ ಎದುರಿಸುವ ಶಕ್ತಿ ನಮಗೂ ಇದೆ. ಕೇಂದ್ರದ ನೆರವು ಕಾನೂನು ಬದ್ಧವಾಗಿ ಬರಬೇಕು. ಅದು ಯಾರ ಜೇಬಿನಿಂದ ಬರುವುದಲ್ಲ. ಪ್ರಧಾನಿಯ ಔದಾರ್ಯ ಅಥವಾ ಉಪಕಾರ ಇದಕ್ಕೆ ಬೇಕಿಲ್ಲ. ಜನ ಕಷ್ಟದಲ್ಲಿದ್ದಾಗ ಅವರ ನೆರವಿಗೆ ಬರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ. ಸರ್ಕಾರಗಳು ತನ್ನ ಕರ್ತವ್ಯ ನಿರ್ವಹಿಸದೇ ಇದ್ದಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಒಮ್ಮೆ ಎಚ್ಚರಿಕೆ ನೀಡಿದ್ದಾರೆ. ಅದರಿಂದ ಎಚ್ಚರಗೊಂಡು ನಡೆದರೆ ಒಳಿತು. ಇಲ್ಲದಿದ್ದಲ್ಲಿ ವಿಧಾನಸಭೆ ಚುನಾವಣೆಯಲ್ಲಾದ ಗತಿಯೇ ಲೋಕಸಭೆಯಲ್ಲೂ ಆದೀತು. ನಮಗೇನೂ ಕೇಂದ್ರದ ವಿಶೇಷ ಒಲವು ಬೇಕಿಲ್ಲ. ಎಲ್ಲ ರಾಜ್ಯಗಳಿಗೆ ಕಾನೂನುಬದ್ಧವಾಗಿ ನೀಡುವ ನೆರವನ್ನೇ ನೀಡಿದರೆ ಸಾಕು. ನಮ್ಮ ರಾಜ್ಯದ ಆರ್ಥಿಕತೆಯೂ ಸಾಕಷ್ಟು ಉತ್ತಮವಾಗಿದೆ. ಕೇಂದ್ರಕ್ಕೆ ಎಲ್ಲ ರೀತಿಯಲ್ಲಿ ತೆರಿಗೆ ಸಲ್ಲಿಸುತ್ತಿದ್ದೇವೆ. ನಮ್ಮಲ್ಲಿರುವ ಸಾಫ್ಟ್‌ವೇರ್‌ ಕಂಪನಿಗಳಿಂದ ವಿದೇಶಿ ವಿನಿಮಯ ಬರುತ್ತಿದೆ ಎಂಬುದನ್ನು ಮರೆಯಬಾರದು. ನಮ್ಮ ಸಂಸದರು ಇದನ್ನು ಕೇಂದ್ರಕ್ಕೆ ತಿಳಿ ಹೇಳಬೇಕು. ಅಲ್ಲಿ ತಲೆಯಾಡಿಸಿ ಇಲ್ಲಿ ಬಂದು ವೀರಾವೇಶದ ಮಾತುಗಳನ್ನಾಡಿದರೆ ಜನ ಮರುಳಾಗುವುದಿಲ್ಲ.

Next Article