ಒಂದು ಹೊಟ್ಟೆಯ ಕಥೆ…
ಚಿತ್ರ: ಲಾಫಿಂಗ್ ಬುದ್ಧ
ನಿರ್ದೇಶನ: ಭರತ್ ರಾಜ್
ನಿರ್ಮಾಣ: ರಿಷಭ್ ಶೆಟ್ಟಿ ಫಿಲಂಸ್
ತಾರಾಗಣ: ಪ್ರಮೋದ್ ಶೆಟ್ಟಿ, ದಿಗಂತ್, ತೇಜು ಬೆಳವಾಡಿ, ಸುಂದರ್ ರಾಜ್ ಮುಂತಾದವರು.
ರೇಟಿಂಗ್ಸ್: 3
ಗಣೇಶ್ ರಾಣೆಬೆನ್ನೂರು
ಪೊಲೀಸರಿಗೆ ಗಡ್ಡ ಮತ್ತು ಹೊಟ್ಟೆ ಇದ್ದರೆ ಅದು ಅಶಿಸ್ತು ಎಂಬುದು ಬಹುತೇಕರ ವಾದ. ಅದಕ್ಕೆ ತದ್ವಿರುದ್ಧ ಎಂಬಂತೆ ಸಾಕಷ್ಟು ಪೊಲೀಸರು ಹೊಟ್ಟೆ ಬಿಟ್ಟುಕೊಂಡೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ‘ಲಾಫಿಂಗ್ ಬುದ್ಧ’ ಕೂಡ ಹೊಟ್ಟೆಯ ಸುತ್ತ ಸುತ್ತುವ ಕಥೆ-ವ್ಯಥೆ… ಇದರ ಜತೆಗೆ ಐವತ್ತು ಲಕ್ಷ ಹಣ ಲುಟಿಯಾದ ಸಂಗತಿಯೂ ಉಂಟು. ಎರಡರಲ್ಲಿ ಯಾವುದು ಹೈಲೈಟ್ ಎನ್ನುವುದಕ್ಕಿಂತ, ಅವೆರಡನ್ನೂ ಒಂದೇ ಸಮನಾಗಿ ತೂಗಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಭರತ್ ರಾಜ್.
ನಾಯಕ ಗೋವರ್ಧನ್ (ಪ್ರಮೋದ್ ಶೆಟ್ಟಿ) ನೀರೂರು ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಪೇದೆ. ಆತನೋ ಹೊಟ್ಟೆ ಡುಮ್ಮಣ್ಣ. ಆದರೆ ಕೆಲಸದಲ್ಲಿ ಭಾರಿ ಚುರುಕು. ಆತನ ಕೆಲಸಕ್ಕೆ ಹೊಟ್ಟೆಯೇ ‘ಅಡ್ಡಿ’ಯಾಗುತ್ತಿದೆ ಎಂಬ ವಿಷಯ ಅರಿವಿಗೆ ಬರುವ ಹೊತ್ತಿಗೆ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿ ಸಸ್ಪೆನ್ಷನ್ ಆರ್ಡರ್ ಎಂಬ ಗುಮ್ಮ ಹಿಡಿದು ನಿಂತಿರುತ್ತಾರೆ. ಗೋವರ್ಧನನಿಗೆ ಬೆಟ್ಟವೇ ತಲೆಯ ಮೇಲೆ ಬಿದ್ದಂತಾಗುತ್ತದೆ. ‘ಹೊಟ್ಟೆ’ಪಾಡಿಗಿದ್ದ ಕೆಲಸಕ್ಕೇ ಕುತ್ತು ಎದುರಾದಾಗ ಆತ ಮುಂದೇನು ಮಾಡುತ್ತಾನೆ ಎಂಬುದೇ ಚಿತ್ರದ ಉಳಿದ ಕಥೆ… ಗೋವರ್ಧನ ತೂಕ ಇಳಿಸುವ ವ್ಯಥೆ..!
ದೇಹ ದಂಡನೆಗೆ ಮುಂದಾಗುವ ನಾಯಕ, ಐವತ್ತು ಲಕ್ಷ ಹಣ ಲೂಟಿಯಾದ ಪ್ರಕರಣವನ್ನು ಬೇಧಿಸಲು ಮರಳಿ ಕೆಲಸಕ್ಕೆ ಹಾಜರಾಗಬೇಕಾಗುವ ಸಂದರ್ಭ ಸೃಷ್ಟಿಯಾಗಿರುತ್ತದೆ. ಒಂದೆಡೆ ಫ್ಯಾಮಿಲಿಯನ್ನೂ ಸಂಭಾಳಿಸುತ್ತಾ, ಕೆಲಸದಲ್ಲೂ ಭೇಷ್ ಎನಿಸಿಕೊಳ್ಳುವ ತವಕದಲ್ಲಿದ್ದ ಗೋವರ್ಧನ, ಒಂದು ಹಂತದಲ್ಲಿ ಸನ್ನಿವೇಶಗಳ ಬಲೆಗೆ ಸಿಕ್ಕು ನಲುಗುವಂತಾಗುತ್ತದೆ. ಅವೆಲ್ಲ ಸಿಕ್ಕುಗಳನ್ನು ಬಿಡಿಸಿಕೊಂಡು ಪಾರಾಗುತ್ತಾನಾ ಎಂಬುದೇ ಚಿತ್ರದ ಪ್ರಮುಖ ಅಂಶ.
ಆರಂಭದಿಂದಲೂ ತೆಳುಹಾಸ್ಯದ ಮೂಲಕ ನಗಿಸುವ ಪ್ರಯತ್ನ ಮಾಡುತ್ತಾರೆ ಪ್ರಮೋದ್ ಶೆಟ್ಟಿ. ಇದ್ದಷ್ಟು ಹೊತ್ತು ನಗುವಿಗೆ ಬರವಿಲ್ಲ. ತೇಜು ಬೆಳವಾಡಿ ಕಣ್ಣಲ್ಲೇ ಸೆಳೆಯುತ್ತಾರೆ. ಸುಂದರ್ ರಾಜ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.