For the best experience, open
https://m.samyuktakarnataka.in
on your mobile browser.

ಒಂದೇ ಕುಟುಂಬದ ಐವರ ಅಸ್ಥಿಪಂಜರ ಪತ್ತೆ

02:11 PM Dec 29, 2023 IST | Samyukta Karnataka
ಒಂದೇ ಕುಟುಂಬದ ಐವರ ಅಸ್ಥಿಪಂಜರ ಪತ್ತೆ

ಚಿತ್ರದುರ್ಗ: ನಗರದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರಗಳು ಪತ್ತೆಯಾಗಿದ್ದು ಇಡೀ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದೆ. ನಗರದ ಚಳ್ಳಕೆರೆ ಗೇಟ್ ಸಮೀಪದಲ್ಲಿ ಜಗನ್ನಾಥ ರೆಡ್ಡಿ ಎಂಬ ನಾಮಫಲಕ ಇರುವ ಪಾಳು ಮನೆಯಲ್ಲಿ ಐದು ಅಸ್ಥಿ ಪಂಜರಗಳು ಪತ್ತೆಯಾಗಿದ್ದು ಜನರು ಕುತೂಹಲದಿಂದ ನೋಡಲು ಬರುತ್ತಿದ್ದಾರೆ.
ನಿವೃತ್ತ ಕಾರ್ಯಪಾಲಕ ಅಭಿಯಂತರ ಜಗನ್ನಾಥ್‌ರೆಡ್ಡಿ(೮೫), ಪತ್ನಿ ಪ್ರೇಮಕ್ಕ(೭೦), ಮಗಳು ತ್ರಿವೇಣಿ, ಮಕ್ಕಳಾದ ಬಾಬುರೆಡ್ಡಿ ಅಲಿಯಾಸ್ ಕೃಷ್ಣರೆಡ್ಡಿ ಮತ್ತು ನರೇಂದ್ರರೆಡ್ಡಿ ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ಈ ವಿಷಯ ಬೆಳಕಿಗೆ ಬಂದಿದೆ.
ಕಳೆದ ನಾಲ್ಕೆದು ವರ್ಷಗಳಿಂದ ಮನೆಗೆ ಬೀಗ ಹಾಕಲಾಗಿತ್ತು. ಈ ಹಿಂದೆ ಸ್ಥಳೀಯರು ಮನೆಯಿಂದ ವಾಸನೆ ಬರುತ್ತಿದೆ ಎಂದು ಮಾತನಾಡಿಕೊಂಡು ಸುಮ್ಮನಾಗಿದ್ದರು. ಇತ್ತೀಚೆಗೆ ಯಾರೋ ಮನೆಯ ಕಿಟಕಿಯಿಂದ ಇಣುಕಿ ನೋಡಿದಾಗ ಅಸ್ಥಿಪಂಜರ ಇರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ರವಾನಿಸಿದರು. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಸ್ಥಿಪಂಜರಗಳು ಇರುವುದು ಖಚಿತವಾಗಿದೆ. ಶವಗಳು ಸಂಪೂರ್ಣ ಕೊಳೆತಿದ್ದು, ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇಬ್ಬರು ಹಾಸಿಗೆ ಮೇಲೆ ಮಲಗಿದ ರೀತಿಯಲ್ಲಿ ಅಸ್ಥಿ ಪಂಜರ ಇದ್ದರೆ ಉಳಿದವರ ಕುರ್ಚಿ ಮೇಲೆ ಕುಳಿತಿರುವ ಸ್ಥಿತಿಯಲ್ಲಿ ಅಸ್ಥಿಪಂಜರ ಇರುವುದರಿಂದ ಇದು ಸ್ವಯಂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಮೂಲತ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಜಗನ್ನಾಥರೆಡ್ಡಿ ಮತ್ತು ಕುಟುಂಬದ ಸದಸ್ಯರು ಯಾರೊಂದಿಗೆ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಮನೆಯಲ್ಲಿ ಆರ್ಥಿಕವಾಗಿ ಸ್ಥಿತಿವಂತರಾಗಿದ್ದು ತಾವಾಯಿತು ತಮ್ಮ ಕುಟುಂಬಕ್ಕೆ ಸೀಮಿತವಾಗಿದ್ದರಂತೆ. ಯಾರೆ ಆಹ್ವಾನ ಪತ್ರಿಕೆ ಕೊಡಲು ಬಂದರೆ ಮನೆ ಒಳಗೂ ಕರೆಯುತ್ತಿರಲಿಲ್ಲ. ಹೊರಗಡೆಯಿಂದ ಪಡೆದುಕೊಂಡು ಕಳುಹಿಸುತ್ತಿದ್ದರಂತೆ. ನಂತರ ಯಾವುದೇ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಜಗನ್ನಾಥ್‌ರೆಡ್ಡಿ ಮತ್ತು ಕುಟುಂಬದ ಸದಸ್ಯರು ಅನೂನ್ಯವಾಗಿದ್ದರು. ಈ ರೀತಿ ಅಸ್ಥಿ ಪಂಜರ ಪತ್ತೆಯಾದ ಮೇಲೆ ಇದರ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಯಾರಾದರೂ ಕೊಲೆ ಮಾಡಿದ್ದಾರೆಯೇ ಎನ್ನುವುದಕ್ಕೆ ಮನೆ ಬಾಗಿಲು ಒಳಗಿನಿಂದ ಲಾಕ್ ಆಗಿದೆ. ಇದು ಕುಟುಂಬದ ಸದಸ್ಯರುಗಳು ಸೇರಿಕೊಂಡು ತೀರ್ಮಾನ ತೆಗೆದುಕೊಂಡು ಸಾವಿನ ಮನೆಯ ಕದ ತಟ್ಟಿರುವ ಸಾಧ್ಯತೆಗಳಿವೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಎಫ್ ಎಸ್ ಎಲ್ ತಂಡದವರು ಕರೆಸಲಾಗಿತ್ತು. ಅಸ್ಥಿಪಂಜರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಇದು ಸ್ವಯಂ ಆತ್ಮಹತ್ಯೆಯೋ ಅಥವಾ ಕೊಲೆ ಎಂಬುದು ತಿಳಿಯಲಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನಾಗರಿಕರು ಜಮಾಯಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮನೆ ಮುಂದೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಯಾರನ್ನು ಬಿಡುತ್ತಿಲ್ಲ.
ಸ್ಥಳಕ್ಕೆ ದಾವಣಗೆರೆ ಪೂರ್ವವಲಯದ ಮಹಾ ನಿರೀಕ್ಷಕ ತ್ಯಾಗರಾಜ್, ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.