For the best experience, open
https://m.samyuktakarnataka.in
on your mobile browser.

ಒಡಿಶಾ-ಆಂಧ್ರ ಹೊಸ ಅಧ್ಯಾಯ

02:00 AM Jun 13, 2024 IST | Samyukta Karnataka
ಒಡಿಶಾ ಆಂಧ್ರ ಹೊಸ ಅಧ್ಯಾಯ

ಲೋಕಸಭೆ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಎರಡೂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆದು ಎರಡೂ ಕಡೆ ಸರ್ಕಾರಗಳು ಬದಲಾಗಿವೆ. ಒಡಿಶಾದಲ್ಲಿ ೨೪ ವರ್ಷಗಳ ನವೀನ್ ಪಟ್ನಾಯಕ್ ಆಡಳಿತ ಕೊನೆಗೊಂಡಿದೆ. ಬಿಜೆಪಿಯ ಮೋಹನ್ ಚರಣ್ ಮಾಝಿ ಆದಿವಾಸಿ ಪ್ರತಿನಿಧಿಯಾಗಿ ಮುಖ್ಯಮಂತ್ರಿ ಪದವಿಗೆ ಬಂದಿದ್ದಾರೆ. ಆಂಧ್ರದಲ್ಲಿ ಹಿರಿಯ ರಾಜಕಾರಣಿ ಚಂದ್ರಬಾಬು ನಾಯ್ಡು ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರೊಂದಿಗೆ ಚಿತ್ರನಟ ಪವನ್ ಕಲ್ಯಾಣ್ ಸಚಿವ ಪದವಿ ಒಪ್ಪಿಕೊಂಡಿದ್ದಾರೆ. ತೆಲುಗು ಮತ್ತು ತಮಿಳಿನ ಮೆಗಾಸ್ಟಾರ್‌ಗಳು ಪ್ರಮಾಣವಚನಕ್ಕೆ ಆಗಮಿಸಿದ್ದು, ಪ್ರಧಾನಿ ಅವರೆಲ್ಲರನ್ನೂ ಭೇಟಿಯಾಗಿರುವುದನ್ನು ನೋಡಿದರೆ ಬಿಜೆಪಿ ಇನ್ನೂ ದಕ್ಷಿಣದ ಮೇಲೆ ಹಿಡಿತ ಸಾಧಿಸುವ ಚಿಂತನೆ ಕೈಬಿಟ್ಟಿಲ್ಲ. ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೂ ಲೋಕಸಭೆ ಫಲಿತಾಂಶ ಪಕ್ಷದಲ್ಲೇ ಸಮಾಧಾನ ತಂದಿಲ್ಲ. ಈಗ ಕೇಂದ್ರ ಸರ್ಕಾರಕ್ಕೆ ನಿತೀಶ್ ಮತ್ತು ನಾಯ್ಡು ಬೆಂಬಲ ಬೇಕೆ ಬೇಕು. ಮೋದಿ ತಮ್ಮ ಕಾರ್ಯವಿಧಾನವನ್ನು ಬದಲಿಸಿಕೊಂಡಿದ್ದಾರೆ ಎಂಬುದಕ್ಕೆ ಅವರು ಆಂಧ್ರಕ್ಕೆ ಬಂದಿರುವುದೇ ಸಾಕ್ಷಿ. ಹಿಂದೆ ಬಿಜೆಪಿ ಏಕೈಕ ಪಕ್ಷವಾಗಿ ಲೋಕಸಭೆಯಲ್ಲಿ ಬಹುಮತ ಪಡೆದಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಮೈತ್ರಿ ಪಕ್ಷಗಳ ಬೆಂಬಲ ಬೇಕೇ ಬೇಕು. ಅದಕ್ಕಾಗಿ ಮೋದಿ, ಅಮಿತ್ ಶಾ, ಗಡ್ಕರಿ ಸೇರಿದಂತೆ ಗಣ್ಯರು ಆಂಧ್ರ ಬರುವುದು ಅನಿವಾರ್ಯ.
ಮುಂಬರುವ ದಿನಗಳಲ್ಲಿ ಆಂಧ್ರ ಮತ್ತು ಬಿಹಾರದ ಬೇಡಿಕೆಗಳನ್ನು ಈಡೇರಿಸುವುದು ಅಗತ್ಯವಾಗಲಿದೆ.
ನಿತೀಶ್ ಮತ್ತು ನಾಯ್ಡು ಚುನಾವಣೆ ಕಾಲದಲ್ಲಿ ನೀಡಿರುವ ಭರವಸೆಗಳನ್ನು ಕೈಬಿಡಲು ಬರುವುದಿಲ್ಲ. ಅದರಲ್ಲಿ ನಿತೀಶ್ ಜಾತಿ ಸಮೀಕ್ಷೆಯ ಬಗ್ಗೆ ಹೇಳಿರುವ ಮಾತು ಬಿಜೆಪಿಗೆ ನುಂಗಲಾರದ ತುತ್ತಾಗಲಿದೆ. ಅದರಲ್ಲೂ ಮುಸ್ಲಿಮರ ಬಗ್ಗೆ ನಿತೀಶ್ ತಮ್ಮ ನಿಲುವನ್ನು ಸಡಿಲಿಸುತ್ತಾರೆಯೇ ಎಂಬ ಕುತೂಹಲವೂ ಇದೆ. ಒಂದು ಮುಸ್ಲಿಂ ಮತ ಬ್ಯಾಂಕ್ ಮತ್ತೊಂದು ಕಡೆ ಬಿಜೆಪಿಯೊಂದಿಗೆ ನಿತೀಶ್ ಯಾವ ರೀತಿ ಸಮತೋಲನ ಕಾಯ್ದುಕೊಂಡು ಹೋಗುವರು ಎಂಬುದು ಕೂತೂಹಲದ ಪ್ರಶ್ನೆ. ನಿತೀಶ್ ಅವರ ಬೇಡಿಕೆಗಳನ್ನು ಯಾವ ರೀತಿ ಮೋದಿ ಪೂರೈಸುತ್ತಾರೆ ಎಂಬುದು ನೋಡಬೇಕಿದೆ. ಅದೇರೀತಿ ಚಂದ್ರ ಬಾಬುನಾಯ್ಡು ಆಂಧ್ರಕ್ಕೆ ವಿಶೇಷ ಆರ್ಥಿಕ ನೆರವು ಕೇಳುವುದಂತೂ ಗ್ಯಾರಂಟಿ. ಪೊಲ್ಲಾವರಂ ನೀರಾವರಿ ಯೋಜನೆಗೆ ಹಾಗೂ ಅಮರಾವತಿ ರಾಜಧಾನಿ ಅಭಿವೃದ್ಧಿಗೆ ಆರ್ಥಿಕ ನೆರವು ಮುಂಬರುವ ದಿನಗಳಲ್ಲಿ ಪ್ರಮುಖವಾಗಲಿದೆ. ಆಂಧ್ರದಲ್ಲಿ ಮೋದಿಗೆ ಸಾಥ್ ಕೊಡಲು ಪವನ್ ಕಲ್ಯಾಣ್ ಇದ್ದಾರೆ. ಬಿಹಾರದಲ್ಲಿ ಆ ರೀತಿ ನಿತೀಶ್‌ಗೆ ಲಗಾಮು ಹಾಕುವವರು ಯಾರೂ ಇಲ್ಲ. ಮೋದಿ ನಿತೀಶ್ ಮಾತುಗಳನ್ನು ತಳ್ಳಿ ಹಾಕುವುದು ಕಷ್ಟ. ಮೂವರೂ ನಾಯಕರಿಗೆ ಈಗ ಸಮನ್ವಯ ಅನಿವಾರ್ಯ. ಇಂಥ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ನಾಯಕರಿಗೆ ಮುಂದಿನ ದಿನಗಳು ಸುಲಭವಾಗಿಲ್ಲ. ಇದುವರೆಗೆ ಅವರು ಮೋದಿಯನ್ನು ಎಲ್ಲದ್ದಕ್ಕೂ ದೂಷಿಸುತ್ತ ಪ್ರಚಾರ ಪಡೆಯುತ್ತಿದ್ದರು. ಈಗ ಮೋದಿ ಕೈಗೊಂಡ ನಿರ್ಧಾರಗಳಲ್ಲಿ ನಿತೀಶ್ ಮತ್ತು ನಾಯ್ಡು ಕೈವಾಡ ಇದ್ದೇ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಮೋದಿ ತಮ್ಮ ಕಾರ್ಯವಿಧಾನ ಬದಲಿಸಿದಂತೆ ಇಂಡಿಯಾ ಒಕ್ಕೂಟದ ನಾಯಕರು ತಮ್ಮ ಕಾರ್ಯತಂತ್ರವನ್ನು ಬದಲಿಸಬೇಕು. ಈಗ ಕಾಂಗ್ರೆಸ್ ಅಧಿಕೃತ ಪ್ರತಿಪಕ್ಷವಾಗಲಿದೆ. ಅದರಿಂದ ಆಡಳಿತದಲ್ಲಿ ಪ್ರತಿ ಹಂತದಲ್ಲೂ ಭಾಗವಹಿಸುವ ಅವಕಾಶ ಲಭಿಸಲಿದೆ. ಹಿಂದೆ ಇದ್ದಂತೆ ದೂರ ಉಳಿಯಲು ಬರುವುದಿಲ್ಲ. ಪ್ರತಿಹೆಜ್ಜೆಯನ್ನೂ ಗಂಭೀರವಾಗಿ ಪರಿಶೀಲಿಸಿ ಮುನ್ನಡೆಯಬೇಕು. ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಧಾನವಾಗಿದ್ದರೂ ಬಿಜೆಪಿ ಸ್ಥಳೀಯ ಪಕ್ಷಗಳನ್ನು ಹಿಡಿದುಕೊಂಡು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬುದು ಲೋಕಸಭೆ ಚುನಾವಣೆ ತೋರಿಸಿಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಇಂಡಿಯಾ ಒಕ್ಕೂಟ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಉತ್ತರ ಭಾರತದಲ್ಲಿ ಪ್ರಯತ್ನಿಸುತ್ತಿದೆ. ದಕ್ಷಿಣ ಭಾರತದಲ್ಲಿ ಹೊಸ ಗಾಳಿ ಬೀಸುತ್ತಿರುವುದಂತೂ ಸ್ಪಷ್ಟ.
ಸಂಸತ್ತು ಆರಂಭಗೊಳ್ಳುತ್ತಿದ್ದಂತೆ ರಾಜ್ಯಗಳಿಗೆ ಸಿಗುತ್ತಿರುವ ಪಾಲಿನ ಬಗ್ಗೆ ತೀವ್ರ ಚರ್ಚೆ ನಡೆಯಲಿದೆ. ಮೊದಲಿನಿಂದಲೂ ಕೇಂದ್ರ ಮತ್ತು ರಾಜ್ಯಗಳ ಆರ್ಥಿಕ ಸಂಬಂಧ ವಿವಾದಿತ ವಿಷಯವಾಗೇ ಉಳಿದಿದೆ. ಕೇಂದ್ರ ತನ್ನ ಹಿಡಿತವನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ರಾಜ್ಯಗಳು ಹೆಚ್ಚಿನ ಅನುದಾನ ಬೇಡುವುದನ್ನು ಬಿಟ್ಟುಕೊಡುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ರಾಜ್ಯದ ಸಂಬಂಧ ಪ್ರಮುಖ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ನಿತೀಶ್ ಮತ್ತು ನಾಯ್ಡು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇಬ್ಬರೂ ಆಡಳಿತದಲ್ಲಿ ನಿಪುಣರು. ತಮ್ಮ ತಮ್ಮ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುವುದಂತೂ ನಿಶ್ಚಿತ.